Ad image

ನಾಡ ಹಬ್ಬ ದಸರಾ

Vijayanagara Vani
ನಾಡ ಹಬ್ಬ ದಸರಾ

 

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ನಮ್ಮ ಜನಮಾನಸದಲ್ಲಿ ಬೆರೆತು ಹೋಗಿರುವುದು ನಮ್ಮ ನಾಡ ಹಬ್ಬ ದಸರ. ದಸರಾ ನಮ್ಮೆಲ್ಲರ ಭಕ್ತಿ ಭಾವದ ವ್ಯಕ್ತ ರೂಪ. ದಸರಾ ಶಕ್ತಿ ಶೌರ್ಯಗಳ ವಿಶ್ವ ರೂಪ. ನಾಡು ನುಡಿಗಳ ಮೀರಿ ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿ ರೂಪ.

ಹಿಂದೆ ಅಜ್ಞಾತವಾಸದಲ್ಲಿದ್ದ ಪಾಂಡವರು ಬನ್ನಿ ಗಿಡದ ಕೆಳಗೆ ಹುಗಿದಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಹೊರತೆಗೆದು ಪೂಜೆ ಮಾಡಿ ದುಷ್ಟರ ವಿರುದ್ಧ ಹೋರಾಡಿ ವಿಜಯ ಪ್ರಾಪ್ತಿಗೊಳಿಸಿಕೊಂಡ ಸಮಯ ಈ ವಿಜಯ ದಶಮಿ.
ದುಷ್ಟನಾದ ರಾಕ್ಷಸೇಂದ್ರ ರಾವಣನನ್ನು ರಾಮನು ಸಂಹರಿಸಿದ ದಿನ ಈ ವಿಜಯದಶಮಿ.
ತಾಯಿ ಚಾಮುಂಡೇಶ್ವರಿ ದುಷ್ಟ ಮಹಿಶಾಸುರನೊಡನೆ 9 ದಿನಗಳ ಕಾಲ ಕಾದಾಡಿ ಹತ್ತನೆಯ ದಿನ ಆತನನ್ನು ವಧಿಸಿದ ದಿನ ಇವೆಲ್ಲ ಪೌರಾಣಿಕ ಹಿನ್ನೆಲೆಗಳು.

ವಿಜಯನಗರದ ಅರಸರು ನಾಡಹಬ್ಬವಾಗಿ ದಸರಾ ಇಲ್ಲವೇ ನವರಾತ್ರಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ಆಚರಿಸುತ್ತಿದ್ದರು. ಮುಂದೆ ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸು ರಾಮರಾಯನು ಯುದ್ಧದಲ್ಲಿ ಸೋತು 1565 ರಲ್ಲಿ ಮೈಸೂರಿಗೆ ವಲಸೆ ಹೋದನು. ಅಂದಿನಿಂದ ಒಡೆಯರ್ ವಂಶದ ಮೈಸೂರು ಮಹಾರಾಜರು.
ಈ ನವರಾತ್ರಿ ಹಬ್ಬವನ್ನು ನಾಡಹಬ್ಬವಾಗಿ ಆಚರಿಸಿದರು. ಸ್ವಾತಂತ್ರ್ಯದ ಹೋರಾಟ ಸಮಯದಲ್ಲಂತೂ ಈ ನಾಡ ಹಬ್ಬ ಮತ್ತಷ್ಟು ಮೆರುಗನ್ನು ಪಡೆಯಿತು. ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಗಣಪತಿ ಹಬ್ಬವನ್ನು ಆಚರಿಸುತ್ತಾ ಸ್ವಾತಂತ್ರ್ಯ ಪಡೆಯುವ ಕಿಚ್ಚಿಗೆ ಪ್ರೋತ್ಸಾಹ ನೀಡುವ ಪ್ರಕ್ರಿಯೆಯನ್ನು ಕಂಡ ಕರ್ನಾಟಕದ ಸಣ್ಣಪುಟ್ಟ ರಾಜರು, ಆಳರಸರು ನವರಾತ್ರಿ ಹಬ್ಬವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸತೊಡಗಿದರು. ಮೈಸೂರಿನ ದೊರೆಗಳು ಸ್ವಾತಂತ್ರ್ಯದ ನಂತರ ದೈವಾರಾಧನೆ ಮಾಡುತ್ತಾ, ಖಾಸಗಿಯಾಗಿ ದರ್ಬಾರನ್ನು ನಡೆಸುತ್ತಾ ಸಾರ್ವಜನಿಕವಾಗಿ ಜಂಬೂ ಸವಾರಿಯನ್ನು ತನ್ಮೂಲಕ ಮೈಸೂರು ದಸರೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅಂದು ಮಹಾರಾಜರು ಜಂಬೂ ಸವಾರಿಯಲ್ಲಿ ಆನೆಯ ಮೇಲೆ ಏರುತ್ತಿದ್ದರೆ ಇಂದು ತಾಯಿ ಚಾಮುಂಡಿ ದೇವಿಯನ್ನು ಪಟ್ಟದ ಆನೆಯ ಮೇಲೆ ಪ್ರತಿಷ್ಠಾಪಿಸಿ ಅರಮನೆಯ ಬನ್ನಿಮಂಟಪದವರೆಗೆ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ಶಮೀವೃಕ್ಷವನ್ನು ಪೂಜಿಸಿ ಬನ್ನಿಯನ್ನು ಮುಡಿಯುತ್ತಾ ವಿಜಯದಶಮಿಯನ್ನು ಆಚರಿಸುತ್ತಾರೆ. ಈ ವಿಜಯದಶಮಿಯಂದು ‘ದುಷ್ಟ ಶಿಕ್ಷಣ ಶಿಷ್ಟ ರಕ್ಷಣ’ ಎಂಬ ಧ್ಯೇಯ ಎಲ್ಲೆಡೆ ಮೊಳಗುವಂತೆ ಮಾಡುತ್ತಾರೆ.

ಮಹಾನವಮಿ ಅಮಾವಾಸ್ಯೆಯ ನಂತರ ಬರುವ ಅಶ್ವಿಜ ಮಾಸದ ಮೊದಲನೆಯ ದಿನವೇ ಘಟಸ್ತಾಪನೆ. ಪದ್ಧತಿ ಇರುವ ಎಲ್ಲಾ ಧರ್ಮಗಳಲ್ಲಿಯೂ ಕಳಶವನ್ನು ತುಂಬಿ ಅದರ ಮೇಲೆ ಎಲೆ, ಸಿಪ್ಪೆಯ ತೆಂಗಿನಕಾಯಿಯನ್ನು ಇರಿಸಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇನ್ನೂ ಕೆಲವರು ಮಣ್ಣಿನಲ್ಲಿ ಸುಮಾರು 9 ವಿಧದ ಧಾನ್ಯಗಳನ್ನು ಹಾಕಿ ಅದಕ್ಕೆ ನೀರು ಚುಮುಕು ಹೊಡೆದು ಅದರ ಮೇಲೆ ಒಂದು ಮಣ್ಣಿನ ಕೊಡವನ್ನು ಕಳಸದಂತೆ ಪ್ರತಿಷ್ಠಾಪಿಸುತ್ತಾರೆ. ಈ ನವಧಾನ್ಯಗಳು ಮೊಳಕೆ ಒಡೆದು ಕಳಸದ ಸುತ್ತ ಬೆಳೆಯುತ್ತವೆ. ದೇವರ ಮುಂದೆ ದೊಡ್ಡ ನಂದಾದೀಪವನ್ನು ಹಚ್ಚಿಟ್ಟು ಅದನ್ನು ನವರಾತ್ರಿಯ/ದಸರೆಯವರೆಗೂ ನಂದದಂತೆ ಕಾಯುತ್ತಾರೆ. ಹೀಗೆ ಘಟಸ್ಥಾಪನೆ ಮಾಡಿದ ನಂತರ ಶ್ರೀದೇವಿಯನ್ನು ಆಹ್ವಾನಿಸಿ ಪೂಜಿಸಿ ಷೋಡಶೋಪಚಾರ ಮಾಡಿ ನೈವೇದ್ಯ ಮಾಡುತ್ತಾರೆ. ಕೆಲವರ ಮನೆಗಳಲ್ಲಿ ಕಡ್ಡಾಯವಾಗಿ ದೇವಿ ಪುರಾಣವನ್ನು, ಇನ್ನೂ ಕೆಲವರು ಲಲಿತಾ ಸಹಸ್ರನಾಮಾವಳಿಯನ್ನು ಮತ್ತು ಕೆಲವರು ಶ್ರೀನಿವಾಸ ಕಲ್ಯಾಣವನ್ನು ಪಾರಾಯಣ ಮಾಡುತ್ತಾರೆ. ದೇವಾಲಯಗಳಲ್ಲಿಯೂ ಕೂಡ ದೇವಿಯನ್ನು ಪ್ರತಿಷ್ಠಾಪಿಸಿ 9 ದಿನಗಳವರೆಗೆ ಸತತವಾಗಿ ವಿವಿಧ ದೇವತೆಗಳ ರೂಪದಲ್ಲಿ ಪೂಜಿಸಿ ಗಂಡಾರತಿ ಇಲ್ಲವೇ ಕಾಕಡಾರತಿ ಮೂಲಕ ಭಜಿಸಿ ದೇವಿ ಪುರಾಣವನ್ನು, ಸಪ್ತಶಕ್ತಿ ಪಾರಾಯಣ, ಲಲಿತೋಪಾಖ್ಯಾನ, ದುರ್ಗಾ ಸಪ್ತಶತಿ ಪಾರಾಯಣ ಮಾಡುತ್ತಾರೆ. ನವರಾತ್ರಿಯ ಮೊದಲ ದಿನ ಯೋಗ ನಿದ್ರ ದೇವಿ, ಎರಡನೇ ದಿನ ದೇವಜಾತದುರ್ಗ, ಮೂರನೇ ದಿನ ಮಹಿಶಾಸುರ ಮರ್ದಿನಿ, ನಾಲ್ಕನೇ ದಿನ ಸಿಂಹ ವಾಹಿನಿ ಚಾಮುಂಡೇಶ್ವರಿ ಶೈಲಜಾ ಪುತ್ರಿ,, ಐದನೇ ದಿನ ದೂಮ್ರದೇವಿ, ಆರನೇ ದಿನ ಚಂಡಮುಂಡಾಸುರರನ್ನು ವಧೆ ಮಾಡಿದ ದುರ್ಗಾದೇವಿ, ಏಳನೇ ದಿನ ರಕ್ತ ಬೀಜಾಸುರನನ್ನು ಕೊಂದ ದುರ್ಗಾದೇವಿಯನ್ನು ಶಾರದೆಯ ರೂಪದಲ್ಲಿ, ಎಂಟನೇ ದಿನ ನಿಶುಂಭನನ್ನು ಸಂಹರಿಸಿದ ದುರ್ಗಾದೇವಿಯನ್ನು ಲಕ್ಷ್ಮಿ ರೂಪದಲ್ಲಿ ಪೂಜಿಸುತ್ತಾರೆ. ಜನ್ಮದುರ್ಗಾಷ್ಟಮಿ ಎಂದು ಕೂಡ ಕರೆಯುತ್ತಾರೆ. ಉತ್ತರ ಭಾರತದಲ್ಲಿ ಸಪ್ತಮಿ ಅಷ್ಟಮಿ ನವಮಿ ಮೂರು ದಿನಗಳನ್ನು ಸೇರಿಸಿ ತ್ರಿದಿನ ದುರ್ಗಾಪೂಜೆ ಎಂದು ಪೂಜಿಸುತ್ತಾರೆ. ಸಪ್ತಮಿಯ ದಿನ (ಮೂಲ ನಕ್ಷತ್ರ)ದಂದು ಶಾರದೆಯನ್ನು ಪೂಜಿಸಲು ಬಗೆ ಬಗೆಯ ಪುಸ್ತಕಗಳನ್ನು ಇಟ್ಟು ಪವಿತ್ರ ಗ್ರಂಥಗಳನ್ನು, ಚಿನ್ನ, ಬೆಳ್ಳಿ ಗಳನ್ನು ಪೂಜಿಸಲಾಗುತ್ತದೆ. ಎಂಟನೆಯ ದಿನದಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಒಂಬತ್ತನೇಯ ದಿನ ನವಮಿಯಂದು ಪಾಂಡವರು ಬನ್ನಿ ವೃಕ್ಷದ ಕೆಳಗೆ ಮುಚ್ಚಿಟ್ಟ ತಮ್ಮ ಸರ್ವ ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜಿಸಿದ ದಿನ ಅದುವೇ ಆಯುಧ ಪೂಜೆ. ಇಂದಿನ ದಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿರುವ ಕತ್ತಿ, ಖಡ್ಗ, ಕಠಾರಿ, ಅಳತೆಯ ಮತ್ತು ತೂಕದ ವಸ್ತುಗಳು, ಕೃಷಿ ಕೆಲಸದ ಸಾಮಗ್ರಿಗಳನ್ನು ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಅಥವಾ ದಸರೆಯ ಕೊನೆಯ ದಿನ ವಿಜಯದಶಮಿ. ಅಂದು ತಾಯಿ ಚಾಮುಂಡಿಯು ದುಷ್ಟ ಮಹಿಶಾಸುರನನ್ನು ಕೊಂದ ದಿನ, ರಾಮ ರಾವಣನನ್ನು ವಧಿಸಿದ ದಿನ … ಈ ದಿನದ ನೆನಪಿಗಾಗಿ ವಿಜಯದಶಮಿಯನ್ನು ಆಚರಿಸುವರು. ವಿಜಯದಶಮಿಯ ಈ ಹಬ್ಬ ಸ್ತ್ರೀಶಕ್ತಿಯ ಪಾರಮ್ಯವನ್ನು ಸೂಚಿಸುವ ಹಬ್ಬ. ಎಲ್ಲೆಡೆಯು ತಾಯಿದುರ್ಗೆಯನ್ನು ಹಲವು ನಾಮಗಳಿಂದ ಕರೆಯುತ್ತಾ ವಿವಿಧ ಬಗೆಗಳಲ್ಲಿ ಪೂಜಿಸುತ್ತಾರೆ ನವರಾತ್ರಿಯ ನಿಮಿತ್ತ ಕೆಲವರಂತೂ ಇಡೀ ದಿನಕ್ಕೆ ಕೇವಲ ಒಪ್ಪತ್ತಿನ ಊಟವನ್ನು ಮಾಡುತ್ತಾ ಸಂಪೂರ್ಣ ಮೌನಕ್ಕೆ ಶರಣಾಗುತ್ತಾರೆ.

“ಶಮೀ ಶಮಯತೆ ಪಾಪಂ
ಶಮೀ ಶತ್ರುವಿನಾಶಿನಿ
ಅರ್ಜುನಸ್ಯ ಧನುರ್ಧಾರಿ
ರಮಸ್ಯ ಪ್ರಯವಾದಿನಿ”

ಎಲ್ಲರಿಗೂ ನಾಡ ಹಬ್ಬ ದಸರೆಯ ಶುಭಾಶಯಗಳು.

ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್

Share This Article
error: Content is protected !!
";