ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಜಿಲ್ಲೆಯಲ್ಲಿ ಶೇ. 98 ರಷ್ಟು ಯಶಸ್ಸು: ಶಾಮನೂರು ಟಿ ಬಸವರಾಜ್

Vijayanagara Vani
ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಜಿಲ್ಲೆಯಲ್ಲಿ ಶೇ. 98 ರಷ್ಟು ಯಶಸ್ಸು: ಶಾಮನೂರು ಟಿ ಬಸವರಾಜ್

ದಾವಣಗೆರೆ,ಜನವರಿ.16ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿನ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ಕಾರಣವಾಗಿದ್ದು ಈ ಯೋಜನೆಗಳ ಅನುಷ್ಟಾನದಲ್ಲಿ ಶೇ 98 ಕ್ಕಿಂತ ಹೆಚ್ಚು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ. ಬಸವರಾಜ್ ತಿಳಿಸಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಕ್ತಿ ಯೋಜನೆ; ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದ ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯದವರೆಗೆ 67,75,1001 ಟ್ರಿಪ್ಗಳಲ್ಲಿ ಮಹಿಳೆಯರು ಪ್ರಯಾಣಿಸಿದ್ದು ಇದರ ವೆಚ್ಚವಾಗಿ ರೂ.189,13,62,548 ರೂ.ಗಳನ್ನು ಸರ್ಕಾರದಿಂದ ಭರಿಸಲಾಗಿದೆ.

ಗೃಹಜ್ಯೋತಿ; ದಾವಣಗೆರೆ ಮತ್ತು ಹರಿಹರ ವಿಭಾಗದಿಂದ ಒಟ್ಟು 556624 ವಿದ್ಯುತ್ ಸಂಪರ್ಕ ಪಡೆದ ಆರ್.ಆರ್.ಸಂಖ್ಯೆಗಳಿದ್ದು ಇದರಲ್ಲಿ 502344 ಆರ್.ಆರ್.ಸಂಖ್ಯೆಯ ಫಲಾನುಭವಿಗಳು ಗೃಹಜ್ಯೋತಿಯಡಿ ನೊಂದಣಿಯಾಗಿದ್ದು ಇದರ ವೆಚ್ಚವಾಗಿ ಡಿಸೆಂಬರ್ ತಿಂಗಳಲ್ಲಿ ರೂ.21 ಕೋಟಿ ವೆಚ್ಚವನ್ನು ಹೊಂದಾಣಿಕೆ ಮಾಡಲಾಗಿದೆ.

ಗೃಹಲಕ್ಷ್ಮಿ; ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ನೀಡುತ್ತಿದ್ದು ಅಕ್ಟೋಬರ್ ಅಂತ್ಯದವರೆಗೆ 360849 ಮಹಿಳೆಯರಿಗೆ ಆರಂಭದಿಂದ ಇಲ್ಲಿಯವರೆಗೆ ರೂ.501.72 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ.

ಅನ್ನಭಾಗ್ಯ; ಅನ್ಯಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ.ಅಕ್ಕಿ ನೀಡುತ್ತಿದ್ದು ಇದರಲ್ಲಿ 5 ಕೆ.ಜಿ.ಅಕ್ಕಿ ನೀಡಿ ಉಳಿದ 5 ಕೆಜಿಯ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಸೆಪ್ಟೆಂಬರ್ ಅಂತ್ಯದವರೆಗೆ 342968 ಕಾರ್ಡ್ದಾರರಲ್ಲಿನ 1229893 ಸದಸ್ಯರಿಗೆ ಯೋಜನೆ ಆರಂಭವಾದಾಗಿನಿಂದ ರೂ.286.66 ಕೋಟಿಯನ್ನು ಡಿಬಿಟಿ ಮೂಲಕ ಅವರ ಖಾತೆಗೆ ವರ್ಗಾಯಿಸಲಾಗಿದೆ.

ಯುವನಿಧಿ; ಯುವನಿಧಿ ಯೋಜನೆಯಡಿ ಪದವಿ ಉತ್ತೀರ್ಣರಾದ ಹಾಗೂ ಡಿಪ್ಲೊಮಾ ಪಾಸಾದವರಿಗೆ ಶಿಷ್ಯವೇತನವಾಗಿ ಪ್ರತಿ ತಿಂಗಳು ಪದವೀಧರರಿಗೆ ರೂ.3000 ಮತ್ತು ಡಿಪ್ಲೊಮಾದಾರರಿಗೆ ರೂ.1500 ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2023 ರಲ್ಲಿ ಉತ್ತೀರ್ಣರಾದ 5802 ಅಭ್ಯರ್ಥಿಗಳಿಗೆ ರೂ.8,46,8700 ರೂ.ಗಳನ್ನು ಶಿಷ್ಯವೇತನವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ.

ಪೋಸ್ಟರ್ ಬಿಡುಗಡೆ; 2024 ನೇ ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರಿಗೆ ಹಾಗೂ ಡಿಪ್ಲೊಮಾ ಪಾಸಾದವರು ಯುವನಿಧಿಯಡಿ ನೊಂದಣಿ ಮಾಡಲು ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಗ್ಯಾರಂಟಿಗಳು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾಗಿದ್ದು ಎಲ್ಲಾ ಇಲಾಖೆ ಅಧಿಕಾರಿಗಳು ಶೇ 100 ರಷ್ಟು ಸಾಧನೆ ಮಾಡಬೇಕು. ಯಾರಿಗಾದರೂ ಡಿಬಿಟಿ ಸೇರಿದಂತೆ ಇನ್ನಿತರೆ ಸಮಸ್ಯೆಯಾದಲ್ಲಿ ಅವರ ದಾಖಲೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರಾದ ಅನೀಶ್ ಪಾಷ, ನಂಜಾನಾಯ್ಕ್ ,ಅನಿತಾಬಾಯಿ ಮಾಲತೇಶ, ರೇವಣಸಿದ್ದಪ್ಪ , ಮಂಜಣ್ಣ, ಡೋಲ್ ಚಂದ್ರು, ಸುಭಾನ್ ಸಾಬ್, ಎನ್ ನೀಲಗಿರಿಯಪ್ಪ, ಕೆ.ಶಿವಶಂಕರ್, ಶಶಿಕಲಾ ನಾಕುದರಿ, ನಾಗರಾಜ ಸಿ, ಎ.ಅರ್ ಚಂದ್ರಶೇಖರ್, ರಾಘವೇಂದ್ರ, ಎಸ್ ಗಿರೀಶ್ ಹಾಗೂ ಇನ್ನಿತರೆ ಸದಸ್ಯರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
error: Content is protected !!
";