Ad image

ಹೆಣ್ಣು ಮಗಳ ಯಶಸ್ಸಿನ ಹಿಂದಿನ ರಹಸ್ಯ..

Vijayanagara Vani
ಹೆಣ್ಣು ಮಗಳ ಯಶಸ್ಸಿನ ಹಿಂದಿನ ರಹಸ್ಯ..

ನಿಮ್ಮ ಯಶಸ್ಸಿನ ಗುಟ್ಟೇನು? ಎಂದು ಯಶಸ್ವಿ ಮಹಿಳೆಯೊಬ್ಬರನ್ನು ಒಂದು ಬಾರಿ ನಾನು ಪ್ರಶ್ನಿಸಿದೆ.

ನಸುನಕ್ಕ ಆಕೆ ಹೀಗೆ ಉತ್ತರಿಸಿದಳು…
ನನ್ನ ಯಶಸ್ಸಿನ ಪಯಣ ಆರಂಭವಾಗಿದ್ದು ಹೀಗೆ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದನ್ನು ನಾನು ಬಿಟ್ಟಾಗಲೇ ನನಗೆ ಮೊದಲ ಯಶಸ್ಸು ದೊರೆಯಿತು. ಬೇರೆಯವರು ನನ್ನ ಕುರಿತು ಮಾತನಾಡುವುದರ ಕುರಿತು ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಾಗಲೇ ನಾನು ಮಾನಸಿಕವಾಗಿ ಸದೃಢಳಾದೆ. ದೈನಂದಿನ ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ಒದ್ದಾಡುವುದನ್ನು ಬಿಟ್ಟು ನಾನು ಓರ್ವ ವ್ಯಕ್ತಿ, ನನಗೆ ನನ್ನದೇ ಆದ ವ್ಯಕ್ತಿತ್ವವಿದ್ದು ಆಸೆ ಆಕಾಂಕ್ಷಿಗಳು ಕೂಡ ಇವೆ ನನಗೂ ಕೂಡ ಒಂದು ಬದುಕಿದ್ದು, ನನಗೆ ಬೇಕಾದಂತೆ ಜೀವಿಸುವ ಹಕ್ಕು ನನಗಿದೆ. ಬದುಕಿನದ್ದಕ್ಕೂ ಗಂಡ ಮನೆ ಮಕ್ಕಳು ಅತ್ತೆ ಮಾವ ಸಂಬಂಧಿಗಳು ಸಮಾರಂಭಗಳು ಎಂದು ಕಳೆದು ಜೀವನದ ಅಂತಿಮ ದಿನಗಳಲ್ಲಿ ನನಗಾಗಿ ಏನೂ ಮಾಡಲಾಗಲಿಲ್ಲ ಎಂಬ ವ್ಯಥೆಯನ್ನು ಹೊತ್ತು ಬಾಳಲು ನಾನು ತಯಾರಿಲ್ಲ ಎಂಬುದನ್ನು ಮೆದುವಾಗಿ ಮತ್ತು ಸ್ಪಷ್ಟವಾಗಿ ನನ್ನ ಪತಿ ಮತ್ತು ಮನೆಯವರಿಗೆ ಅರುಹಿ ಅವರು ನನ್ನ ನಿರ್ಧಾರಕ್ಕೆ ನಿಧಾನವಾಗಿಯಾದರೂ ಒಪ್ಪಿಗೆ ಮತ್ತು ಬೆಂಬಲವನ್ನು ಸೂಚಿಸಿದಾಗ ನಾನು ಯಶಸ್ಸಿನ ಎರಡನೆಯ ಮೆಟ್ಟಿಲನ್ನು ಏರಿದೆ.

ಮನೆಯಲ್ಲಿನ ಹಿರಿಯರೊಂದಿಗೆ ಅಸಮಾಧಾನವನ್ನು ತೊರೆದೆ, ಮನೆಯವರು ನನ್ನನ್ನು ಗಮನಿಸಲಿ ಎಂಬ ಆಶಯವನ್ನು ತೊರೆದೆ ಮನೆಯ ಎಲ್ಲಾ ಸದಸ್ಯರ ಅವಶ್ಯಕತೆಗಳನ್ನು ನಾನು ಪೂರೈಸಲೇಬೇಕು ಎಂಬ ಹಠದಿಂದ ಒತ್ತಡಕ್ಕೊಳಗಾಗುವುದನ್ನು ನಾನು ತೊರೆದಾಗ ನನ್ನನ್ನು ನಿರ್ಲಕ್ಷಿಸುವ ಜನರ ಮುಂದೆ ನನ್ನ ಹಕ್ಕುಗಳಿಗಾಗಿ ಕೂಗಾಡುವುದನ್ನು ಬಿಟ್ಟಾಗ, ಎಲ್ಲರನ್ನೂ ಸಂತೃಪ್ತಗೊಳಿಸಲು ಒದ್ದಾಡುವುದನ್ನು ಬಿಟ್ಟಾಗ ನನಗೆ ಯಶಸ್ಸಿನ ರುಚಿ ದೊರೆಯಿತು. ಅದು ನನ್ನ ಯಶಸ್ಸಿನ ಮೂರನೇ ಮೆಟ್ಟಿಲು.

ನನ್ನದೇ ಸ್ನೇಹಿತರ ವಲಯದ ಜನರು ನಾನು ಮಾಡುತ್ತಿರುವುದು ತಪ್ಪು ಎಂದು ವಾದಿಸಿದಾಗ ನಕ್ಕು ಮುಂದೆ ಸಾಗುವುದನ್ನು ಕಲಿತೆ, ಗೃಹಿಣಿಯಾಗಿ ನನ್ನ ಕರ್ತವ್ಯಗಳನ್ನು ನಾನು ಮರೆತಿರುವೆ ಎಂದು ನನ್ನ ಬೆನ್ನ ಹಿಂದಿನಿಂದ ಅವಹೇಳನ ಮಾಡಿ ಅದಕ್ಕೂ ನಾನು ಬಗ್ಗದೇ,ನನ್ನನ್ನು ಕೆಣಕಿ ಜಗಳ ಮಾಡಬೇಕೆಂಬುದೇ ಅವರ ಉದ್ದೇಶ ಎಂದು ತಿಳಿದು ಕೂಡ ಸುಮ್ಮನಿರುವುದನ್ನು ಕಲಿತೆನಲ್ಲ ಅದು ನನ್ನ ಯಶಸ್ಸಿಗೆ ಕಾರಣ.

ನಾನು ಬದುಕಿನಲ್ಲಿ ನನ್ನ ಗುರಿಯತ್ತ ನೋಟಹರಿಸಿದೆ ನನ್ನ ಕನಸು, ನನ್ನ ಯೋಜನೆಗಳು ಮತ್ತು ನನ್ನ ಜೀವನದ ಲಕ್ಷ್ಮವನ್ನಾಗಿಸಿದ್ದು ನನ್ನ ಗುರಿಯನ್ನೇ… ಯಾವ ದಿನ ನಾನು ಸಣ್ಣಪುಟ್ಟ ಸಂಗತಿಗಳನ್ನು ಜಗಳಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದೆನೋ… ಆ ದಿನವೇ ನಾನು ನನ್ನ ಗುರಿಯತ್ತ ಮೊದಲ ಹೆಜ್ಜೆ ಇರಿಸಿದೆ.

ಕೆಲ ವಿಷಯಗಳು ಜಗಳ ಮಾಡಲು ಮತ್ತು ಸಮಯ ವ್ಯಯಿಸಲು ಯೋಗ್ಯವಾಗಿರುವುದಿಲ್ಲ. ಅಂತಹ ಯೋಗ್ಯವಲ್ಲದ ವಿಷಯಗಳ ಚರ್ಚೆ ಮಾಡಿ ನಮ್ಮ ಸಮಯ ಮತ್ತು ಸಾಮರ್ಥ್ಯವನ್ನು ಹಾಳು ಮಾಡಿಕೊಳ್ಳಬಾರದು…. ಅದುವೇ ನನ್ನ ಯಶಸ್ಸಿನ ಗುಟ್ಟು ಎಂದು ಆಕೆ ಅತ್ಯಂತ ಶಾಂತವಾಗಿ ಹೇಳಿದರು.

ಹೌದಲ್ಲವೇ ಸ್ನೇಹಿತರೆ?
ಎಷ್ಟೋ ಬಾರಿ ಮನೆಯ ಜನ ತಮ್ಮ ದಿನಚರಿಗೆ ಎಲ್ಲಿ ಕುತ್ತು ಬರುತ್ತದೆಯೋ ಎಂದು, ಸಾಮಾಜಿಕ ವಲಯದಲ್ಲಿ ತಮ್ಮ ಬಗ್ಗೆ ತಪ್ಪು ತಿಳಿಯಬಹುದು ಎಂಬ ಭಯದಿಂದ ಮನೆಯವರ ತಿರಸ್ಕಾರ ಮತ್ತು ಉಪೇಕ್ಷಗಳಿಗೆ ಗುರಿಯಾಗುವೆವು ಎಂಬ ಕಾರಣದಿಂದ, ಪತಿಯ ಅಸಹನೆ ಮತ್ತು ಕಿರಿಕಿರಿಯನ್ನು ಸಹಿಸಲಾರದೆ ಬಹುತೇಕ ಮಹಿಳೆಯರು ಏನನ್ನಾದರೂ ಸಾಧಿಸಬೇಕು ಎಂಬ ಆಸೆಯನ್ನು ತೊರೆಯುತ್ತಾರೆ. ತಿನ್ನುಣ್ಣಲು ನಮಗೇನು ಕೊರತೆ ಇದೆ, ದುಡಿದು ಹಾಕಲು ನಾನು ಗಟ್ಟಿ ಇರುವಾಗ ನೀನೇಕೆ ಹೊರಗೆ ಹೋಗಿ ದುಡಿಯಬೇಕು ಎಂಬ ಪತಿಯ, ಅತ್ತೆ ಮಾವರ,ಸಂಬಂಧಿಗಳ ಮಾತುಗಳಿಗೆ ಕವಲೆತ್ತು ಗೋಣು ಹಾಕಿದಂತೆ ತಲೆಯಾಡಿಸುವುದನ್ನು ಬಿಟ್ಟು ಆಕೆಗೆ ಅನ್ಯ ಮಾರ್ಗ ಇರುವುದಿಲ್ಲ. ಗಂಡ ದುಡಿದು ತಂದು ಹಾಕಿದ್ದನ್ನು ಮಾಡಿ ಹಾಕಿ ತೃಪ್ತಿಪಟ್ಟುಕೊಂಡರೆ ಸಾಕು ಎಂಬ ಅವರ ಮಾತುಗಳು ಆಕೆಯಲ್ಲಿ ಹೋಗಲಿ ಬಿಡು ಕುಟುಂಬದ ನೆಮ್ಮದಿಗಾಗಿ ನಾನು ತ್ಯಾಗ ಮಾಡಿದೆ ಎಂಬ ಭಾವವನ್ನು ಮೂಡಿಸುತ್ತದೆ.

ಸ್ವಾರ್ಥವೇ ತುಂಬಿರುವ ಈ ಪ್ರಪಂಚದಲ್ಲಿ ಮನೆಯ ಸದಸ್ಯರು ಹೆಣ್ಣು ಮಕ್ಕಳ ತೊಂದರೆಗಳನ್ನು ಗಮನಿಸುವುದಿಲ್ಲ ಇಲ್ಲವೇ ಗೌಣ ಎಂಬಂತೆ ವರ್ತಿಸುತ್ತಾರೆ. ತನ್ನೆಲ್ಲ ಮನೆ ಕೆಲಸಗಳನ್ನು ಪೂರೈಸಿ ತುಸು ಕಾಲು ಚಾಚಿ ಕುಳಿತರೆ ಮೂರು ಹೊತ್ತು ಮೊಬೈಲ್ ನಲ್ಲಿ ಮುಳುಗಿರುತ್ತಾಳೆ ಎನ್ನುವರು. ಮನೆಯವರಿಗೆ ರಜೆ ಇದ್ದರೆ ಆಕೆಗೆ ಮತ್ತಷ್ಟು ಕೆಲಸದ ಭಾರ. ಎಲ್ಲರ ಇಷ್ಟಾನಿಷ್ಠಗಳನ್ನು ಪೂರೈಸಿ ತನಗೊಂದಿಷ್ಟು ವಿರಾಮವನ್ನು ಹೊಂಚಲು ಆಗದ ಪರಿಸ್ಥಿತಿ ಗೃಹಿಣಿಯರಿಗೆ. ಇದನ್ನೇನೋ ಸಹಿಸಿಯಾರು! ಆದರೆ ಇದರ ಜೊತೆಗೆ ಮನೆಯಲ್ಲಿ ಇದ್ದು ಏನು ಮಾಡ್ತೀಯಾ ಎಂಬ ತಾತ್ಸಾರ ಅವರನ್ನು ಕೀಳರಿಮೆಗೆ ದೂಡುತ್ತದೆ. ಇದು ಆಕೆಯಲ್ಲಿ ಏನನ್ನಾದರೂ ಮಾಡಬೇಕೆಂಬ ಛಲವನ್ನು ಉದ್ದೀಪಿಸುತ್ತದೆ ಇಲ್ಲವೇ ಹತಾಶೆಯನ್ನು ಹುಟ್ಟಿಸಿ ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ.

ಆದರೆ ಅದೇ ಕುಟುಂಬದ ಸದಸ್ಯರು ಆಕೆ ಒಂದೊಳ್ಳೆ ಸರ್ಕಾರಿ ನೌಕರಿಯಲ್ಲಿ ಇಲ್ಲವೇ ಬಹು ರಾಷ್ಟ್ರೀಯ ಕಂಪನಿಯಲ್ಲಿ ಆಕೆ ಕಾರ್ಯನಿರ್ವಹಿಸುತ್ತಿದ್ದರೆ ಕೆಲಸ ಮಾಡುವುದು ಬೇಡ ಎಂದು ಹೇಳುವುದಿಲ್ಲ ಎಂಬುದು ಸೋಜಿಗದ ಸಂಗತಿ.

ಮತ್ತೆ ಕೆಲ ಮಹಿಳೆಯರು ಮನೆಯವರನ್ನು ಒಪ್ಪಿಸಿ ಇಲ್ಲವೇ ವಿರೋಧಿಸಿ ತಾವಂದುಕೊಂಡ ಗುರಿಯನ್ನು ಸಾಧಿಸಲು ಇನ್ನಿಲ್ಲದಂತೆ ಪ್ರಯತ್ನಪಟ್ಟು ಯಶಸ್ವಿಯಾಗುತ್ತಾರೆ. ಅಂತಹ ಮಹಿಳೆಯರು ಎಷ್ಟೋ ಬಾರಿ ಮನೆಯವರ ಕುಹಕದ ಮಾತುಗಳಿಗೆ ಕಿವುಡರಾಗಿ, ಸಮಾಜದ ಕೆಂಗಣ್ಣಿಗೆ ಅಂಧರಾಗಿ, ಸ್ನೇಹಿತರ ಮತ್ತು ಬಂಧು ಬಾಂಧವರ ಅವಹೇಳನಕ್ಕೆ ಮೂಕರಾಗಿ ತಮ್ಮ ಸಾಧನೆಯ ಮೂಲಕವೇ ಉತ್ತರಿಸುತ್ತಾರೆ. ಅಂತಹ ಮಹಿಳೆಯರ ಆತ್ಮಬಲ, ತಾಳ್ಮೆ, ಸಾಧಿಸುವ ಛಲ ಮತ್ತು ಧೀಶಕ್ತಿಗೆ ನನ್ನ ನಮನಗಳು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";