ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಹಾಲಕ್ಕಿ ಸಮುದಾಯದ ಹಿರಿಯ ಜನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ಗುರುವಾರ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮೂರು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು ಚೇತರಿಸಿಕೊಂಡಿದ್ದರು. ರಾತ್ರಿವರೆಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದ ಅವರು, ಅಂಕೋಲಾ ತಾಲೂಕಿನ ಬಡಿಗೆರಿ ಗ್ರಾಮದ ತಮ್ಮ ಮನೆಯಲ್ಲಿ ನಸುಕಿನ ಜಾವ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಸುಕ್ರಿ ಬೊಮ್ಮಗೌಡ ಅವರು ಸುಕ್ರಜ್ಜಿ ಎಂದೇ ಪ್ರಸಿದ್ಧರು. ಹಾಲಕ್ಕಿ ಜಾನಾಂಗ ಜಾನಪದ ಕೋಗಿಲೆ ಎಂದೂ ಜನಪ್ರಿಯರಾಗಿರುವ ಅವರು, ಹಾಲಕ್ಕಿ ಜಾನಪದ ಹಾಡುಗಳ ಜೊತೆ ಮದ್ಯ ನಿಷೇಧ ಹೋರಾಟ ಸೇರಿದಂತೆ ಹಲವು ಹೋರಾಟದಲ್ಲಿ ಭಾಗಿಯಾಗಿದ್ದರು.
ಸಂಗೀತ ಕಲಾಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದ ಸುಕ್ರಜ್ಜಿ ಅವರು ಹಂಪಿ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಸುಕ್ರಿ ಬೊಮ್ಮಗೌಡ ಅವರನ್ನು ಕಳೆದುಕೊಂಡಿರುವ ಬಂಧು ಮಿತ್ರರ ದು:ಖದಲ್ಲಿ ನಾನೂ ಪಾಲ್ಗೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದು, ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತರು ಹಾಗೂ ಸುಕ್ರಜ್ಜಿ ಎಂದೇ ಜನಜನಿತರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು.ಮದ್ಯಪಾನ ವಿರೋಧಿ ಹೋರಾಟ ಸೇರಿ ಅನೇಕ ಜನಪರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದ್ದ ಅವರ ನಾಲಗೆಯ ಮೇಲೆ ಐದು ಸಾವಿರಕ್ಕೂ ಹೆಚ್ಚು ಹಾಲಕ್ಕಿ ಹಾಡುಗಳು ನಲಿದಾಡುತ್ತಿದ್ದವು ಎಂದು ಕೇಳಿದ್ದೇನೆ. ಅವರ ಅಗಲಿಕೆ ರಾಜ್ಯದ ಸಾಂಸ್ಕೃತಿಕ, ಜನಪದ ಲೋಕಕ್ಕೆ ಬಹುದೊಡ್ಡ ನಷ್ಟ. ಅವರಿಗೆ ಸದ್ಗತಿ ಸಿಗಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಸುಕ್ರಿ ಬೊಮ್ಮಗೌಡ ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ ಕಾರವಾರ ಜಿಲ್ಲೆಯ ‘ಹಾಡುಹಕ್ಕಿ’, ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಮ್ಮಗೌಡ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸುಕ್ರಿ ಬೊಮ್ಮಗೌಡ ಅವರು ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ಹಾಡುಗಳು ಮಾತ್ರವಲ್ಲದೇ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದ್ದಾರೆ.