Ad imageAd image

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸಕಲ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ: ಜಗದೀಶ.ಜಿ

Vijayanagara Vani
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸಕಲ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ: ಜಗದೀಶ.ಜಿ
ಬೆಂಗಳೂರು ನಗರ ಜಿಲ್ಲೆ, ಡಿಸೆಂಬರ್ 20 ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 2025 ರಂದು ನಡೆಯುವ ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್.ಜಿ ರವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನವನ್ನು ಸಮತಟ್ಟು ಮಾಡುವ ವ್ಯವಸ್ಥೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೈ ಗೆತ್ತಿಕೊಳ್ಳುವಂತೆ ಹಾಗೂ ಮೈದಾನವನ್ನು ಅಚ್ಚುಕಟ್ಟಾಗಿ ಸಿದ್ಧಗೊಳಿಸುವಂತೆ ಜಂಟಿ ಆಯುಕ್ತರು ಬಿಬಿಎಂಪಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯು ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದು, ಗಣ್ಯಾತಿಗಣ್ಯರಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಮತ್ತು ಹಲವಾರು ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ವಿಧ್ವಂಸಕ ಕೃತ್ಯಗಳು ಅಥವಾ ಅವಘಡಗಳು ಸಂಭವಿಸದಂತೆ ಮುನ್ನೆಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಹಾಗೂ ಭದ್ರತಾ ವ್ಯವಸ್ಥೆಗಾಗಿ ಗೇಟ್ ಬಳಿ ಬ್ಯಾಗೇಜ್ ಸ್ಕ್ಯಾನರ್ ಗಳನ್ನು ಹಾಗೂ ಸಿಸಿ ಕ್ಯಾಮರಗಳನ್ನು ಅಳವಡಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದ ತಾಲೀಮು ಹಾಗೂ ಕಾರ್ಯಕ್ರಮ ನಡೆಯುವ ದಿನದಂದು ಪರೇಡ್ ಮೈದಾನದಲ್ಲಿ ಅಗತ್ಯ ತುರ್ತು ಔಷಧಿಗಳು ಹಾಗೂ ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ ಮುತ್ತ ವಾಹನ ಸಂಚಾರ ನಿಯಂತ್ರಣ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರಿಗೆ (ಸಂಚಾರ) ತಿಳಿಸಿದರು.
ಮೈದಾನದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ವಾಹನಗಳ ಹಾಗೂ ಅಗತ್ಯ ಸಿಬ್ಬಂದಿಯೊಂದಿಗೆ ಸಿದ್ಧವಿರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್ ಕೆ.ನಾಯಕ್, ಉಪ ಪೊಲೀಸ್ ಆಯುಕ್ತರು ಕೇಂದ್ರೀಯ ವಿಭಾಗ ಶೇಖರ್ ಹೆಚ್ ತೆಕ್ಕಣ್ಣನವರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Share This Article
error: Content is protected !!
";