ಮಮತಾಮಯಿ, ಚೈತನ್ಯದ ಚಿಲುಮೆ, ಪರರಿಗಾಗಿ ಮಿಡಿವ ಹೃದಯ, ಅತಿಥಿ ಸತ್ಕಾರಕ್ಕೆ ಸದಾ ಮುಂದು,ಕುಟುಂಬ ವತ್ಸಲೆ…ಅವರೇ ಈ ಪುಸ್ತಕದ ಪುಣ್ಯಕೋಟಿ ಶ್ರೀಮತಿ ವಿಜಯಲಕ್ಷ್ಮಿ.ಆರ್. ಪೊಲೀಸ್ ಪಾಟೀಲ್. ಇಂದಿಗೆ ಆಕೆಯನ್ನು ಕಳೆದುಕೊಂಡು ಎರಡು ವರ್ಷ ಸಂದು ಹೋಗಿದೆ… ಆದರೂ ಅವರ ನೆನಪುಗಳು ಮನದಲ್ಲಿ ಹಚ್ಚ ಹಸಿರಾಗಿವೆ.
ಗುರುಗಳಾದ ಆರ್ ಎಲ್ ಪೊಲೀಸ್ ಪಾಟೀಲರು ತಮ್ಮ ಪತ್ನಿಯ ಕುರಿತ ಸಂಸ್ಮರಣ ಗ್ರಂಥವನ್ನು ಸಂಪಾದಿಸಿದ್ದು ಇದರಲ್ಲಿ ಮೂರು ವಿಭಾಗಗಳನ್ನು ಮಾಡಿದ್ದು ಮೊದಲ ಭಾಗದಲ್ಲಿ ವಿಜಯಲಕ್ಷ್ಮಿ ಅಮ್ಮನವರ ಬಾಲ್ಯದಿಂದ ಅಂತಿಮ ದಿನಗಳವರೆಗಿನ ಚಿತ್ರ ಸಂಪುಟವಿದೆ. ಎರಡನೇ ಭಾಗದಲ್ಲಿವಿಜಯಲಕ್ಷ್ಮಿ ಅಮ್ಮ ಅವರೇ ಬರೆದ ಕೆಲ ಲೇಖನಗಳು ಇದ್ದು ಮತ್ತೆ ಒಂದೆರಡು ಲೇಖನಗಳನ್ನು ಪೊಲೀಸ್ ಪಾಟೀಲ್ ಗುರುಗಳು, ಎಂ ಜಿ ಗಚ್ಚಣ್ಣವರ ಗುರುಗಳು ಮತ್ತು ಮಕ್ಕಳಾದ ಉಷಾ, ಪಲ್ಲವಿ ಬರೆದ ಲೇಖನಗಳಿವೆ. ಕೊನೆಯ ಲೇಖನದಲ್ಲಿ ಕನ್ನಡ ನಾಡಿನ ಪುಣ್ಯಕೋಟಿಯ ಕಥೆಯಲ್ಲಿರುವ ಪುಣ್ಯಕೋಟಿ ಎಂಬ ಗೋವಿಗೂ ತಮ್ಮ ಪತ್ನಿಗೂ ಇರುವ ಸಾಮ್ಯ ಮತ್ತು ವೈಷಮ್ಯಗಳನ್ನು ತಮ್ಮ ಸಂಪಾದಿತ ಕೃತಿಯಲ್ಲಿ ಪೋಲೀಸ್ ಪಾಟೀಲ್ ಗುರುಗಳು ವಿಷದವಾಗಿ ವಿವರಿಸಿದ್ದಾರೆ.
ಮೂರನೇ ವಿಭಾಗದಲ್ಲಿ ಅಮ್ಮ ಬರೆದ ಕೆಲ ಕವನಗಳು ಇವೆ ಮತ್ತು ಅಮ್ಮನ ಕುರಿತು ಪೊಲೀಸ್ ಪಾಟೀಲ್ ಗುರುಗಳು ಬರೆದ ಕೆಲ ಕವನಗಳು ಇವೆ.
ಸಂಸ್ಕಾರ, ಭಕ್ತಿಯೇ ಬಾಳಿನ ಶಕ್ತಿ ಎಂದು ಭಾವಿಸಿ ಸದಾ ಧರ್ಮದ ಹಾದಿಯಲ್ಲಿ ನಡೆದ ವಿಜಯಲಕ್ಷ್ಮಿ ಅಮ್ಮನವರು ತನ್ನ ತವರು ಮನೆಯ ಆರಾಧ್ಯದೈವ ಸಿದ್ದಲಿಂಗೇಶನ ಭಕ್ತೆಯಾಗಿದ್ದು ತನ್ನ ಅಭಿಮಾನದ ದೈವದ ಕುರಿತು ಬರೆದಿರುವ ಲೇಖನದಲ್ಲಿ ಎಡೆಯೂರಿನಲ್ಲಿ ನೆಲೆಯಾಗಿರುವ ಸಿದ್ದಲಿಂಗೇಶ್ವರರ ಹುಟ್ಟು, ಬಾಲಕನ ಪ್ರಭೆ, ಸನ್ಯಾಸ ದೀಕ್ಷೆ ಸ್ವೀಕಾರ, ಜ್ಞಾನ ಪಿಪಾಸುವಾಗಿ ಲೋಕ ಸಂಚಾರ ಮಾಡಿ ಗಳಿಸಿದ ಜ್ಞಾನದ ಫಲವಾಗಿ ರೂಪುಗೊಂಡ ‘ಷಟ್ತಲ ಜ್ಞಾನ ಸಾರಾಮೃತ’ ವಚನ ಸಂಚಿಕೆ, ಅವರು ಮೆರೆದ ಪವಾಡಗಳನ್ನು ದಾಖಲಿಸಿರುವ ಅಮ್ಮ ಸಿದ್ದಲಿಂಗೇಶ್ವರನ ಕೃಪೆಯಿಂದ ತನ್ನ ತವರೂರಾದ ಅಲಗಿಲವಾಡದ ಗೌಡರ ಮನೆತನ ಉದ್ಧಾರವಾಗಿದ್ದು ಆ ಮನೆತನದಲ್ಲಿ ಹುಟ್ಟಿ ಬಂದ ತಾನೇ ಧನ್ಯಳು ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ.
ತನ್ನ ಪತಿಯ ಬದುಕಿಗೆ ಔದ್ಯೋಗಿಕ ಆಶ್ರಯ ನೀಡಿ ಮುಂಡರಗಿಯಲ್ಲಿ ನೆಲೆಯಾಗಲು ಕಾರಣವಾದ ಗುರು ಅನ್ನದಾನೀಶರನ್ನು ಭಕ್ತಿಯಿಂದ ನೆನೆಯುವ, ಪೂಜಿಸುವ ವಿಜಯಲಕ್ಷ್ಮಿ ಅಮ್ಮನ ಬದುಕಿನಲ್ಲಿ ಸ್ನಾನ,ಪೂಜೆ,ಲಿಂಗಪೂಜೆ, ಅತಿಥಿ ಸತ್ಕಾರಗಳು ವಿಶೇಷ ಸ್ಥಾನ ಪಡೆದಿದ್ದವು. ಕಷ್ಟವೇ ಬರಲಿ ಸುಖವೇ ಇರಲಿ ಗುರು ಅನ್ನದಾನಿಯ ದಯೆ ತನ್ನ ಕುಟುಂಬದ ಮೇಲಿರಲಿ ಎಂದು ಅವರು ಆಶಿಸುತ್ತಿದ್ದರು. ಉಪಕಾರ ಮಾಡಿದವರ ಸ್ಮರಣೆ ಸದಾ ಇರಬೇಕು ಎಂಬುದಕ್ಕಾಗಿ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜಗದ್ಗುರುಗಳ ಸಾನಿಧ್ಯದಲ್ಲಿಯೇ ಪೂರೈಸಲು ಹಂಬಲಿಸುತ್ತಿದ್ದ ವಿಜಯಲಕ್ಷ್ಮಿ ಅಮ್ಮ ಆಶ್ರಯದಾತರಾದ ಗುರು ಅನ್ನದಾನೀಶ್ವರರ ಅಪ್ಪಣೆಯಂತೆ ನಾವು ನಡೆದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂಬಂತೆ ಜೀವನದ ಕೊನೆಯವರೆಗೂ ಪಾಲಿಸಿದರು. ತಮ್ಮ ಮಕ್ಕಳಲ್ಲಿಯೂ ಉನ್ನತ ಸಂಸ್ಕಾರಗಳನ್ನು ಬೆಳೆಸಿದ ಆಕೆ ಗುರು,ಲಿಂಗ, ಜಂಗಮರ ಮೇಲೆ ಮಕ್ಕಳಲ್ಲಿಯೂ ಭಕ್ತಿ ಹುಟ್ಟಲು ಕಾರಣವಾಗಿ ಆದರ್ಶ ಮತ್ತು ಅನುಕರಣೀಯ ಬಾಳನ್ನು ಸಾಗಿಸಿದರು.
ಮೂರನೆಯ ಅಧ್ಯಾಯದಲ್ಲಿ ವಿಜಯಲಕ್ಷ್ಮಿ ಅಮ್ಮ ತಮ್ಮ ತವರೂರು ಅಲಗಿಲವಾಡದ ಮನೆ, ಮನೆತನದ ಕುರಿತು, ತಂದೆ ತಾಯಿ ಕಾಲವಾದ ನಂತರ ಪ್ರೀತಿಯಿಂದ ಸಾಕಿ ಬೆಳೆಸಿದ ಸೋದರ ಮಾವಂದಿರು ಮತ್ತು ಅವರ ಪತ್ನಿಯರ ಆರೈಕೆಯಲ್ಲಿ ಹೈ ಸ್ಕೂಲ್ ಕಲಿತದ್ದು.ಅಜ್ಜಿಯ ಒತ್ತಾಸೆಯ ಮೇರೆಗೆ ಮುಂಡರಗಿಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪಾಟೀಲ್ ಗುರುಗಳನ್ನು ವಿವಾಹವಾದ ಕುರಿತು ಬರೆದಿದ್ದಾರೆ. ಮೂರು ಜನ ಸೋದರ ಮಾವಂದಿರು ಮತ್ತವರ ಪತ್ನಿಯರು ತಮ್ಮೆಲ್ಲರ ಬೇಕು ಬೇಡಗಳಿಗೆ ಸ್ಪಂದಿಸಿ ಆಶ್ರಯ ನೀಡಿ ವಿದ್ಯೆ ಕಲಿಸಿ ಮದುವೆ ಮಾಡಿಕೊಟ್ಟ ಕುರಿತು ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಅವರು ‘ಹಾಲುಂಡ ತವರಿನ ರಸಬಳ್ಳಿ ಹೊಳೆದಂಡೆಯ ಕರಕಿಯ ಕುಡಿಯಂಗ ಹಬ್ಬಲಿ’ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದು ತನ್ನ ಹಿರಿಯರು ಬಂಧು ಬಳಗದವರು ತನಗೆ ಉಡುಗೊರೆಯಾಗಿ ಆರ್ ಎಲ್ ಪಿ ಯವರನ್ನು ಕೊಟ್ಟಿದ್ದಾರೆ ಎಂದು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ನಾಲ್ಕನೆಯ ಅಧ್ಯಾಯದಲ್ಲಿ ತಮ್ಮ ದಾಂಪತ್ಯ ಬದುಕು,ಮಕ್ಕಳು,ಅವರ ಶಿಕ್ಷಣ ಮತ್ತು ಔದ್ಯೋಗಿಕ ಸಾಧನೆಯ ಕುರಿತು ಬರೆದಿರುವ ವಿಜಯಲಕ್ಷ್ಮಿ ಅಮ್ಮ ಪ್ರಾಮಾಣಿಕರಾದ,ಶಿಸ್ತಿನ ಜೀವಿ,ಯಾವುದೇ ದುರ್ಗುಣಗಳನ್ನು ಹೊಂದಿರದ, ಎಲ್ಲರ ಪ್ರೀತಿಗೆ ಪಾತ್ರರಾದ ಕುಟುಂಬವತ್ಸಲರಾದ ತನ್ನ ಪತಿಯ ಸ್ವಭಾವ ಅವರ ಹೆಜ್ಜೆಯಲ್ಲಿ ಹೆಜ್ಜೆ ಹಾಕಿರುವ ಕುರಿತು ಬರೆದಿದ್ದು ತನ್ನ ಪತಿಯನ್ನೇ ತನ್ನ ಬದುಕಿನ ಸಾರ ಸರ್ವಸ್ವವೆಂದು ಭಾವಿಸಿದ್ದೇನೆ ಎಂದು ಹೇಳುತ್ತಾ ಇಂತಹ ಒಳ್ಳೆಯ ಪತಿಯನ್ನು ನೀಡಿದ ದೈವಕ್ಕೆ, ಗುರು ಹಿರಿಯರೆಲ್ಲರಿಗೂ ಋಣಿಯಾಗಿರುವುದಾಗಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಸ್ವಾಭಿಮಾನಿ, ಅಶಿಸ್ತನ್ನು ಸಹಿಸದ, ನಸು ಕೋಪಿಸಿಕೊಳ್ಳುವ ಸ್ವಭಾವದ, ಆರ್ಥಿಕ ಶಿಸ್ತನ್ನು ಹೊಂದಿರುವ, ವೃತ್ತಿ ಪ್ರಿಯ,ಸಾಹಿತ್ಯ ಮತ್ತು ಸಮಾಜ ಪ್ರೇಮಿಯಾಗಿರುವ ಕಾಯಕ ಜೀವಿ ಪತಿಯ ಸ್ವಭಾವವನ್ನು ನೆನೆಯುತ್ತಾ ಮುಂದಿನ ಜನ್ಮ ಎಂಬುದಿದ್ದರೆ ಮತ್ತೆ ಇವರೇ ನನ್ನ ಪತಿಯಾಗಲಿ ಎಂದೂ,ಮಕ್ಕಳಾದ ಉಷಾ,ಪಲ್ಲವಿ ಮತ್ತು ಕಿರಣರನ್ನೇ ಮತ್ತೆ ಮಕ್ಕಳಾಗಿ ಪಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’
ಎಂಬಂತೆ ಬದುಕಿದ ಆರ್ ಎಲ್ ಪೊಲೀಸ್ ಪಾಟೀಲರು ಮತ್ತು ವಿಜಯಲಕ್ಷ್ಮಿ ಅಮ್ಮನವರ ಕುರಿತು ಕುಟುಂಬ ಸ್ನೇಹಿತರಾದ ಎಂ ಜಿ ಗಚ್ಛಣ್ಣವರ್ ಗುರುಗಳು ನೆನೆದಿದ್ದು ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವಗಳ ಜೊತೆಗೆ ಅತಿಥಿ ದೇವೋಭವ ಎಂದು ನುಡಿದಂತೆ ನಡೆದು ಆಚರಿಸಿ ತೋರಿಸಿದವರು ವಿಜಯಲಕ್ಷ್ಮಿ ಅಮ್ಮ ಎಂದು ಹೇಳಿದ್ದಾರೆ.ಪ್ರೀತಿಯ ಮಗಳಾಗಿ, ಮೆಚ್ಚಿನ ಸೊಸೆಯಾಗಿ, ಇಷ್ಟದ ಸತಿಯಾಗಿ, ಮಕ್ಕಳಿಗೆ ತಾಯಿಯಾಗಿ, ಶರಣರು ಹೇಳುವಂತೆ ಲೇಸಿನ ಬದುಕನ್ನು ಸಾಗಿಸಿದ ವಿಜಯಲಕ್ಷ್ಮಿ ಅಮ್ಮನ ಗುರು ಲಿಂಗ ಜಂಗಮ ಪ್ರೇಮವನ್ನು ನೆನೆದಿದ್ದು ಮಹಿಳಾ ಕುಲಕ್ಕೆ ಇವರ ದಾಂಪತ್ಯಜೀವನ ಆದರ್ಶ ಹಾಗೂ ಅನುಕರಣೀಯ ಎಂದು ಹೇಳಿದ್ದಾರೆ.
‘ ಬಲ್ಲವರ ಬಾಯಲ್ಲಿ ಬೆಲ್ಲದಚ್ಚು’ ಎಂಬ ಲೇಖನದಲ್ಲಿ ಸಮರ್ಥ ಯಜಮಾನಿಕೆ, ವಿದ್ಯಾರ್ಥಿ ಪ್ರಿಯ ಉಪನ್ಯಾಸಕರಾಗಿ, ಸಾರ್ವಜನಿಕರಿಗೆ ಮಾರ್ಗದರ್ಶಕರಾಗಿ, ಅಚ್ಚುಕಟ್ಟಾದ ಬದುಕಿನ ಪದ್ಧತಿಯನ್ನು ಪಾಲಿಸುವ, ಅತ್ಯುತ್ತಮ ಉಪನ್ಯಾಸಕಾರರಾಗಿ ಸೂಜಿಗಲ್ಲಿನಂತೆ ಜನಮನವನ್ನು ಸೆಳೆಯುವ ಅದ್ಭುತ ವಾಗ್ಜರಿಯನ್ನು ಹೊಂದಿರುವ ‘ಸಮಾಜ ಸೇವೆಯೇ ಶಿವಪೂಜೆ’ ಎಂದು ಭಾವಿಸಿದ ಪತಿಯನ್ನು ಪಡೆದ ತಾನೇ ಧನ್ಯ ಎಂದು ಹೇಳಿರುವ ವಿಜಯಲಕ್ಷ್ಮಿ ಅಮ್ಮ ಸಾಮಾಜಿಕ ವಲಯಗಳಲ್ಲಿ ವಿವಿಧ ಸ್ವಾಮೀಜಿಗಳು, ಲೇಖಕರು, ನ್ಯಾಯಾಧೀಶರು, ಹಿರಿಯ ಸಾಹಿತಿಗಳು ಮತ್ತು ಸಹೃದಯರ ಪಾಲಿಗೆ ತನ್ನ ಪತಿ ‘ಬಲ್ಲವರ ಬಾಯಲ್ಲಿ ಬೆಲ್ಲದಚ್ಚಿನಂತೆ’ ಇದ್ದದ್ದನ್ನು ನೆನೆದು ಸಂತಸಪಟ್ಟಿದ್ದಾರೆ.
ಮಗಳು ಉಷಾ ಅಡುಗೆ ಮನೆ ಎಂಬ ವಿಶ್ವವಿದ್ಯಾಲಯದಲ್ಲಿ ತನ್ನ ತಾಯಿ ಮಾಡುತ್ತಿದ್ದ ವಿವಿಧ ಬಗೆಯ ಅಡುಗೆಗಳನ್ನು ನೆನೆದಿದ್ದು ರುಚಿಕರ ಅಡುಗೆಗೆ ಹೆಸರಾದ ತನ್ನಮ್ಮನ ಕುರಿತು ಅಪ್ಪ ಬರೆದ ಚುಟುಕವನ್ನು ನೆನೆದಿದ್ದರೆ, ತಾಳ್ಮೆಯ ಪ್ರತಿರೂಪವಾದ ತನ್ನಮ್ಮ, ಕಾಯಕ ತತ್ವವನ್ನು ಪ್ರತಿಪಾದಿಸುವ, ಪ್ರೀತಿ, ಪ್ರೇಮ, ಸ್ನೇಹ, ತಾಳ್ಮೆ ಮತ್ತು ಕರುಣೆಯನ್ನು ಹೊಂದಿದ ತಾಯಿ ಅರ್ಥಪೂರ್ಣ ಜೀವನವನ್ನು ಸಾಗಿಸಿದ್ದನ್ನು ನೆನೆದಿದ್ದಾಳೆ.ದಯೆ, ತ್ಯಾಗಗಳನ್ನು ತನ್ನ ಬದುಕಿನ ಭಾಗವನ್ನಾಗಿಸಿಕೊಂಡ ಅಮ್ಮನನ್ನು ನೆನೆದು ಗುಣಗಳ ಗಣಿಯಾಗಿದ್ದ ಅಮ್ಮ ಆದರ್ಶ ತಾಯಿ ಆಗಿದ್ದಳು. ತನ್ನ ವೈಯುಕ್ತಿಕ ಸುಖ ಸಂತೋಷಗಳನ್ನು ಕಡೆಗಣಿಸಿ ಕುಟುಂಬದ ಬೆಳವಣಿಗೆಗೆ ಕೈಜೋಡಿಸಿದ ಆದರ್ಶ ಮಾತೆ, ಮನೆ ಮನಗಳ ಬೆಳಗಿದವಳು ಎಂದು ನೆನೆದಿದ್ದಾಳೆ.
ಮತ್ತೊಂದು ಅಧ್ಯಾಯದಲ್ಲಿ ಪತ್ನಿಯ ಕೊನೆಯ ದಿನಗಳ ಕುರಿತು ಸಾದ್ಯಂತವಾಗಿ ವಿವರಿಸಿರುವ ಪೊಲೀಸ್ ಪಾಟೀಲ್ ಗುರುಗಳ ಭಾವನೆಗಳ ಆರ್ದ್ರತೆಯ ಅರಿವಾಗುವುದು ಅವರ ಅಂತಿಮ ದಿನದ ಮಾತುಗಳಲ್ಲಿ. ಸಡಗರದಿಂದ ಲಕ್ಷ್ಮಿ ಪೂಜೆ ಮಾಡುತ್ತಿದ್ದ ವಿಜಯಲಕ್ಷ್ಮಿ ಅಮ್ಮ ಅಂದು ತೀವ್ರ ಅನಾರೋಗ್ಯದಿಂದ ಶಿವಲೋಕಕ್ಕೆ ಹೊರಟ ಆಘಾತ ಅವರನ್ನೆರಗಿ ಇಡೀ ಕುಟುಂಬವನ್ನು ದುಃಖದ ಕಡಲಲ್ಲಿ ಮುಳುಗಿಸಿತು.
ಕೊನೆಯ ಅಧ್ಯಾಯದಲ್ಲಿ ಭರತ ಭೂಮಿಯಲ್ಲಿ ಜನಜನಿತವಾಗಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಗೋವಿನ ಹಾಡಿನಲ್ಲಿರುವ ಪುಣ್ಯಕೋಟಿ ಎಂಬ ಹಸುವಿಗೆ ಪತ್ನಿ ವಿಜಯಲಕ್ಷ್ಮಿಯನ್ನು ಹೋಲಿಸುತ್ತಾ ಕ್ಯಾನ್ಸರ್ ಎಂಬ ಮಹಾಮಾರಿ ವ್ಯಾಘ್ರನ ದಾಳಿಗೆ ವಿಚಲಿತಳಾಗದೆ ಸೂಕ್ತ ಚಿಕಿತ್ಸೆ ಪಡೆದು ಊರಿಗೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಅರ್ಬುದ ವ್ಯಾಘ್ರನಿಗೆ ತನ್ನ ಬಾಕಿ ಇರುವ ಮಗಳ ಬಾಣಂತನ ಕಾರ್ಯವನ್ನು ಪೂರೈಸಿ ಬರಲು ಇನ್ನಿಲ್ಲದಂತೆ ಕೇಳಿಕೊಂಡ ತನ್ನ ಪುಣ್ಯಕೋಟಿ ಪತ್ನಿಯು ಗೋವಿನ ಹಾಡಿನ ಪುಣ್ಯಕೋಟಿಯಂತೆ ಮರಳಿ ಮನೆಗೆ ಬರಲು ಸಾಧ್ಯವಾಗದೆ ವಿಧಿನಿಯಾಮಕದಂತೆ ಆ ಕಾಲನಲ್ಲಿ ಲೀನವಾದಳು ಎಂದು ಬದುಕಿನ ಕಟು ಸತ್ಯವನ್ನು ಪೋಲಿಸ್ ಪಾಟೀಲ್ ಗುರುಗಳು ವಿವರಿಸಿದ್ದಾರೆ.
ಗ್ರಂಥದ ಮೂರನೇ ಭಾಗವಾದ ಪದ್ಯ ಮಾಲೆಯಲ್ಲಿ
ವಿಜಯಲಕ್ಷ್ಮಿ ಅಮ್ಮ ಬರೆದ ಕೆಲ ಕವನಗಳು ಇದ್ದು ಮತ್ತೆ ಕೆಲವು ಕವನಗಳಲ್ಲಿ ತನ್ನ ಪತ್ನಿಯ ಆದರ್ಶ ಮತ್ತು ಅನುಕರಣೀಯ ಗುಣಗಳ ಕುರಿತು ಪೋಲಿಸ್ ಪಾಟೀಲ್ ಗುರುಗಳು ಭಾವನಾ ಪೂರ್ಣವಾಗಿ ಬರೆದಿದ್ದು ಪುಸ್ತಕದ ಚೆ(ಬೆ)ನ್ನುಡಿಯಲ್ಲಿ ಮರೆಯೆಂದರೆ ಹ್ಯಾಂಗ ಮರೆಯಲಿ ಎಂದು ಬರೆದ ಕವನ ಮನ ಕಲಕುವಂತಿದೆ. ನಿಜ ಮರೆತೇನೆಂದರೂ ಮರೆಯಲಾಗದ ಮಹಾಸಾದ್ವಿ ವಿಜಯ ಲಕ್ಷ್ಮಿ ಅಮ್ಮ
ತನ್ನ ಸದ್ಗುಣಗಳಿಂದ ನಮ್ಮೆಲ್ಲರ ಮನಗಳಲ್ಲಿ ಮನೆ ಮಾಡಿದ್ದಾರೆ ಎಂದರೆ ತಪ್ಪಿಲ್ಲ.
ಆ ಮಹಾತಾಯಿಗೆ ಇದೋ ನನ್ನ ನಮನ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್ ಜಿಲ್ಲೆ