ಧಾರವಾಡ ) ಡಿಸೆಂಬರ.20: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ದ ಧಾರವಾಡ ಜಿಲ್ಲಾ ಘಟಕದಿಂದ ತಾಲೂಕಿನ ದಡ್ಡಿ ಕಮಲಾಪೂರದಲ್ಲಿ ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೆಟ್ ಮಕ್ಕಳ ಸಮಾವೇಶವನ್ನು ಜನೆವರಿ 6 ರಿಂದ ಜನೆವರಿ 10, 2025 ರವರೆಗೆ ಆಯೋಜಿಸಲಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‍ದ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿಯವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಕೋರ್ಟ ವೃತ್ತದ ಹತ್ತಿರ ಇರುವ ಸ್ಕೌಟ್ಸ್ ಮತ್ತು ಗೈಡ್ಸ್‍ದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿದರು.
ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೆಟ್ ಮಕ್ಕಳ ಸಮಾವೇಶದಲ್ಲಿ ಬೆಳಗಾವಿ ವಿಭಾಗದ 8 ಶೈಕ್ಷಣಿಕ ಜಿಲ್ಲೆಗಳಾದ ಕಾರವಾರ, ಶಿರಸಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಿಂದ 800 ಜನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭಾಗವಹಿಸಲಿದ್ದಾರೆ. ಕಾಲೇಜುಗಳ 120 ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು 80 ಜನ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಹಾಗೂ ಕಾರ್ಯಕ್ರಮದ ಆಯೋಜನೆ ಮತ್ತು ಉಸ್ತುವಾರಿಗಾಗಿ 200 ಜನ ಸಿಬ್ಬಂದಿಗಳು ಸೇರಿ ಒಟ್ಟು 1,200 ಜನರು ಭಾಗವಹಿಸಲಿದ್ದಾರೆ.
ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಮತ್ತು ಸೌಟ್ಸ್ ಮತ್ತು ಗೈಡ್ಸ್‍ನ ಆಯಾ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾವಾರು ಪ್ರತಿಯೊಂದು ಜಿಲ್ಲೆಯನ್ನು ಪ್ರತಿನಿಧಿಸುವ ಮಕ್ಕಳಿಂದ ಸಾಹಸಮಯ ಚಟುವಟಿಕೆಗಳಾದ ಹಗ್ಗ ಏರುವುದು, ಸಮತೋಲನ ನಡೆಗೆ, ಕಮಾಂಡ್ ಗೋಡೆ, ಸಮತೋಲನ ಬ್ರಿಡ್ಜ್, ಹ್ಯಾಂಗಿಂಗ ಬ್ರಿಡ್ಜ್, ಟಾಯರ ಪಾಸಿಂಗ ವಾಚಿಂಗ ಟಾವರ ಮುಂತಾದ ಚಟುವಟಿಕೆಗಳು, ಕಲಾಪ್ರಕಾರಗಳು, ತಿಂಡಿ ತಿನಿಸುಗಳು ಹಾಗೂ ಉಡುಗೆ ತೊಡುಗೆಗಳು ಪ್ರದರ್ಶನಗೊಳ್ಳಲಿವೆ ಎಂದರು.
ಮಕ್ಕಳ ಪ್ರದರ್ಶನ, ಶೈಕ್ಷಣಿಕ ಉಪನ್ಯಾಸಗಳು, ರಸಪ್ರಶ್ನೆ ಕಾರ್ಯಕ್ರಮ, ಯೋಗಯಾಮ, ಸ್ವಚ್ಛತಾ ಕಾರ್ಯ ಚಟುವಟಿಕೆ, ಶಿಬಿರವಾಸದ ಕಲ್ಪನೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಶೈಕ್ಷಣಿಕ ಜಾಗೃತಿ ಮೂಡಿಸುವ ಮೌಲ್ಯಾಧಾರಿತ ಶಿಕ್ಷಕರೇ ನಿರ್ಮಿಸಿದ ಕಿರುಚಿತ್ರಗಳ ಪ್ರದರ್ಶನ, ಜಾನಪದ, ಸಂಗೀತ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಮಕ್ಕಳಲ್ಲಿ ನಮ್ಮ ಕಲೆ ಸಂಸ್ಕೃತಿಯ ಬಗ್ಗೆ ಅರಿವು ಮತ್ತು ಗೌರವ, ಶಿಸ್ತು, ಸಂಯಮ, ಮಾನವೀಯ ಮೌಲ್ಯಗಳು ಮುಂತಾದ ಸಕಾರಾತ್ಮಕ ಗುಣಗಳನ್ನು ರೂಢಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಚ. ಕರಿಕಟ್ಟಿ ಅವರು ತಿಳಿಸಿದರು.
ಸಭೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ವಿ.ವಿ.ಕಟ್ಟಿ, ಕೋಶಾಧಿಕಾರಿ ಬಸವರಾಜ ಕಡಕೋಳ, ಸ್ಕೌಟ್ಸ್ ಆಯುಕ್ತ ಎಸ್. ಐ. ನೇಕಾರ, ಸ್ಥಾನಿಕ ಆಯುಕ್ತರಾದ ಎಸ್. ವಿ. ಮೊರಬ, ಜಿಲ್ಲಾ ಸಹಾಯಕ ಆಯುಕ್ತ ಮಂಜುನಾಥ ಅಡಿವೇರ, ಸಿ. ಸಿ. ಅಳಗೋಡಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್‍ನ ಶಿಕ್ಷಕರು ಉಪಸ್ಥಿತರಿದ್ದರು
***