ಶಿವಪುರಾಣದ ಪ್ರಕಾರ ಸ್ಮಶಾನವಾಸಿ ಶಿವನು ಚಂದ್ರಶೇಖರನ ರೂಪದಲ್ಲಿ ಹಿಮವಂತ ಮತ್ತು ಮೇನಾ ದೇವಿಯರ ಮಗಳಾದ ಪಾರ್ವತಿಯನ್ನು ವರಿಸಲು ಬರುತ್ತಾನೆ. ಈ ಚಂದ್ರಶೇಖರನ ಶಕ್ತಿ ಸ್ವರೂಪಿಣಿಯೇ ಚಂದ್ರ ಘಂಟ ದೇವಿ.
ನವರಾತ್ರಿಯ ಮೂರನೇ ದಿನ ದೇವಿಯನ್ನು ಚಂದ್ರಘಂಟಾ ರೂಪದಲ್ಲಿ ಪೂಜಿಸುತ್ತಾರೆ. ಮನುಷ್ಯನ ವ್ಯಕ್ತಿತ್ವದಲ್ಲಿ ಸಮತೋಲನ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಶಕ್ತಿಯನ್ನು ಪ್ರತಿಪಾದಿಸುವ ಚಂದ್ರ ಘಂಟಾ ದೇವಿಯು ಋಣಾತ್ಮಕ ವಿಚಾರಗಳನ್ನು ನಮ್ಮ ಜೀವನದಿಂದ ಹೊರಗೋಡಿಸಿ ಮಾನಸಿಕ ಶಾಂತಿಯನ್ನು ಕಾಯಲು ಕಾರಣಳಾಗುತ್ತಾಳೆ. ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಭಯದಿಂದ ಮುಕ್ತರಾಗಬಹುದು ಮತ್ತು ಆಕೆ ಪಾಪ ವಿನಾಶಿನಿ ಎಂಬುದು ಭಕ್ತರ ನಂಬಿಕೆಯಾಗಿದೆ.
ಗಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿರುವ, ಚಿನ್ನದ ಮೈಬಣ್ಣವನ್ನು ಹೊಂದಿರುವ ಚಂದ್ರ ಘಂಟಾ ದೇವಿಯು ಧೈರ್ಯ ಹಾಗೂ ಶೌರ್ಯದ ಸಂಕೇತವಾದ ಸಿಂಹದ ಮೇಲೆ ಕುಳಿತಿರುತ್ತಾಳೆ.
ಚಂದ್ರಘಂಟಾ ದೇವಿಯು 10 ಕೈಗಳನ್ನು ಹೊಂದಿದ್ದು, ಪ್ರತಿ ಕೈಯಲ್ಲಿಯೂ ತ್ರಿಶೂಲ ಗದೆ ಕಮಲ ಬಿಲ್ಲು ಬಾಣ ಕಮಂಡಲ ಖಡ್ಗ ಜಪಮಾಲೆ ಮತ್ತು ಗಂಟೆಯನ್ನು ಹಿಡಿದುಕೊಂಡಿದ್ದಾಳೆ. ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿರುವ ಆಕೆಯ ಒಂದು ಕೈಯು ಅಭಯಮುದ್ರೆಯನ್ನು ಹೊಂದಿದ್ದು ಭಕ್ತರನ್ನು ಆಶೀರ್ವದಿಸುವ ಆಕೆ ದುಷ್ಟರನ್ನು ಶಿಕ್ಷಿಸಲು ಆಯುಧಗಳನ್ನು ಹಿಡಿದಿದ್ದರೂ ಶಿಷ್ಟರನ್ನು ರಕ್ಷಿಸುವ ದಯೆ, ಸಹಾನುಭೂತಿ ಮತ್ತು ತನ್ನ ಮಕ್ಕಳ ಮೇಲೆ ಕಾಳಜಿಗಳು ವ್ಯಕ್ತವಾಗುವ ಮುಖಭಾವವನ್ನು ಹೊಂದಿದ್ದಾಳೆ. ಬೂದು ಬಣ್ಣವನ್ನು ಇಷ್ಟಪಡುವ ಚಂದ್ರಗಂಟ ದೇವಿಯನ್ನು ಕೌಮಾರಿ ಎಂದು ಕೂಡ ಕರೆಯುತ್ತಾರೆ.
ಪಿಂಡಜ ಪ್ರವರಾರೂಢ ಚಂಡಕೊ ವಾಸ್ತ್ರ ಕೈಯುತಾ
ಪ್ರಸಾದಂ ತನುತೆ ಮಹ್ಯಾಂ ಚಂದ್ರ ಘಂಟೇತಿ ವಿಶ್ರುತಾ
ಪಾರ್ವತಿ ದೇವಿಯು ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಮದುವೆಯಾಗಲು ಸಿದ್ದಳಾಗುತ್ತಾಳೆ.ಶಿವನ ಭಯಂಕರ ರೂಪವನ್ನು ನೋಡಿ ಪಾರ್ವತಿಯ ತಾಯಿ ಮೇನಾ ದೇವಿಯ ಮೂರ್ಚೆ ಹೋಗುತ್ತಾಳೆ. ಆಗ ಪಾರ್ವತಿಯು ಶಿವನಿಗೆ ಸೌಮ್ಯ ಸ್ವರೂಪವನ್ನು ಧರಿಸುವಂತೆ ಕೇಳಿಕೊಂಡು ತಾನು ಚಂದ್ರಘಂಟಾ ದೇವಿಯ ರೂಪದಲ್ಲಿ ವಧುವಾಗಿ ಶಿವನೊಂದಿಗೆ ವಿವಾಹವಾಗುತ್ತಾಳೆ.
ವಧುವಿನ ರೂಪದಲ್ಲಿ ಕಂಗೊಳಿಸುವ ಚಂದ್ರಘಂಟಾ ದೇವಿಯನ್ನು ಪೂಜಿಸಿ ಜೀವನದಲ್ಲಿ ಯಶಸ್ಸು ಮತ್ತು ಮನಃಶಾಂತಿಯನ್ನು ಪಡೆಯಲು ಈ ಮಂತ್ರವನ್ನು ಎಂಟು ಸಲ ಪಠಿಸಬೇಕು.
ಯಾ ದೇವಿ ಸರ್ವಭೂತೇಶು ನಿದ್ರಾ ರೂಪೇಣ ಸಂಸ್ಥಿತ
ನಮಸ್ತಸ್ಸ್ಯೇ ನಮಸ್ತಸ್ಯೆ ನಮಸ್ತಸ್ಸ್ಯೇ ನಮೋ ನಮಃ
ಓಂ ಹ್ರೀಂ ಶ್ರೀ0 ಚಂದ್ರ ಘಂಟಾಯೇ ನಮಃ
ದೇವಿಯ ಕೃಪೆಗೆ ಪಾತ್ರರಾಗಲು ಚಂದ್ರಘಂಟ ದೇವಿಯನ್ನು ಪೂಜಿಸಿ.
ನವರಾತ್ರಿ ಹಬ್ಬದ ಮೂರನೇ ದಿನದ ಶುಭಾಶಯಗಳು
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್