ಬಳ್ಳಾರಿ,ಡಿ.03
ಹೆಚ್‌ಐವಿ ಸೋಂಕಿಗೆ ತುತ್ತಾದವರು ಖಾಯಿಲೆಗಿಂತ ಹೆಚ್ಚಾಗಿ ಮಾನಸಿಕವಾಗಿ ಭಯಭೀತರಾಗುತ್ತಾರೆ. ಸಮಾಜದಲ್ಲಿ ಎಲ್ಲಾ ರೀತಿಯ ಹಕ್ಕು ಹೊಂದಲು ಅವರು ಅರ್ಹರಿದ್ದು, ಅವರಿಗೆ ಸ್ಪೂರ್ತಿ, ಧೈರ್ಯ ಮತ್ತು ನೈತಿಕ ಬಲ ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ: ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷವಾಕ್ಯದಡಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1980 ರ ದಶಕದಲ್ಲಿ ಕಂಡುಬಂದ ಹೆಚ್‌ಐವಿ ಸೋಂಕಿನಿಂದ ಹರಡುವ ಏಡ್ಸ್ ಖಾಯಿಲೆಯು, ಇಂದು ಜಗತ್ತಿನ ಎಲ್ಲಾ ರಾಷ್ಟ್ರಗಳ ತನ್ನ ಪ್ರಭಾವವನ್ನು ಬೀರಿದೆ. ಹೆಚ್.ಐ.ವಿ ಸೋಂಕಿತರನ್ನು ಮಾನವೀಯ ದೃಷ್ಟಿಯಿಂದ ನೋಡುವುದರ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಹೆಚ್.ಐ.ವಿ ಸೋಂಕಿನಿಂದ ಹರಡುವ ಏಡ್ಸ್ ಕಾಯಿಲೆಯ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡುವುದರ ಜೊತೆಗೆ ಹೆಚ್.ಐ.ವಿ ಏಡ್ಸ್ನಿಂದ ಉಂಟಾಗುವ ಕಳಂಕ ಮತ್ತು ತಾರತಮ್ಯ ಹೋಗಲಾಡಿಸಿ, ಹೊಸ ಪ್ರಕರಣ ಹಾಗೂ ಸಾವುಗಳನ್ನು ಸೊನ್ನೆಗೆ ತರಲು ಜಾಗೃತಿ ಮೂಲಕ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 1980 ರಲ್ಲಿ ಮೊದಲ ಬಾರಿಗೆ ಡಿ.01 ರಂದು ಹೆಚ್.ಐ.ವಿ ಸೋಂಕಿನ ತಡೆಗಾಗಿ ಜಾಗತಿಕ ಒಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮ ಆರಂಭಿಸಲಾಯಿತು. ಸಮುದಾಯದ ಪ್ರತಿಯೊಬ್ಬರಿಗೂ ಸೋಂಕು ಹರಡುವ ವಿಧಾನ ಹಾಗೂ ಮುಂಜಾಗೃತೆಗಳ ಕುರಿತು ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವ ಮೂಲಕ ಪ್ರಸ್ತುತ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್‌ಐವಿ ಭಾದಿತರಿಗೋಸ್ಕರ ಕಾರ್ಯನಿರ್ವಹಿಸುವ ವಿಮುಕ್ತಿ, ನಿತ್ಯ ಜೀವನ, ಸೌಖ್ಯ ಬೆಳಕು ಸಂಸ್ಥೆಗಳ ಮೂಲಕ ಲೈಂಗಿಕ ಅಲ್ಪ ಸಂಖ್ಯಾತರನ್ನು ಸಹ ಸೋಂಕಿಗೆ ಬಾಧಿತರಾಗದಂತೆ ನಿರಂತರ ತಪಾಸಣೆ ಹಾಗೂ ಜಾಗೃತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಹೆಚ್‌ಐವಿ ಸೋಂಕಿತ ಮಹಿಳೆ ಗರ್ಭಿಣಿಯಾದರೂ ಸಹ ಜನನವಾಗುವ ಮಗು ಹೆಚ್‌ಐವಿ ಸೋಂಕಿಲ್ಲದೇ ಜನಿಸಲು ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಸೋಂಕು ಹರಡದಂತೆ ಮುಂದಿನ ಪೀಳಿಗೆಗೆ ಸಂರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.
ಜಾಗೃತಿ ಜಾಥಾಕ್ಕೆ ಚಾಲನೆ:
ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್.ಹೊಸಮನೆ ಅವರು ಚಾಲನೆ ನೀಡಿ ಮಾತನಾಡಿ, ಏಡ್ಸ್ ರೋಗ ಕೊನೆಗಾಣಿಸುವುದರೊಂದಿಗೆ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಬೇಕು. ಹೆಚ್‌ಐವಿ ಸೋಂಕಿತ ವ್ಯಕ್ತಿಗಳಿಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದರು.
ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೆಚ್‌ಐವಿ ಸೋಂಕು ಕುರಿತಾಗಿ ಜಾಗೃತಿ ಮೂಡಿಸಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಏಡ್ಸ್ ನಿರ್ಮೂಲನೆಗಾಗಿ ಆಪ್ತಸಮಾಲೋಚನೆ ಹಾಗೂ ಜಾಗೃತಿ ಮೂಡಿಸುವ, ಮುಖ್ಯ ವಾಹಿನಿಗೆ ತರಲು, ಸೋಂಕು ಪರೀಕ್ಷೆ ಕೈಗೊಂಡ, ಉತ್ತಮ ಮೇಲ್ವಿಚಾರಣೆ, ಹೆಚ್‌ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸೇವೆ ಪರಿಗಣಿಸಿ ಗಣ್ಯರಿಗೆ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹೆಚ್‌ಐವಿ ಸೋಂಕಿನಿಂದಾಗುವ ಪರಿಣಾಮ ಕುರಿತು ಕಿರು-ನಾಟಕ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವಿರೇಂದ್ರ ಕುಮಾರ್, ನಿತ್ಯಜೀವನ ಸಂಸ್ಥೆಯ ಅಧ್ಯಕ್ಷರಾದ ಹೇಮಲತ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡ್ಯಾಪ್ಕೋ ಮೇಲ್ವಿಚಾರಕ ಗಿರೀಶ್, ಎಆರ್‌ಟಿ ಆಪ್ತಸಮಾಲೋಚಕ ಗಣೇಶ್ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.