Ad image

ಜಿಲ್ಲೆಯಾದ್ಯಂತ 60 ದಿನ ತಂಬಾಕು ಮುಕ್ತ ಯುವ ಅಭಿಯಾನ ಜಿಲ್ಲಾಧಿಕಾರಿ: ದಿವ್ಯ ಪ್ರಭು

Vijayanagara Vani
ಜಿಲ್ಲೆಯಾದ್ಯಂತ 60 ದಿನ ತಂಬಾಕು ಮುಕ್ತ ಯುವ ಅಭಿಯಾನ ಜಿಲ್ಲಾಧಿಕಾರಿ: ದಿವ್ಯ ಪ್ರಭು

ಧಾರವಾಡ  ಅಕ್ಟೋಬರ್ 07; ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಯುವಕರು ತಂಬಾಕು ಉತ್ಪನ್ನಗಳಿಗೆ, ಬೀಡಿ ಸಿಗರೇಟ ಸೇವನೆಗೆ ಅಂಟಿಕೊಳ್ಳದಂತೆ ನಗರಗಳಲ್ಲಿ, ಗ್ರಾಮಗಳಲ್ಲಿ ಹೆಚ್ಚಿನ ಅರಿವು ಜಾಗೃತಿ ಕಾರ್ಯಕ್ರಮ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಮುಕ್ತ ಯುವ ಅಭಿಯಾನವನ್ನು ಜಿಲ್ಲೆಯಾದ್ಯಂತ 60 ದಿನಗಳವರೆಗೆ ಆಚರಿಸಲಾಗುವುದು. 160 ಶಾಲೆ ಹಾಗೂ 20 ಗ್ರಾಮಗಳನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು, ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಇಂದಿನ ದಿನಗಳಲ್ಲಿ ಯುವ ಸಮೂಹ ಹೆಚ್ಚು ತಂಬಾಕು ಸೇವನೆ, ಬೀಡಿ, ಸಿಗರೇಟು, ಗುಟ್ಕಾ ಚಟಗಳಿಗೆ ಅಂಟಿಕೊಳ್ಳುತ್ತಿದ್ದು, ಗ್ರಾಮ ಸಭೆಗಳಲ್ಲಿ, ಪಾಲಕರ ಸಭೆಯಲ್ಲಿ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಸಹಯೋಗದಲ್ಲಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳ ತಂಬಾಕು ಮುಕ್ತ ಶಾಲೆಯೆಂದು ಘೋಷಿಸಿದ ಬಗ್ಗೆ ಕಡ್ಡಾಯವಾಗಿ ಫಲಕ ಅಳವಡಿಸಬೇಕು. 20 ತಂಬಾಕು ಮುಕ್ತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಗ್ರಾಮದ ಹಿರಿಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಲಕರೊಂದಿಗೆ ಮಹಿಳಾ ಮಕ್ಕಳ ಇಲಾಖೆ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.

ಜಿಲ್ಲೆಯಾದ್ಯಂತ ತನಿಖಾ ದಾಳಿಗಳನ್ನು ಹೆಚ್ಚಿಸಬೇಕು. ತಂಬಾಕು ಮುಕ್ತ ಬಾರ್ ರೆಸ್ಟೊರಂಟ್, ನೋ ಸ್ಮೊಕಿಂಗ್ ಜೋನ್ ಕುರಿತಂತೆ ಅಬಕಾರಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ರಸ್ತೆ ಬೀದಿಗಳಲ್ಲಿ ಮಾರುಕಟ್ಟೆ ಸ್ಥಳಗಳಲ್ಲಿ ಸಿಗರೇಟು, ಬೀಡಿ ಸೇವನೆ ಮಾಡದಂತೆ ಎಲ್ಲೆಡೆ ಫಲಕ ಕರಪತ್ರ ಲಗತ್ತಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಪಂಗಡಗಳ ಹಾಸ್ಟೆಲ್‍ಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು. ರಾಜ್ಯ ಸರಕಾರವು ಹುಕ್ಕಾ ಬಾರ್ ನಿರ್ಬಂಧಗೊಳಿಸಿದೆ. ಕೆಲವೆಡೆ ಅನಧಿಕೃತವಾಗಿ ಕಂಡು ಬಂದ ಮಾಹಿತಿ ಆರೋಗ್ಯ ಅಧಿಕಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಬಕಾರಿ ಇಲಾಖೆ, ಪೊಲೀಸ್ ಅಧಿಕಾರಿ ಸಹಕಾರದೊಂದಿಗೆ ಆರೋಗ್ಯ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಯಿತು.

ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ ಮಾಲಿಕರು ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ ರೂ. 500 ಭರಿಸಿ ಅನುಮತಿ ಪಡೆಯ ತಕ್ಕದ್ದು, ಇದರ ಬಗ್ಗೆ ಪಾಲಿಕೆ ಅಧಿಕಾರಿಗಳು, ವ್ಯಾಪಾರಸ್ಥರು ಜೊತೆ ಆರೋಗ್ಯ ಅಧಿಕಾರಿಗಳು ಸಭೆಯೊಂದರನ್ನು ನಡೆಸಿ ಹೆಚ್ಚಿನ ಜಾಗೃತಿ ಮೂಡಿಸತಕ್ಕದ್ದು ಎಂದರು.
ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವ ಬಾರ್ ರೆಸ್ಟೊರಂಟಗಳ ವಿರುದ್ಧ ಪ್ರಕರಣ ದಾಖಲಿಸಿ, ಪರವಾನಿಗೆ ರದ್ದುಗೊಳಿಸಲು ಕ್ರಮಕೈಗೊಳ್ಳುವಂತೆ ಅಬಕಾರಿ ಆಯುಕ್ತರಿಗೆ ತಿಳಿಸಿದರು.

ಧಾರವಾಡ ಜಿಲ್ಲೆಯನ್ನು ರೇಬಿಸ್ ಮುಕ್ತವನ್ನಾಗಿಸಲು ಶ್ರಮಿಸಿ: ಧಾರವಾಡ ಜಿಲ್ಲೆಯನ್ನು ರೇಬಿಸ್ ಮುಕ್ತ ನಗರವನ್ನಾಗಿಸಲು ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಲಿಯೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ನಾಯಿ ಕಡಿತದಿಂದ ಯಾವುದೇ ರೇಬಿಸ್ ಸಾವು ಆಗಿಲ್ಲವಾದರು ನಾಯಿ ಕಡಿತ ಹಾಗೂ ಲಸಿಕೆ ಹಾಕಿಸುವಂತೆ ಅಧಿಕಾರಿಗಳು ಹೆಚ್ಚಿನ ಪ್ರಚಾರ, ಜಾಗೃತಿ ಆಂದೋಲನ ಹಮ್ಮಿಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಈ ವರೆಗೆ 3,046 ನಾಯಿಕಡಿತ ಪ್ರಕರಣಗಳು ದಾಖಲಾಗಿದೆ. ಹೆಚ್ಚಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಆರ್ ಸಿ ಎಚ್ ಅಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಪರಶುರಾಮ ಎಸ್.ಕೆ., ಪಶುಸಂಗೋಪನೆ ಉಪ ನಿರ್ದೇಶಕ ಡಾ.ರವಿ ಸಾಲಿಗೌಡರ, ಅಬಕಾರಿ ಆಯುಕ್ತ ರಮೇಶ ಕುಮಾರ.ಎಚ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

***

Share This Article
error: Content is protected !!
";