ಬಳ್ಳಾರಿ,ಡಿ.02
ಕಾನೂನಿನಾತ್ಮಕವಾಗಿರುವ ಮಕ್ಕಳ ಹಕ್ಕುಗಳ ಹಿತ ರಕ್ಷಣೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಅವರು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ನಜೀರ್ ಸಭಾಂಗಣದಲ್ಲಿ ‘ಬಾಲ್ಯವಿವಾಹ, ಪೋಕ್ಸೋ, ಆರ್.ಟಿ.ಐ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ’ ಕುರಿತು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ದೌರ್ಜನ್ಯವಾದಲ್ಲಿ ಬಾಲ್ಯ ವಿವಾಹ ನಿಷೇಧ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, ಪೋಕ್ಸೋ, ಸೇರಿದಂತೆ ಇನ್ನಿತರೆ ಕಾನೂನನಡಿ ಕಠಿಣ ಶಿಕ್ಷೆಯಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದೆಡೆ 10 ಸಾವಿರಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 202 ಪ್ರಕರಣಗಳಿಗೆ ಶಿಕ್ಷೆ ಪ್ರಕಟವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಹಿತರಕ್ಷಣೆಗೆ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಸಮಾಜದ ಪ್ರತಿಯೊಬ್ಬರೂ ಮಕ್ಕಳ ವಿಷಯದಲ್ಲಿ ಅತ್ಯಂತ ಸೂಕ್ಷö್ಮತೆಯನ್ನು ಪ್ರದರ್ಶಿಸಿ, ಸಂವೇದನಾ ಶೀಲತೆ ಉಳಿಸಿಕೊಳ್ಳಬೇಕಿದೆ. ಶಿಶು ಮರಣ, ಹಾಗೂ ತಾಯಿ ಮರಣ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಸುಸ್ಥಿರ ಅಭಿವೃದ್ಧಿ ಗುರಿಯ 17 ಕಾರ್ಯಕ್ರಮಗಳಲ್ಲಿ 9 ಕಾರ್ಯಕ್ರಮಗಳು ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದ್ದು, ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲರೂ ಮಕ್ಕಳಪರ ಕಾಳಜಿ ವಹಿಸಿಕೊಂಡು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿನ ಅನಿಷ್ಠ ಪದ್ಧತಿ-ಪಿಡುಗು ಹೋಗಲಾಡಿಸುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನು ಕಾಯ್ದೆಗಳ ಮನವರಿಕೆ ಮಾಡಿಕೊಳ್ಳಬೇಕು. 18 ವರ್ಷದೊಳಗಿನ ಮಕ್ಕಳು ತಿಳಿದು ಅಥವಾ ತಿಳಿಯದೇ ತಪ್ಪು ಮಾಡಿದ್ದಲ್ಲಿ ಕಠಿಣ, ಅವಮಾನೀಯ ಶಿಕ್ಷೆ ನೀಡಲು ಕಾನೂನಡಿ ಅವಕಾಶವಿರುವುದಿಲ್ಲ ಎಂದರು.
ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ರಾಜೇಶ್.ಎನ್ ಹೊಸಮನೆ ಅವರು ಮಾತನಾಡಿ, ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಕಾನೂನಾತ್ಮಕಾವಾಗಿ ಕಾಯುವ ಕೆಲಸವನ್ನು ಸರ್ಕಾರ ಹಾಗೂ ಸರ್ಕಾರವನ್ನು ಪ್ರತಿನಿಧಿಸುವ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಮಕ್ಕಳ ಹಕ್ಕುಗಳ ಕಾಯ್ದೆಗಳ ಕುರಿತು ಆಯೋಜನೆ ಮಾಡಿರುವ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧಿಕಾರಿಗಳು ಹಾಗೂ ಪ್ರತಿಯೊಬ್ಬರೂ ನಿಷ್ಠೆಯಿಂದ ಕೆಲಸ ನಿರ್ವಹಿಸುವ ಮೂಲಕ ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಶಿಶು ಮರಣ, ಗರ್ಭೀಣಿಯ ಮರಣಗಳ ಪ್ರಕರಣಗಳನ್ನು ಕಡಿಮೆಗೊಳಿಸಲು ಕಾರ್ಯ ಪ್ರವೃತ್ತರಾಗಬೇಕು. ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಕೆ.ಹೆಚ್ ಅವರು ಮಾತನಾಡಿ, ಮಕ್ಕಳ ಹಾಗೂ ಮಹಿಳೆಯರ ಪರ ಇರುವ ಕಾನೂನು ಕಾಯ್ದೆಗಳ ಅರಿವು ಮೂಡಿಸಲು ಜಿಲ್ಲೆಯಲ್ಲಿ ಎರಡು-ಮೂರು ತಿಂಗಳಿಗೊಮ್ಮೆ ವಿವಿಧ ಕಾರ್ಯಕ್ರಮ ಮತ್ತು ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ. ಶಿಕ್ಷಣ ಕೊರತೆಯಿಂದ ಬಾಲ್ಯ ವಿವಾಹವಾಗುತ್ತಿದ್ದು, ಗ್ರಾಮೀಣ ಭಾಗದ ಪೋಷಕರಿಗೆ ಕಾನೂನು-ಕಾಯ್ದೆಗಳ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಮಕ್ಕಳ ಸಹಾಯವಾಣಿ-1098 ಹಾಗೂ ಪೋಕ್ಸೋ ಕಾಯ್ದೆಯ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೊಪ್ಪಳದ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ರಾಘವೇಂದ್ರ ಭಟ್ ಅವರು ‘ಬಾಲ್ಯವಿವಾಹ, ಪೋಕ್ಸೋ, ಆರ್.ಟಿ.ಇ. ಕಾಯ್ದೆ ಹಾಗೂ ಮಕ್ಕಳ ರಕ್ಷಣೆ’ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷಿö್ಮ ಮೈದೂರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.