Ad image

ನಿಮ್ಮೊಂದಿಗೆ ನಾವು” ಕಲಾವಿದರ ನಡೆ-ಜನಸಾಮಾನ್ಯರ ಕಡೆ ಕಾರ್ಯಕ್ರಮ — ಲಲಿತಕಲೆಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟತೆ – ಸಚಿವ ಶಿವರಾಜ ತಂಗಡಗಿ

Vijayanagara Vani
ನಿಮ್ಮೊಂದಿಗೆ ನಾವು” ಕಲಾವಿದರ ನಡೆ-ಜನಸಾಮಾನ್ಯರ ಕಡೆ ಕಾರ್ಯಕ್ರಮ — ಲಲಿತಕಲೆಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟತೆ – ಸಚಿವ ಶಿವರಾಜ ತಂಗಡಗಿ
ಕೊಪ್ಪಳ ಫೆಬ್ರವರಿ 23 : ಸಂಗೀತ, ನೃತ್ಯ ಹಾಗೂ ಚಿತ್ರಕಲೆಯಂತಹ ಲಲಿತಕಲೆಗಳಿಗೆ ಬಹಳಷ್ಟು ಬೆಲೆಯಿದ್ದು, ಈ ಲಲಿತಕಲೆಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟತೆಯನ್ನು ತಿಳಿಸುತ್ತವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಹೇಳಿದರು.
ಅವರು ಭಾನುವಾರ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ “ನಿಮ್ಮೊಂದಿಗೆ ನಾವು” ಕಲಾವಿದರ ನಡೆ-ಜನಸಾಮಾನ್ಯರ ಕಡೆ ಕಾರ್ಯಕ್ರಮ (ಪ್ರಾತ್ಯಕ್ಷಿಕೆ, ವಿಮರ್ಶೆ, ಪ್ರದರ್ಶನ) ಉದ್ಘಾಟಿಸಿ ಮಾತನಾಡಿದರು.
ಪ್ರಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ “ನಿಮ್ಮೊಂದಿಗೆ ನಾವು” ಕಲಾವಿದರ ನಡೆ-ಜನಸಾಮನ್ಯರ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಕಾಡೆಮಿಗಳ ಕಾರ್ಯಕ್ರಮಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಜೊತೆಗೆ ಅಕಾಡೆಮಿಯ ಸದಸ್ಯ ಸ್ಥಾನಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಕರ್ನಾಟಕ, ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಇಂತಹ ಅಕಾಡೆಮಿಗಳ ಬಗ್ಗೆ ಇಲ್ಲಿನ ಜನರಲ್ಲಿ ಮಾಹಿತಿಯೇ ಇರುತ್ತಿರಲಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗಗಳಲ್ಲಿಯೂ ದೊಡ್ಡ ದೊಡ್ಡ ಪ್ರತಿಭೆಗಳಿದ್ದು, ಈಗ ನಮ್ಮ ಭಾಗದವರಿಗೂ ಅವಕಾಶಗಳು ಸಿಗುತ್ತಿವೆ. ಇಲ್ಲಿನ ಜನರು ಈಗ ಅಕಾಡೆಮಿಗಳ ಸದಸ್ಯರಾಗುತ್ತಿದ್ದಾರೆ. ಇದರ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ನಮ್ಮ ಭಾಗದಲ್ಲಿ ಹಮ್ಮಿಕೊಳ್ಳುವ ಮೂಲಕ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಸಹ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕಾಡೆಮಿಗಳಿಗೆ ಪ್ರತಿ ವರ್ಷ 80 ಲಕ್ಷ ರೂ.ಗಳನ್ನು ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ನ್ಯಾಯಮೂರ್ತಿಗಳಾದ ಸಂಜೀವಕುಮಾರ ಹಂಚಾಟೆ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ವೆಂಕಟೇಶ ಬಡಿಗೇರ ಹಾಗೂ ನಾನು ಒಂದೇ ತರಗತಿಯಲ್ಲಿ ಓದಿದ ಸ್ನೇಹಿತರಾಗಿದ್ದೇವೆ. ವಿದ್ಯಾರ್ಥಿ ಜೀವನದಲ್ಲಿ ಸಂಜೀವಕುಮಾರ ಅವರು ನಿರಂತರ ಪರಿಶ್ರಮದಿಂದ ಉನ್ನತ ಶಿಕ್ಷಣದಿಂದ ಓದಿ ನ್ಯಾಯಮೂರ್ತಿಗಳಾದರು. ನಾಯಕತ್ವ ಗುಣಗಳಿಂದ ನಾನು ರಾಜಕೀಯದಲ್ಲಿ ಬೆಳೆದೆ ಹಾಗೂ ತಮ್ಮ ಮನೆತನದ ಚಿತ್ರಕಲೆಯನ್ನೇ ಮುಂದುವರೆಸಿಕೊಂಡು ವೆಂಕಟೇಶ ಅವರು ಯಶಸ್ವಿ ಚಿತ್ರಕಲಾವಿದರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯು ಮೂರು ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ. ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಅಡಗಿರುತ್ತವೆ. ಅವಗಳನ್ನು ಗುರುತಿಸುವ ಕೆಲಸ ಆಗಬೇಕು. ಮಕ್ಕಳು ತಮ್ಮ ತಂದೆ ತಾಯಿಗಿಂತಲೂ ಗುರುಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಮಕ್ಕಳಲ್ಲಿನ ಚಿತ್ರಕಲೆ, ಸಂಗೀತದAತಹ ಕಲೆಯನ್ನು ಪ್ರೋತ್ಸಾಹಿಸಲು ಶಿಕ್ಷಕರು ಶ್ರಮಿಸಬೇಕು. ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನಕ್ಕೆ ಏರಿದಾಗ ಗುರುಗಳಿಗೆ ಗೌರವ ಬರುತ್ತದೆ ಎಂದು ಹೇಳಿದರು.
ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಂಜೀವಕುಮಾರ ಹಂಚಾಟೆ ಅವರು ಮಾತನಾಡಿ, ಮನುಷ್ಯನನ್ನು ಎತ್ತರ ರಂಗಕ್ಕೆ ಕೊಂಡೊಯ್ಯಲು ಲಲಿತಕಲೆ ಅತ್ಯವಶ್ಯಕವಾಗಿದೆ. ಚಿತ್ರಕಲೆಯು ಬಹಳಷ್ಟು ಪುರಾತನ ಕಾಲದ್ದಾಗಿದೆ. ಶಿಲಾಯುಗದ ಸಂದರ್ಭದಲ್ಲಿ ನಮ್ಮ ಪೂರ್ವಜರು ಗುಹೆಗಳಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಗುಹೆಗಳಲ್ಲಿ ಮನುಷ್ಯ, ಪ್ರಾಣಿ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸಲು ಅನುಕೂಲವಾಗುತ್ತವೆ. ಚಿತ್ರಕಲೆಯಿಂದ ಏಕಾಗ್ರತೆ ಬರುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ ಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಲಲಿತಕಲಾ ಅಕಾಡೆಮಿಯಿಂದ ಕಳೆದ 8 ತಿಂಗಳಲ್ಲಿ 24 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರಕಲಾವಿದರ ಸಮ್ಮೇಳನವನ್ನು ಹಮ್ಮಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಂದಿನ ದಿನ ಮಾನಗಳಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ವೆಂಕಟೇಶ ಬಡಿಗೇರ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್ ದರಗದ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ, ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ನೀಲಮ್ಮ ಹಾಗೂ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ಶಾಲಾ ಮಕ್ಕಳ ಕಲಾಶಿಬಿರವು ನಡೆಯಿತು. ಚಿತ್ರಕಲಾವಿಧರು, ಚಿತ್ರಕಲಾ ಶಿಕ್ಷಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.

Share This Article
error: Content is protected !!
";