ಕೊಪ್ಪಳ ಡಿಸೆಂಬರ್ 24 : ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹುದ್ದೆಯ ಅಪೂರ್ಣ ಅರ್ಜಿಗಳಿಗೆ ಆನ್ಲೈನ್ ಮೂಲಕ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ 87 ಅಂಗನವಾಡಿ ಕಾರ್ಯಕರ್ತೆಯರ ಮತ್ತು 374 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 4010 ಅರ್ಜಿಗಳು ಮತ್ತು ಸಹಾಯಕಿಯರ ಹುದ್ದೆಗೆ 5283 ಅರ್ಜಿಗಳು ಆನ್ಲೈನ್ ಮುಖಾಂತರ ಸ್ವೀಕೃತವಾಗಿರುತ್ತವೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ 1446 ಹಾಗೂ ಅಂಗನವಾಡಿ ಸಹಾಯಕಿಯರ 1537 ಅರ್ಜಿಗಳು ಅಪೂರ್ಣಗೊಂಡಿರುತ್ತವೆ. ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ರವರ ಆದೇಶದ ಪ್ರಕಾರ ಅಪೂರ್ಣಗೊಂಡ ಅರ್ಜಿಗಳನ್ನು ಮತ್ತೊಮ್ಮೆ ಅಪ್ಲೋಡ್ ಮಾಡಿ ಪೂರ್ಣಗೊಳಿಸಲು ಡಿಸೆಂಬರ್ 26 ರಿಂದ 2025ರ ಜನವರಿ 5 ರವರೆಗೆ ಅಭ್ಯರ್ಥಿಗಳಿಗೆ ಕಾಲಾವಕಾಶವನ್ನು ನೀಡಲಾಗಿದೆ.
ಅಪೂರ್ಣಗೊಂಡ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ನೀಡಿರುವ 4 ಹಂತಗಳನ್ನು https://karnemakaone.kar.nic.in/abcd/ ರ ಮೂಲಕ ಜನವರಿ 5 ರೊಳಗಾಗಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಪುನ: ಅವಕಾಶ ನೀಡಲಾಗುವುದಿಲ್ಲ. ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ದಿನಾಂಕ: 23-10-2024ರೊಳಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದು ಕಡ್ಡಾಯವಾಗಿರುತ್ತದೆ. ತದನಂತರದ ದಿನಾಂಕದಿಂದ ಪಡೆಯಲಾದ ದಾಖಲಾತಿಗಳನ್ನು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಕಛೇರಿಯನ್ನು ಖುದ್ದು ಸಂಪರ್ಕಿಸಬಹುದಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ