ಧಾರವಾಡ 03: ರಸ್ತೆ ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವದರಿಂದ ಎಲ್ಲ ಸಂಚಾರಿಗಳು ಸುರಕ್ಷಿತವಾಗಿರುತ್ತಾರೆ. 2024 ರ ಜನೆವರಿಯಿಂದ ನವೆಂಬರವರಗೆ ಅವಳಿನಗರದಲ್ಲಿ 118 ವಾಹನ ಅಪಘಾತ ಪ್ರಕರಣಗಳಾಗಿದ್ದು, ಇದರಲ್ಲಿ 126 ಜನ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಆಯೋಜಿಸಿದ್ದ ಎಲ್.ಇ.ಡಿ ಸ್ಕ್ರೀನ್ ಹೊಂದಿರುವ ವಾಹನಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ರಸ್ತೆ ಸಾರ್ವಜನಿಕರಿಗೆ ಸೇರಿದ್ದು, ಸ್ವೆಚ್ಛಾಚಾರಿಗಳಾಗಿ ತಮಗೆ ತಿಳಿದಂತೆ ರಸ್ತೆಗಳಲ್ಲಿ ವಾಹನ ಓಡಿಸಬಾರದು. ಇದರಿಂದ ಸವಾರನ ಜೊತೆಗೆ ಸಂಚರಿಸುವವರಿಗೆ ಮತ್ತು ಇತರ ಸಹ ಪ್ರಯಾಣಿಕರ ಪ್ರಾಣಕ್ಕೂ ತೊಂದರೆ ಆಗುತ್ತದೆ. ರಸ್ತೆ ಸಂಚಾರ ನಿಯಮಗಳನ್ನು ಗೌರವಿಸಿ, ಪ್ರತಿಯೊಬ್ಬರು ಪಾಲಿಸಬೇಕೆಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ರಸ್ತೆ ಸಂಚಾರ ನಿಯಮಗಳ ಕುರಿತು ಸಾರ್ವಜನಿಕರ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಆಯೋಜಿಸಲಾಗಿದೆ. ಕರಪತ್ರ, ಪೊಸ್ಟರ್‍ಗಳ ಮೂಲಕ ಸಂಚಾರಿ ನಿಯಮಗಳ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯುವಕ, ಯುವತಿಯರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಓಡಿಸುವಾಗ ತಲೆಗೆ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಸೂಚಿತ ವೇಗದ ಮೀತಿಯನ್ನು ಪಾಲಿಸಬೇಕು. ರಸ್ತೆ ಬದಿಯಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಉಪ ಪೊಲೀಸ ಆಯುಕ್ತ ರವೀಶ ಸಿ.ಆರ್. ಅವರು ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ರಸ್ತೆ ಸುರಕ್ಷತೆ ಪಾಲನೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಿಬ್ಬಂದಿ ಜಿ.ವಿ.ದಿನಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.