ಬಳ್ಳಾರಿ,ಡಿ.14() ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡು ಒಟ್ಟು 31 ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಸುಸೂತ್ರವಾಗಿ ನಡೆದು, ವಿವಿಧ ವ್ಯಾಜ್ಯಗಳ ಪ್ರಕರಣಗಳು ವಿಲೇವಾರಿಯಾದವು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು ಖುದ್ದಾಗಿ ಪ್ರಕರಣಗಳ ವಿಲೇವಾರಿ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ನಡೆದ ಲೋಕ್-ಅದಾಲತ್‍ಗಳನ್ನು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು-ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳುವುದು ಉತ್ತಮ ಜೀವನ ನಡೆಸಲು ಒಂದು ಸದಾವಕಾಶ ಎಂದು ತಿಳಿಸಿದರು.
ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ್-ಅದಾಲತ್ ನಲ್ಲಿ ಗಂಡ-ಹೆಂಡತಿ ಪ್ರಕರಣ ಇತ್ಯರ್ಥದ ಸಂದರ್ಭದಲ್ಲಿ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಇದ್ದಾಗ ಒಳ್ಳೆಯ ಜೀವನ ಸಾಧ್ಯವಾಗುತ್ತದೆ ಎಂದು ಹೇಳಿದರು.
ತ್ವರಿತ ನ್ಯಾಯಕ್ಕಾಗಿ ಕಕ್ಷಿದಾರರು ಮುತುವರ್ಜಿ ವಹಿಸಿಕೊಂಡು, “ರಾಷ್ಟಿçÃಯ ಲೋಕ್ ಅದಾಲತ್”ನಲ್ಲಿ ಭಾಗವಹಿಸಿದರೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಂಡು ಸಾಮರಸ್ಯ ಜೀವನ ನಡೆಸಬಹುದು ಎಂದರು. ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಮಾನಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಾರ್ಯಪ್ರವೃತ್ತರಾಗುತ್ತಾರೆ ಎಂದರು.
ಅಖಂಡ ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ಒಟ್ಟು 65,278 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ 12,828 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಸಲುವಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 8,300 ಪ್ರಕರಣಗಳು ಈಗಾಗಲೇ ರಾಜಿ ಸಂಧಾನದ ಮೂಲಕ ಮುಕ್ತಾಯವಾಗಿರುತ್ತವೆ. 3 ಲಕ್ಷಕ್ಕಿಂತ ಹೆಚ್ಚು ವ್ಯಾಜ್ಯಪೂರ್ವ ಪ್ರಕರಣಗಳು ಸಹ ಮುಕ್ತಾಯಗೊಂಡಿದ್ದು, ಈ ವರ್ಷದ ಕೊನೆಯ ಲೋಕ್- ಅದಾಲತ್ ಯಶಸ್ವಿಯಾಗಿದೆ. ಇದಕ್ಕೆ ಕಾರಣೀಭೂತರಾದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಮತ್ತು ಸರ್ಕಾರದ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಜೇಶ್ ಎನ್.ಹೊಸಮನೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಮತ್ತು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಮೋದ್ ಸೇರಿದಂತೆ ಇತರರು ಇದ್ದರು.