ಬಳ್ಳಾರಿ,ಸೆ.24
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ನಗರದ ಡಾ.ರಾಜ್‌ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಟ್ಟದಲ್ಲಿನ ಪ್ರವಾಸೋದ್ಯಮ ಇಲಾಖೆಯ ತಾತ್ಕಾಲಿಕ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅ.08ರೊಳಗಾಗಿ ಸಲ್ಲಿಸಬೇಕು.
*ಬೇಕಾದ ದಾಖಲೆಗಳು:*
ಹತ್ತನೇ ತರಗತಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪೂರ್ಣಗೊಂಡಿದ್ದಲ್ಲಿ ಪದವಿ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸ ಸ್ಥಳ ಪ್ರಮಾಣ ಪತ,್ರ ಇತ್ತೀಚಿನ ಭಾವಚಿತ್ರ.
*ಅರ್ಜಿ ಸಲ್ಲಿಸುವ ಪ್ರಕ್ರಿಯೆ:*
ಅರ್ಜಿ ನಮೂನೆ ರೂ.50 ಗೆ ದೊರೆಯಲಿದ್ದು, ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ಭರ್ತಿ ಮಾಡಬೇಕು. ಅಪೂರ್ಣ ಹಾಗೂ ಅಸ್ಪಷ್ಟ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ನಿಗಧಿಪಡಿಸಿದ ಅರ್ಹತೆ ಹಾಗೂ ಮಾನದಂಡಗಳನ್ನು ಪೂರೈಸಿದ 50 ಅಭ್ಯರ್ಥಿಗಳಿಗೆ ಪಿಯುಸಿ (10+2) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಶಿಫಾರಸ್ಸು ಮಾಡಲಾಗುವುದು.
ಕೇಂದ್ರ ಕಚೇರಿಯಿಂದ ಅನುದಾನ ಬಿಡುಗಡೆಯಾದ ನಂತರ ತರಬೇತಿಗೆ ನಿಯೋಜಿಸಲಾಗುವುದು. ಅರ್ಜಿಯನ್ನು ನಿಗಧಿತ ನಮೂನೆಯಲ್ಲಿಯೇ ಸಲ್ಲಿಸಬೇಕು.
*ಅರ್ಹತೆ:*
ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿರಬೇಕು. ಕನಿಷ್ಟ ವಯೋಮಿತಿ 21 ವರ್ಷಗಳು, ಗರಿಷ್ಟ 45 ವರ್ಷ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಧವಾ ಮಹಿಳೆಯರಿಗೆ 48 ವರ್ಷಗಳವರೆಗೆ ವಿನಾಯಿತಿ ಇರುತ್ತದೆ.
ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿರಬಾರದು. ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಯಲ್ಲಿರಬಾರದು. ಪ್ರವಾಸಿ ಮಾರ್ಗದರ್ಶಿ ತರಬೇತಿ ಪಡೆದ ನಂತರ ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರವಾಸೋದ್ಯಮ ಇಲಾಖೆಯು ಕಾಲಕಾಲಕ್ಕೆ ನೀಡುವ ನಿರ್ದೇಶನ ಹಾಗೂ ಆದೇಶಗಳಿಗೆ ಬದ್ದರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಅಥವಾ ದೂ.08394-295640 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.