ಕೊಪ್ಪಳ ಜನವರಿ 22 ಯಾವುದೇ ಒಂದು ನಾಡು ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಅತ್ಯವಶ್ಯಕವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಬುಧವಾರ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಹೋಟೆಲ್ ಬಿ.ಎಸ್. ಪವಾರ್ ಗ್ಯಾಂಡ್ ಹತ್ತಿರದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ಗೌರವ ಪ್ರಶಸ್ತಿ-2022, ಸಾಹಿತ್ಯಶ್ರೀ ಪ್ರಶಸ್ತಿ-2022 ಹಾಗೂ ಪುಸ್ತಕ ಬಹುಮಾನ-2021ರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ಮತ್ತು ಸಾಹಿತ್ಯ ಎಂಬುವುದು ನಾಡಿನ ಎರಡು ಕಣ್ಣುಗಳಿದ್ದಂತೆ. ಇವು ಎರಡು ಚೆನ್ನಾಗಿದ್ದರೆ, ಈ ನಾಡಿನ ಕೀರ್ತಿ ಚೆನ್ನಾಗಿರಲು ಸಾಧ್ಯವಾಗಿದೆ. ಸಾಹಿತ್ಯ ಅಕಾಡೆಮೆಯನ್ನು ಧೀಮಂತಗೊಳಿಸಿರುವುದು ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ ಹನುಮಂತರಾಯರು. ಅವರ ದೂರ ದೃಷ್ಟಿ ಕೋನದಿಂದಾಗಿ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಾರಂಭವಾಯಿತು. ನಂತರ ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕಾರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಕರ್ನಾಟಕ ಸಾಹಿತ್ಯ ಅಕಾಡೆಮೆ ಎಂದು ಮರು ನಾಮಕಾರಣ ಮಾಡಿದ್ದಾರೆ. ಈ ಅಕಾಡೆಮಿಗೆ ಮೊದಲು ರಾಜ್ಯದ ಶಿಕ್ಷಣ ಮಂತ್ರಿಗಳೇ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ನಂತರ ಬಹಳಷ್ಟು ಜನರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಎಸ್.ಆರ್.ಕಂಠಿ ಅವರು ಸಹ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅದಾದ ಮೇಲೆ ನನಗೂ ಒಂದುವರೆ ವರ್ಷಗಳ ಕಾಲ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿರುವುದಕ್ಕೆ ಹೆಮ್ಮೆಯಿದೆ ಎಂದರು.
ಇಂತಹ ಅಕಾಡೆಮಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ನೇಮಕ ಆಗದೇ ಇರುವ ಕಾರಣ ಅಕಾಡೆಮಿಗಳ ಅನೇಕ ಪ್ರಶಸ್ತಿಗಳು ನೀಡುವುದು ಬಾಕಿ ಉಳಿದಿತ್ತು. ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೇ ವೇಳೆ ಎಲ್ಲಾ ಅಕಾಡೆಮಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ನೇಮಕ ಮಾಡಿದ್ದಾರೆ. ಈಗ ಪ್ರಶಸ್ತಿ ಪ್ರದಾನಕ್ಕೆ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ ಪ್ರತಿಯೊಂದು ಅಕಾಡೆಮಿಗಳಿಗೆ ಪ್ರತಿ ವರ್ಷ 80 ಲಕ್ಷ ರೂ.ಗಳನ್ನು ನೀಡುವುದರ ಜೊತೆಗೆ ಪ್ರಾಧಿಕಾರಗಳಿಗೆ ವಿಶೇಷವಾದ ಅನುದಾನವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಅಕಾಡೆಮಿಯ ಕಾರ್ಯಕ್ರಮಗಳು ಬೆಂಗಳೂರು-ಮೈಸೂರು ಭಾಗಗಳಿಗೆ ಮಾತ್ರ ಸಿಮಿತವಾಗಿತ್ತು. ಆದರೆ, ಈ ಭಾಗದಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೆ. ಪ್ರಶಸ್ತಿಗಳು ಒಂದು ಭಾಗಕ್ಕೆ ಮಾತ್ರ ಸಿಮೀತವಾದರೆ, ಸಾಹೀತಿಗಳಿಗೆ ಅನ್ಯಾಯವಾಗುತ್ತದೆ ಮತ್ತು ಅವರು ಬೆಳಕಿಗೆ ಬರದಂತಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಉತ್ತರ ಕರ್ನಾಟಕದವರು ಇರುತ್ತಿರಲಿಲ್ಲ. ಆದರೆ, ಈಗ ನಮ್ಮ ಭಾಗದವರೂ ಸಹ ಆಯ್ಕೆ ಸಮಿತಿ ಸದಸ್ಯರಾಗುತ್ತಿದ್ದಾರೆ ಹಾಗೂ ಕೆಲವು ಪ್ರಶಸ್ತಿಗಳನ್ನು ನೀಡುವಂತಹ ಕೆಲಸವಾಗುತ್ತಿದೆ ಎಂದು ಹೇಳಿದರು.
ಇದೇ ವರ್ಷ ಜನವರಿ 27ರಂದು ವಿಧಾನಸೌಧ ಮುಂಭಾಗದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನನಗೆ ಹೆಮ್ಮೆಯಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನದಂತಹ ಕಾರ್ಯಕ್ರಮವನ್ನು ನಮ್ಮ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವುದಕ್ಕೆ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಕೊಡುಗೆಯಾಗಿರುವ ನಮ್ಮ ಕೋಪಣಚಲದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ಈ ಭಾಗದಲ್ಲಿ ಹಲವಾರು ಸಾಹಿತಿಗಳು, ಲೇಖಕರಿದ್ದಾರೆ. ಕನ್ನಡವನ್ನು ಉಳಿಸುವ ಮತ್ತು ಬೆಳೆಸುವಂತಹ ಕೆಲಸಗಳು ಹೆಚ್ಚಾಗಬೇಕು. ಕನ್ನಡ ಉಳಿಯಬೇಕಾದರೆ, ಮೊದಲು ಕನ್ನಡ ಶಾಲೆಗಳನ್ನು ಉಳಿಸಬೇಕು. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಕ್ಕೆ ಅನುಮತಿ ಕಡಿಮೆಯಾಗಬೇಕು. ನಮ್ಮ ವ್ಯವಹಾರ ಕನ್ನಡದಲ್ಲಿಯೇ ಕಡ್ಡಾಯವಾಗಬೇಕು. ಕನ್ನಡದಲ್ಲಿಯೇ ರೈಲ್ವೆ ಮತ್ತು ಬ್ಯಾಂಕಿAಗ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ಸಿಗಬೇಕು ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳದ ಹಿರಿಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಅಭಿನಂದನಾ ನುಡಿಗಳನ್ನಾಡಿದರು.
ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ 2022ನೇ ವರ್ಷದ ‘ಗೌರವ ಪ್ರಶಸ್ತಿ’ಯನ್ನು ಪ್ರೊ. ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ.ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಹಾಗೂ ತುಂಬಾಡಿ ರಾಮಯ್ಯನವರಿಗೆ ಪ್ರದಾನ ಮಾಡಲಾಯಿತು.
2022ನೇ ವರ್ಷದ `ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ಡಾ. ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ, ಡಾ. ಅನಸೂಯ ಕಾಂಬಳೆ, ಬಿ.ಮಹೇಶ್ ಹರವೆ, ಎಚ್.ಎನ್.ಆರತಿ, ಚಲಂ ಹಾಡ್ಲಹಳ್ಳಿ, ರೂಮಿ ಹರೀಶ್, ಡಾ. ಸಾರಿಕಾದೇವಿ ಎಲ್. ಕಾಳಗಿ ಇವರಿಗೆ ಪ್ರದಾನ ಮಾಡಲಾಯಿತು.
ಪುಸ್ತಕ ಬಹುಮಾನ: ಕಾರ್ಯಕ್ರಮದಲ್ಲಿ 2021ನೇ ವರ್ಷದ ಪುಸ್ತಕ ಬಹುಮಾನವನ್ನು ಚೀಮನಹಳ್ಳಿ ರಮೇಶಬಾಬು, ಡಾ. ಶೈಲೇಶ್ ಕುಮಾರ್, ಡಾ. ಗಜಾನನ ಶರ್ಮ, ಜಿ.ವಿ.ಆನಂದಮೂರ್ತಿ, ಬಿ.ಆರ್. ಪೊಲೀಸ್ ಪಾಟೀಲ್, ಭಾರತಿ ಬಿ.ವಿ., ಡಾ. ಎಸ್.ಪಿ. ಪದ್ಮಪ್ರಸಾದ್, ಡಾ.ಡೊಮಿನಿಕ್ ಡಿ., ಡಾ.ಎಚ್.ಎಸ್. ಸತ್ಯನಾರಾಯಣ, ಸಿ.ವಿ. ಶೇಷಾದ್ರಿ ಹೊಳವನಹಳ್ಳಿ, ಡಾ. ಕಿರಣ್ ವಿ.ಎಸ್., ಡಾ. ಕೆ.ಎಸ್. ನಾಗರಾಜ, ಡಾ. ಎ.ಎಸ್. ಪ್ರಭಾಕರ, ದಾದಾಪೀರ್ ಜೈಮನ್, ಮುಜಾಫರ್ ಅಸ್ಸಾದಿ, ಡಾ. ಜಿ.ಕೃಷ್ಣಪ್ಪ, ಯಶಸ್ವಿನಿ ಕದ್ರಿ ಅವರಿಗೆ ನೀಡಲಾಯಿತು.
2021ನೇ ವರ್ಷದ ಅಕಾಡೆಮಿಯ ಪುಸ್ತಕ ದತ್ತಿ ಬಹುಮಾನವನ್ನು ಅಕ್ಷಯ ಕಾಂತಬೈಲು, ಡಾ. ಶ್ರೀಧರ ಎಚ್.ಜಿ., ಸಹನಾ ಕಾಂತಬೈಲು, ಡಾ. ನಾಗ ಎಚ್. ಹುಬ್ಳಿ, ಡಾ. ಪ್ರಸಾದಸ್ವಾಮಿ ಎಸ್., ಸುಮಂಗಲಾ, ಅಕ್ಷಯ ಪಂಡಿತ್ ಹಾಗೂ ಡಾ. ಸುತಿ ಕಾಡನಕುಪ್ಪೆ ಇವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಎನ್., ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಅಜಮೀರ ನಂದಾಪುರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಹಾಗೂ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಪರಮಶಿವಮೂರ್ತಿ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಲಾದ ಡಾ ಬಿ.ಕೆ.ರವಿ, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ಇತರೆ ಅಧಿಕಾರಿಗಳು, ಸಾಹಿತಿಗಳು, ಲೇಖಕರು, ಚಿಂತಕರು ಮತ್ತು ಅನೇಕರು ಪಾಲ್ಗೊಂಡಿದ್ದರು.