ಬಳ್ಳಾರಿ: ಭಾರತ ದೇಶವ. ವಿಶ್ವದಲ್ಲಿನ 196 ರಾಷ್ಟ್ರಗಳಲ್ಲಿ ಭಾರತವು ಸದೃಢ ಪ್ರಜಾಪ್ರಭುತ್ವವನ್ನು ಹೊಂದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸದ ಈ.ತುಕಾರಾಂ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಮಾನವ ಸರಪಳಿ ನಿರ್ಮಾಣದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಮೌಲ್ಯ ಮತ್ತು ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ಬೃಹತ್ ಮಾನವ ಸರಪಳಿ ಆಯೋಜಿಸಲಾಗಿದೆ. ಮುಂಬರುವ ಪೀಳಿಗೆಯ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು. ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪ್ರತಿಯೊಬ್ಬರೂ ಸಹೃದಯದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ, ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಭಾರತ ಸ್ವಾತಂತ್ರ್ಯ ಪಡೆದ ನಂತರ ಮಹಾನೀಯರ ಜ್ಞಾನ ಮತು ಶ್ರಮದಿಂದ ಬೃಹತ್ ಸಂವಿಧಾನ ದೊರೆತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶವನ್ನು ಮುನ್ನಡೆಸುತ್ತಾ 1950, ಜನವರಿ 26 ರಿಂದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೇವೆ ಎಂದರು. ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರಚಿಸಲು ಭಾರತದ ಪ್ರಜೆಗಳಾದ ನಾವು ನಮ್ಮ ಸಾಧನೆ ಮತ್ತು ಜವಾಬ್ದಾರಿಗಳನ್ನು ತುಲನೆ ಮಾಡಿಕೊಂಡು, ಸುಭದ್ರ ದೇಶ ಕಟ್ಟುವಲ್ಲಿ ಯೋಚನೆ ಹಾಗೂ ಯೋಜನೆಗಳ ಕುರಿತು ಅವಲೋಕನ ಮಾಡಬೇಕು ಎಂದು ತಿಳಿಸಿದರು. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ನಿರ್ಮಾಣ ಗೊಂಡಿದ್ದು, ನಾಗರಿಕರು ದೇಶಪ್ರೇಮ ಹೆಚ್ಚಿಸಿಕೊಂಡು ಸಮ ಸಮಾಜ ನಿರ್ಮಿಸಲು ಪಣತೊಡಬೇಕು ಎಂದು ಹೇಳಿದರು.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ರಾಜ್ಯ ಸರ್ಕಾರ ವಿಶಿಷ್ಟವಾಗಿ ಆಚರಿಸುತ್ತಲಿದ್ದು, ಏಕತೆ-ಸಮಾನತೆ ಸಾರವನ್ನು ಸಾರುವುದ್ದಕ್ಕಾಗಿ ಬೃಹತ್ ಮಾನವ ಸರಪಳಿ ಆಯೋಜಿಸಲಾಗಿದೆ ಎಂದರು. ಭಾರತ ದೇಶದ ಸಂವಿಧಾದ ಬಲಿಷ್ಠ ಮತ್ತು ಸುಭದ್ರತೆಯಿಂದ ಕೂಡಿದ್ದು, ಪ್ರಜಾಪ್ರಭುತ್ವ ಮೇಲೆ ನಂಬಿಕೆಯಿಟ್ಟು ಸುರಕ್ಷಿತವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಲಿದೆ ಎಂದು ಹೇಳಿದರು. ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಲೋಕೇಶ್ ಕುಮಾರ್ ಅವರು ಮಾತನಾಡಿ, ಭಾರತ ದೇಶವು ಅತ್ಯಂತ ದೊಡ್ದಸಂವಿಧಾನ ಹೊಂದಿದ್ದು, ಈ ದಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸಂಭ್ರಮವಾಗಿಗೆ ಆಚರಿಸಲಾಗುತ್ತಿದೆ ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಮುಂಬರುವ ದಿನಗಳಲ್ಲಿ ಸಮಾಜದ ಉತ್ತಮ ಜನಪ್ರತಿನಿಧಿ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಸ್ವಾತ್ಯಂತ್ರ್ಯದ ಸತ್ಯತೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಜನ ಸಾಮಾನ್ಯರು ಅರಿಯಬೇಕಿದೆ ಎಂದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಏರ್ಪಡಿಸಲಾದ ಬೃಹತ್ ಮಾನವ ಸರಪಳಿ ನಿರ್ಮಾಣದಲ್ಲಿ ವಿದ್ಯಾರ್ಥಿಗಳು, ಸಾವಜನಿಕರು, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಯವರು ಭಾತೃತ್ವ, ಸಮಾನತೆ, ಏಕತೆ ಮತ್ತು ಮುಕ್ತ ಭಾವದಿಂದ ಪ್ರತಿಯೊಬ್ಬರೂ ಪಾಲ್ಗೊಂಡು ದೇಶಪ್ರೇಮ ಮೆರೆದಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ.ಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರವು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ವಿದ್ಯಾರ್ಥಿಗಳೂ ಸೇರಿದಂತೆ 25 ಲಕ್ಷಕ್ಕೂ ಹೆಚ್ಚಿನ ನಾಗರೀಕರೊಂದಿಗೆ ಒಟ್ಟು 2,500 ಕಿ.ಮಿ ಉದ್ದದ ಬೃಹತ್ ಮಾನವ ಸರಪಳಿ ನಿರ್ಮಾಣದ ಜೊತೆಗೆ 10 ಲಕ್ಷ ಸಸಿಗಳನ್ನು ನೆಟ್ಟು ವಿನೂತನ ಹೆಜ್ಜೆಯಿಟ್ಟಿದೆ ಎಂದರು.
ಜಿಲ್ಲೆಯಲ್ಲಿ 32 ಸಾವಿರ ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ 45 ಕಿ.ಮಿ ಉದ್ದದ ಮಾನವ ಸರಪಳಿ ನಿರ್ಮಿಸಿ, 2 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ಪ್ಜಾಪ್ರಭುತ್ವದ ಶುಭ ಸಂದೇಶ ಸಾರಲು ಪ್ರತಿಬ್ಬರೂ ಸಕ್ರೀಯವಾಗಿ ಪಾಲ್ಗೊಂಡಿದ್ದರಿಂದಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಾಗೂ ಭಾರತ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.
ರಾಷ್ಟ್ರ ದ್ವಜ ಪ್ರೇಮ ಕಾರ್ಯಕ್ರಮದಲ್ಲಿ 100 ಮೀಟರ್ ಉದ್ದದ 10 ರಾಷ್ಟ್ರದ್ವಜಗಳನ್ನು ವಿದ್ಯಾರ್ಥಿಗಳು ಹಿಡಿದೂ ದೇಶಪ್ರೇಮ ಮೆರೆದರು.ಅಕ್ಷರ ವಿನ್ಯಾಸ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಬಳ್ಳಾರಿ” ಎನ್ನುವ ಅಕ್ಷರ ವಿನ್ಯಾಸವು ಕಾರ್ಯಕ್ರಮದ ಆಕರ್ಷಣೆಯಾಗಿತ್ತು.ಪರಿಸರ ಕಾಳಜಿ ಪರಿಸರ ಸಂರಕ್ಷಣೆ ಹಾಗೂ ಗಿಡ ಮರಗಳ ಬೆಳೆಸುವ ನಿಟ್ಟಿನಲ್ಲಿ ಬೃಹತ್ ಮಾನವ ಸರಪಳಿ ಮಾರ್ಗ ಮಧ್ಯದ ಸ್ಥಳಗಳಲ್ಲಿ 2 ಸಾವಿರ ಸಸಿಗಳನ್ನು ನೆಡಲಾಯಿತು. ಹಬ್ಬದ ವಾತಾವರಣ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಕಲರವವು ಹಬ್ಬದ ವಾತಾವರಣ ಸೃಷ್ಠಿಸಿ, ನೆರೆದಿದ್ದವರು ಮನಸೂರೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ವಿ.ಜೆ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಂಘಟನೆಯ ಪದಾಧಿಕಾರಿಗಳು, ಎನ್‌ಜಿಓ ಸಂಸ್ಥೆಯ ನೌಕರರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.