ಬಳ್ಳಾರಿ,ನ.26
ಪ್ರಪಂಚದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತ ದೇಶ 2ನೇ ಸ್ಥಾನದಲ್ಲಿರಲು ಡಾ.ವರ್ಗೀಸ್ ಕುರಿಯನ್ ಅವರೇ ಕಾರಣವಾಗಿದ್ದು, ಹಾಗಾಗಿ ಅವರನ್ನು ಕ್ಷೀರ ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ. ಹಾಲು ಉತ್ಪಾದನೆಯಲ್ಲಿ ಡಾ.ವರ್ಗೀಸ್ ಕುರಿಯನ್ ಅವರ ಸೇವೆ ಅಪಾರವಾಗಿದೆ ಎಂದು ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ (ಮಾರುಕಟ್ಟೆ) ಕೆ.ಎಸ್.ರ್ರಿಸ್ವಾಮಿರೆಡ್ಡಿ ಅವರು ಹೇಳಿದರು.
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ವತಿಯಿಂದ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾಂತಿದಾಮ ಆವರಣದ ಬಾಲಕಿಯರ ಬಾಲಮಂದಿರದಲ್ಲಿ ಮಂಗಳವಾರ ಕ್ಷೀರಕ್ರಾಂತಿಯ ಪಿತಾಮಹ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀ ಯಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಮೂಲ್ ಡೇರಿಯ ಸ್ಥಾಪಕರು ಮತ್ತು ಭಾರತದಲ್ಲಿ ಅಪರೇಷನ್ ಫ್ಲಡ್ (ಕ್ಷೀರ ಕ್ರಾಂತಿ) ಎಂಬ ಜಗತ್ತಿನ ಅತಿ ದೊಡ್ಡ ಡೇರಿ ಯೋಜನೆಯನ್ನು ಪ್ರಾರಂಭಿಸಿ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕರ ದೇಶವನ್ನಾಗಿ ಮಾಡಲು ಕಾರಣೀಕೃತರಾದ ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ದಿನವಾದ ನ.26 ರಂದು “ರಾಷ್ಟ್ರಿಯ ಹಾಲು ದಿನಾಚರಣೆ” ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಬಕೊವಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಟಿ.ಮಲ್ಲಿಕಾರ್ಜುನ ಅವರು ಮಾತನಾಡಿ ದೈನಂದಿನ ಜೀವನದಲ್ಲಿ ಬಹಳಷ್ಟು ಕಲಬೆರಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಲು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉಪಯೋಗಿಸಿ ಆರೋಗ್ಯವಾಗಿರಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಭೂಷಣ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ವರ್ಗೀಸ್ ಕುರಿಯನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ರಾಬಕೊವಿ ಹಾಲು ಒಕ್ಕೂಟದ ಮಾರುಕಟ್ಟೆ ಗುತ್ತಿಗೆ ಸಮಾಲೋಚಕರಾದ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ನಾಗವೇಣಿ, ಪಾರ್ವತಿ, ಒಕ್ಕೂಟದ ಸಿಬ್ಬಂದಿಗಳಾದ ವೆಂಕಟರತ್ನಬಾಬು, ಬಿ.ಜಗದೀಶ್, ಪೊಬ್ಬತ್ತಿ ಗೋವಿಂದರಾಜುಲು, ಮಲ್ಲಿಕಾರ್ಜುನ, ವೀರೇಶ ಹಳೇಕೋಟೆ, ಕೆಮಿಸ್ಟ್ ಸರೋಜ, ಲೋಹಿತ್ ಕುಮಾರ್, ಸಿ.ಎನ್.ಮಂಜುನಾಥ, ಬಾಬು.ಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಂದಿನಿ ಬಾದಾಮಿ ಹಾಲನ್ನು ವಿತರಿಸಲಾಯಿತು.