Ad image

ಹಾತ್‍ಕರ್ಗಾ ಕೈಮಗ್ಗ ಮೇಳ – 2024; ವಸ್ತ್ರ ಭಂಡಾರ ಮೇಳದಲ್ಲಿ 62 ಲಕ್ಷ ರೂ.ಗಳ ವ್ಯಾಪಾರ, ವೈವಾಟು ; ಪ್ರತಿ ವರ್ಷ ಕೈಮಗ್ಗ ವಸ್ತುಗಳ ಮಾರಾಟ ಮೇಳ ಆಯೋಜನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

Vijayanagara Vani
ಹಾತ್‍ಕರ್ಗಾ ಕೈಮಗ್ಗ ಮೇಳ – 2024; ವಸ್ತ್ರ ಭಂಡಾರ ಮೇಳದಲ್ಲಿ 62 ಲಕ್ಷ ರೂ.ಗಳ ವ್ಯಾಪಾರ, ವೈವಾಟು ; ಪ್ರತಿ ವರ್ಷ ಕೈಮಗ್ಗ ವಸ್ತುಗಳ ಮಾರಾಟ ಮೇಳ ಆಯೋಜನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ 12: ಕೈಮಗ್ಗ ಮೇಳವು ರಾಜ್ಯ ಹಾಗೂ ಹೊರರಾಜ್ಯಗಳ ವೈವಿಧ್ಯಮಯ ಉತ್ಪನ್ನಗಳಿಂದ ಹುಬ್ಬಳ್ಳಿ-ಧಾರವಾಡ ಜನತೆಯನ್ನು ಆಕರ್ಷಿಸುತ್ತಿದೆ. ನವೆಂಬರ 1, 2024 ರಿಂದ ಪ್ರಾರಂಭಗೊಂಡ ಕೈಮಗ್ಗ ಮೇಳವು ನವೆಂಬರ 14, 2024ರವೆಗೆ ಜರುಗಲಿದ್ದು, ಜನರನ್ನು ತನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮೇಳದಲ್ಲಿ ನವೆಂಬರ 1 ರಿಂದ 10 ವರೆಗೆ ಒಟ್ಟು ರೂ. 62,33,245 ಗಳ ವಹಿವಾಟು ಆಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಇಂದು ಮಧ್ಯಾಹ್ನ ಕೈಮಗ್ಗ ಮೇಳಕ್ಕೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ಕೈಮಗ್ಗ ಮೇಳದಲ್ಲಿ ಹರಿಯಾಣ, ಅಂಧ್ರಪ್ರದೇಶ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮಬಂಗಾಳ, ಜಾಖರ್ಂಡ ಮತ್ತು ಬಿಹಾರ ಸೇರಿದಂತೆ 9 ರಾಜ್ಯಗಳಿಂದ ಒಟ್ಟು 29 ಕೈಮಗ್ಗ ಸಹಕಾರ ಸಂಘಗಳು ಹಾಗೂ ವೈಯಕ್ತಿಕ ನೇಕಾರರು ಕೈಮಗ್ಗ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದಾರೆ ಎಂದರು.

ರಾಜ್ಯದ ಬಾಗಲಕೋಟೆ, ಹಾವೇರಿ, ಧಾರವಾಡ, ಗದಗ, ಚಿತ್ರದುರ್ಗ, ಹಾಸನ, ಉತ್ತರಕನ್ನಡ, ಬೆಂಗಳೂರು ನಗರ, ತುಮಕೂರು, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಒಟ್ಟು 31 ಕೈಮಗ್ಗ ಸಹಕಾರ ಸಂಘಗಳು ಭಾಗವಹಿಸಿದ್ದು, ಮೇಳವು ರಾಜ್ಯ ಹಾಗೂ ಹೊರರಾಜ್ಯಗಳ ಕೈಮಗ್ಗ ಉತ್ಪನ್ನಗಳಿಂದ ಕೂಡಿ ದೇಶದ ಕೈಮಗ್ಗ ಉತ್ಪನ್ನಗಳ ಸಂಗಮವಾಗಿದೆ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಒಂದು ಶಾಲು 35 ಸಾವಿರ ಮೊತ್ತವಾಗಿದ್ದು ಆ ಶಾಲನ್ನು ತಯಾರಿಸಲು ಸುಮಾರು ಒಂದರಿಂದ ಒಂದುವರೆ ವರ್ಷ ಸಮಯ ಬೇಕಾಗುತ್ತದೆ. ಶಾಲನ್ನು ತಯಾರಿಸುವಾಗ ನೇಕಾರರು ತಾವು ಹಾಕುವಂತಹ ಶ್ರಮವನ್ನು ಇಲ್ಲಿ ನಾವು ತಿಳಿದುಕೊಳ್ಳಬೇಕು. ಇಂದಿನ ಪೀಳಿಗೆ ಕೈಮಗ್ಗದ ಮಹತ್ವ ತಿಳಿದು, ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ನಮ್ಮ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸುಮಾರು 20 ಜನರು ಸಹ ಕೈಮಗ್ಗ ನೇಕಾರಿಕೆಯನ್ನು ಮಾಡುತ್ತಾ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ನವಲಗುಂದ ಕೈಮಗ್ಗ ವಸ್ತುಗಳಿಗೆ ಹೆಚ್ಚು ಬೇಡಿಕೆ ಇರುವುದು ಕಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಯೈದ ನಯಿಂ, ಜವಳಿ ಪ್ರವರ್ತನಾಧಿಕಾರಿ ಅಶೋಕ ಸುರಪುರ, ಇನಸ್ಟಿಟ್ಯೂಟ್ ಆಫ್ ಇಂಜಿನೀಯರ್ಸನ ಪ್ರಮೊದ ವೈದ್ಯ ಹಾಗೂ ಇತರರು ಇದ್ದರು.

ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುವ ಕೈಮಗ್ಗ ಉತ್ಪನ್ನಗಳು: ಇಳಕಲ್ ಸೀರೆ, ಗುಳಿದಗುಡ್ಡ ಕಣ. ಹಾವೇರಿ, ದಾವಣಗೆರೆಯ ಬೆಡ್ ಶೀಟ್, ಟವಲ್‍ಗಳು, ಲುಂಗಿಗಳು, ಕಾಟನ್ ವಸ್ತಗಳು ಹಾಗೂ ಕಾಟನ್ ಸೀರೆಗಳು. ನವಲಗುಂದ ಧರಿ, ಜಮಖಾನಾ. ಲಂಬಾಣಿ ಉಡುಪುಗಳ ಮೇಲಿನ ಕಸೂತಿ, ಸೆಂಡೂರು ಕಸೂತಿ, ಕಲಘಟಗಿಯ ಬಿದಿರಿನಿಂದ ರೂಪಿಸಲ್ಪಟ್ಟ ವಸ್ತುಗಳು, ಧಾರವಾಡ ಕಸೂತಿ ಸೀರೆಗಳು, ಚನ್ನಪಟ್ಟಣದ ಗೊಂಬೆಗಳು, ನೆಲ್ಲೂರು ಜಿಲ್ಲೆ ವೆಂಕಟಗಿರಿ ಸೀರೆಗಳು, ಗೋಕಾಕ್‍ನ ಮಣ್ಣಿನಿಂದ ಮಾಡಿದ ಕರಕುಶಲ ವಸ್ತುಗಳು, ಮೊಳಕಾಲ್ಲೂರು ರೇಷ್ಮೆ ಸೀರೆಗಳು, ಶಲ್ಯಾಗಳು, ಸೆಣಬಿನಿಂದ ಮಾಡಿದ ವಸ್ತುಗಳು, ಕಾಶ್ಮೀರಿ ಶಾಲುಗಳು, ಕೊಳ್ಳೋತ್ತಾ ಸೀರೆಗಳು ಮತ್ತು ಡ್ರೆಸ್ಸಿಂಗ್ ಮಟೀರಿಯಲ್ಸ್ ಮಾರಾಟಕ್ಕೆ ಲಭ್ಯವಿವೆ.

ಹತ್ತು ಹಲವು ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳಿಂದ ಮೇಳವು ಜನಮನ ಸೆಳೆಯುತ್ತಿದೆ. ಮೇಳಕ್ಕೆ ಸಾರ್ವಜನಿಕರನ್ನು ಸೆಳೆಯುವ ನಿಟ್ಟಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೆ ಕೃಷಿ ಮಹಾವಿದ್ಯಾಲಯ ಹಾಗೂ ಕೆ.ಎಲ್.ಇ ಟೆಕ್ನಾಲಾಜಿಕಲ್ ಇನ್ ಸ್ಟಿಟ್ಯೂಟ್‍ನ ವಿದ್ಯಾರ್ಥಿಗಳು ಪ್ಯಾಶನ್ ಡಿಸ್‍ಪ್ಲೆ ಜರುಗಿಸಿದ್ದಾರೆ.

ಮೇಳಕ್ಕೆ ಸಾಂಸ್ಕøತಿಕ ಮೆರಗು: ಕೆಸಿಡಿಯ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿ ಬಳಗ ಮೇಳದ ವೇದಿಕೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿಸಿದ್ದಾರೆ. ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲದ ವಿದ್ಯಾರ್ಥಿಗಳು ಜವಳಿ ಸಂಬಂಧಿತ ಕಲಾಕೃತಿಗಳನ್ನು ಪ್ರದರ್ಶನಕ್ಕಿಡುವ ಮೂಲಕ ಮೇಳಕ್ಕೆ ಮೆರಗು ತಂದಿದ್ದಾರೆ. ಬಾಲ ಬಳಗ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನವೂ ವೇದಿಕೆಯ ಮೇಲೆ ಹತ್ತಿಯಿಂದ ನೂಲು ತೆಗೆಯುವ ಪಾತ್ಯಕ್ಷಿಕೆ ಪ್ರಸ್ತುತ ಪಡಿಸುತ್ತಿದ್ದಾರೆ. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ತಾಂತ್ರಿಕ ವಿದ್ಯಾಲಯದ ಮಕ್ಕಳು ಬ್ಲಾಕ್ ಹಾಗೂ ಸ್ಕ್ರೀನ ಪ್ರಿಂಟಿಗ್‍ನ್ನು ವೇದಿಕೆಯ ಮೇಲೆ ಕೈಗೊಳ್ಳುವ ಮೂಲಕ ಮೇಳಕ್ಕೆ ನಿರೀಕ್ಷೆಗೆ ಮೀರಿ ಜನಸ್ತೋಮ ಭೇಟಿ ನೀಡುವಂತೆ ಮಾಡಿದ್ದು, ಸಾರ್ವಜನಿಕರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸುತ್ತಿದ್ದು ಪರೋಕ್ಷವಾಗಿ ಕೈಮಗ್ಗ ನೇಕಾರರನ್ನು ಪೋತ್ಸಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

Share This Article
error: Content is protected !!
";