Ad image

ಡಯಾಲಿಸಸ್ ಸೇವೆಗಳ ನೀಡುವಿಕೆ ಕುರಿತ ಸಮನ್ವಯ ಸಭೆಯಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಸ್ ಸೇವೆ ಪಡೆಯಲು ಸೂಚಿಸಿ

Vijayanagara Vani
ಡಯಾಲಿಸಸ್ ಸೇವೆಗಳ ನೀಡುವಿಕೆ ಕುರಿತ ಸಮನ್ವಯ ಸಭೆಯಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಸ್ ಸೇವೆ ಪಡೆಯಲು ಸೂಚಿಸಿ

ಬಳ್ಳಾರಿ,ಅ.17ಮೂತ್ರಪಿಂಡ ತೊಂದರೆಗೊಳಗಾದವರಿಗೆ ಡಯಾಲಿಸಸ್ ಸೇವೆ ಪಡೆಯಲು ಬಳ್ಳಾರಿ ವೈದ್ಯಕೀಯ ಮತ್ತು ಸಂಶೋಧನಾ ಮಹಾವಿದ್ಯಾಲಯ (ಬಿಮ್ಸ್), ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮತ್ತು ಸಂಡೂರು, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗಳ ಡಯಾಲಿಸಸ್ ಕೇಂದ್ರಗಳಲ್ಲಿ ಉಚಿತವಾಗಿ ಡಯಾಲಿಸಸ್ ಸೇವೆ ನೀಡಲಾಗುತ್ತಿದ್ದು, ಇದರ ಸೇವೆ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.

- Advertisement -
Ad image

ರಾಷ್ಟ್ರೀಯ ಪ್ರಧಾನಮಂತ್ರಿ ಡಯಾಲಿಸಸ್ ಸೇವೆಗಳ ಅನುಷ್ಟಾನ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಬಿಮ್ಸ್) ಹಾಗೂ ಖಾಸಗಿ ಡಯಾಲಿಸಸ್ ಆಸ್ಪತ್ರೆಗಳ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಡಯಾಲಿಸಸ್ ಸೇವೆಗಳ ನೀಡುವಿಕೆ ಕುರಿತು ಬುಧವಾರದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಏರ್ಪಡಿದ್ದ ಸಮನ್ವಯ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
ಡಯಾಲೈಸರ್ ಮತ್ತು ಬ್ಲಡ್ ಟ್ಯೂಬಿಂಗ್‌ನ್ನು ಒಬ್ಬರಿಗೆ ಬಳಸಿರುವುದನ್ನು ಪುನಃ ಅದೇ ವ್ಯಕ್ತಿಗೆ 5 ರಿಂದ 6 ಬಾರಿ ಬಳಸಲು ವೈದ್ಯಕೀಯವಾಗಿ ಅವಕಾಶವಿದ್ದು, ಸಾರ್ವಜನಿಕರು ಯಾವುದೇ ತಪ್ಪು ವದಂತಿಗಳಿಗೆ ಕಿವಿಗೊಡದೇ ಡಯಾಲಿಸಸ್ ಸೇವೆಯನ್ನು ಉಚಿತವಾಗಿ ಪಡೆಯಬಹುದು. ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ತೆರಳಿ ಹಣವೆಚ್ಚ ಮಾಡುವ ಅಗತ್ಯತೆ ಇರುವುದಿಲ್ಲ ಎಂಬುದನ್ನು ಮನವರಿಕೆ ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಬಿಮ್ಸ್ನಲ್ಲಿ 13 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 08, ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಮತ್ತು ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಡಯಾಲಿಸಸ್ ಯಂತ್ರಗಳು ಲಭ್ಯವಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಉಚಿತ ಸೇವೆಯನ್ನು ನೀಡಲಾಗುತ್ತದೆ ಎಂದರು.
ಡಯಾಲಿಸಸ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಬಳಸುವ ಡಯಾಲಸರ್ ಮತ್ತು ಬ್ಲಡ್ ಟ್ಯೂಬಿಂಗ್‌ನ್ನು ಒಬ್ಬರಿಗೆ ಬಳಸಿದ ನಂತರ ಲೇಬಲಿಂಗ್ ಮಾಡಿ ಸುರಕ್ಷಿತವಾಗಿ ತೆಗೆದಿಡುವ ಮೂಲಕ ಪುನಃ ಅದೇ ವ್ಯಕ್ತಿಗೆ ಮರುಭೇಟಿಯ ವೇಳೆ ಬಳಸಲು ವೈಜ್ಞಾನಿಕವಾಗಿ ಅವಕಾಶವಿದ್ದು, ಇದನ್ನು ಕನಿಷ್ಟ 5 ರಿಂದ 6 ಬಾರಿ ಏಕವ್ಯಕ್ತಿಗೆ ಬಳಸಬಹುದು. ಸಾರ್ವಜನಿಕರು ತಪ್ಪು ಮಾಹಿತಿಗೊಳಗಾಗದೆ ಉಚಿತವಾಗಿ ಡಯಾಲಿಸಸ್ ಸೇವೆ ಪಡೆಯಬಹುದಾಗಿದೆ ಎಂದು ತಿಳಿಸಿದರು. ಬಳ್ಳಾರಿ ನಗರದಲ್ಲಿ ಡಯಾಲಿಸಸ್ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಸರಕಾರದ ಡಯಾಲಿಸಸ್ ಸೇವೆ ನೀಡುವಿಕೆಯ ಪ್ರತಿ ಸೈಕಲ್‌ನ ದರ ಪ್ಯಾಕೇಜ್ ಕುರಿತು ಚರ್ಚಿಸಲಾಗುತ್ತಿದ್ದು, ಅಲ್ಲಿಯೂ ಸಹ ಉಚಿತ ಸೇವೆ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರಿಗೆ ನೀಡುವ ಸೇವೆಗಳನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು ನಿರಂತರ ಭೇಟಿ ನೀಡುವ ಮೂಲಕ ಸೇವೆಗಳ ಗುಣಮಟ್ಟದ ಕುರಿತು ಪರಿಶೀಲನೆ ಹಾಗೂ ನಿಗಾವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು, ಜಿಲ್ಲಾ ಶಸ್ತ್ರಚಿಕಿತ್ಸೆಕ ಡಾ.ಎನ್.ಬಸಾರೆಡ್ಡಿ, ಜಿಲ್ಲಾ ಸವೇಕ್ಷಣಾಧಿಕಾರಿ ಹಾಗೂ ಪಿಎಮ್‌ಎನ್‌ಡಿಪಿ ಅನುಷ್ಟಾನಾಧಿಕಾರಿ ಡಾ.ಮರಿಯಂಬಿ.ವಿ.ಕೆ., ವಿಮ್ಸ್ ವೈದ್ಯಕೀಯ ಅಧಿಕ್ಷಕ ಡಾ.ಚಿದಂಬರಮೂರ್ತಿ, ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ವಿರೇಂದ್ರ ಕುಮಾರ್, ಮೂತ್ರಪಿಂಡ ತಜ್ಞ ಡಾ.ಅನ್ವರ್.ಎಮ್ ಸೇರಿದಂತೆ ಡಾ.ರಾಘವೇಂದ್ರ, ಡಾ.ರಾಮಕೃಷ್ಣ, ಡಾ.ರೋಹನ್ ವನಗುಂದಿ, ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ರವಿ, ಡಾ.ಶ್ರೀನಿವಾಸ್, ಡಾ.ಜಬೀನಾ ತಾಜ್, ಡಾ.ಮಯೂರಿ ಹಾಗೂ ಇತರರು ಉಪಸ್ಥಿತರಿದ್ದರು.

Share This Article
error: Content is protected !!
";