ಧಾರವಾಡ () ಮಾ.04: ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್‍ದಿಂದ ಡಾ. ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನಾಚರಣೆ ಪ್ರಯುಕ್ತ ಮಾರ್ಚ 10, 2025 ರಂದು ಸಂಜೆ 5.30 ಗಂಟೆಗೆ ನಗರದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ಟ್ರಸ್ಟ್‍ನಿಂದ ಹಿರಿಯ ಸಂಗೀತಗಾರರಿಗೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಹಾಗೂ ಯುವ ಸಂಗೀತಗಾರರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
2024-25 ನೇ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂ. ಡಿ. ಕುಮಾರ ದಾಸ್ ಅವರಿಗೆ ಪ್ರಧಾನ ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತ ರೂ.1.00 ಲಕ್ಷ (ರೂಪಾಯಿ ಒಂದು ಲಕ್ಷ) ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಶಿರಸಿ ತಾಲ್ಲೂಕು ಮುತ್ತಮುರ್ಡು ಗ್ರಾಮದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ವಿನಾಯಕ ಹೆಗಡೆ ಅವರಿಗೆ 2024-25ನೇ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತ ರೂ. 25,000/- (ರೂಪಾಯಿ ಇಪ್ಪತ್ತೈದು ಸಾವಿರ)ಗಳು ಹಾಗೂ ಪ್ರಶಸ್ತಿ ಫಲಕ ಪ್ರದಾನ ಮಾಡಲಾಗುವುದು.
ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಕಾರ್ಯಕ್ರಮನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು.
ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕರ್ನಾಟಕ ವಿಧಾನ ಪರಿಷತ್ತನ ಸಭಾಪತಿ ಬಸವರಾಜ ಹೊರಟ್ಟಿ ಅವರು ಘನ ಉಪಸ್ಥಿತಿ ವಹಿಸುವರು.
ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ ಇವರು ಅಧ್ಯಕ್ಷತೆ ವಹಿಸುವರು. ಹಾಗೂ ಜಿಲ್ಲೆಯ ಎಲ್ಲ ವಿಧಾನ ಪರಿಷತ್ ಹಾಗೂ ವಿಧಾನ ಸಭೆಯ ಶಾಸಕರುಗಳು, ನಿಗಮ ಮಂಡಳಿಗಳ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್‍ನ ಅಧ್ಯಕ್ಷರಾದ ದಿವ್ಯ ಪ್ರಭು, ಸದಸ್ಯರಾದ ಪಂ. ಎಂ. ವೆಂಕಟೇಶಕುಮಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಇವರು ಮತ್ತು ಟ್ರಸ್ಟ್‍ನ ಎಲ್ಲ ಸದಸ್ಯರು ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಯುವ ಪ್ರಶಸ್ತಿ ಪುರಸ್ಕøತರಾದ ವಿನಾಯಕ ಹೆಗಡೆ ಅವರ ಗಾಯನ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರಾದ ಪಂ. ಡಿ ಕುಮಾರ ದಾಸ್ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ಜರುಗುವುದು. ವಿಶೇಷ ಸಂಗೀತ ಕಾರ್ಯಕ್ರಮವಾಗಿದ್ದು, ಸಂಗೀತಾಸಕ್ತರು ಮತ್ತು ಸಾರ್ವಜನಿಕರು ಹಾಗೂ ಡಾ. ಮಲ್ಲಿಕಾರ್ಜುನ ಮನಸೂರ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರ ಪರಿಚಯ
ಪಂ. ಡಿ. ಕುಮಾರ ದಾಸ್: ಪಂ. ಡಿ. ಕುಮಾರ ದಾಸ್‍ರವರು ಖ್ಯಾತ ಹಿಂದೂಸ್ತಾನಿ ಗಾಯಕರಾಗಿ, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಏಳುಬೆಂಚಿ ಎಂಬ ಪುಟ್ಟ ಗ್ರಾಮದ ಡಿ. ಭೀಮದಾಸ್ ಮತ್ತು ಶ್ರೀಮತಿ ದೇವಮ್ಮ ಎಂಬ ದಂಪತಿಗಳ ಪುತ್ರನಾಗಿ 12.05.1954ರಲ್ಲಿ ಜನಿಸಿದರು. 1965ರಲ್ಲಿ ಇವರು ಗದುಗಿನ ಪದ್ಮಭೂಷಣ ಪಂ. ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಶ್ರಯ ಪಡೆದು, ಸಂಗೀತ ಅಭ್ಯಾಸದೊಂದಿಗೆ 1976-78ರಲ್ಲಿ ಕರ್ನಾಟಕ ಸರ್ಕಾರದ ಸಂಗೀತ ವಿದ್ವತ್ ಪರೀಕ್ಷೆ ಹಾಗೂ 1978-79ರಲ್ಲಿ ಮುಂಬಯಿ ಗಂಧರ್ವ ಮಹಾವಿದ್ಯಾಲಯದಲ್ಲಿ ನಡೆದ ವಿಶಾರದಾ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ನಂತರ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೇ ಸುಪ್ರಸಿದ್ಧ ಗ್ವಾಲಿಯರ್ ಮತ್ತು ಕಿರಾಣಾ ಘರಾಣಾ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದು ಏ ಶ್ರೇಣಿ ಗಾಯಕರಾಗಿ ಪ್ರಭುತ್ವ ಸಾಧಿಸಿದರು. ಕಂಠ ಮಾಧುರ್ಯದಲ್ಲಿ ಶ್ರೋತೃಗಳನ್ನು ಮಂತ್ರ ಮುಗ್ಧರನ್ನಾಗಿ ಮಾಡುವ ಇವರು, ಖಯಾಲಿ, ಸಂಗಮ ಸಂಗೀತ, ದಾಸರ ಪದಗಳು, ಭಜನೆ, ತತ್ವಪದಗಳು, ವಚನಗಳನ್ನು ಹಾಡುವುದರಲ್ಲಿ ಪ್ರಸಿದ್ಧಿ ಪಡೆದರು. ಪಂ. ಕುಮಾರ ದಾಸ್ ಅವರು 1979 ರಿಂದ 1985ರ ವರೆಗೆ ಗದುಗಿನ ವಿಜಯ ಕಲಾಮಂದಿರದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಂತರ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸಿರುತ್ತಾರೆ.
ಪಂ. ಡಿ. ಕುಮಾರ ದಾಸ್‍ರವರು 1989ರಲ್ಲಿ ಕೋಲ್ಕತ್ತಾದಲ್ಲಿ ಜರುಗಿದ ಅಖಿಲ ಭಾರತ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ವಿಶ್ವ ಕನ್ನಡ ಸಮ್ಮೇಳನ ಹಾಗೂ ಹೈದರಾಬಾದ್, ಗೋವಾ, ಭದ್ರಾವತಿ, ಮದ್ರಾಸ್, ಕೋಲ್ಕತ್ತಾ, ಪುಣೆ ಆಕಾಶವಾಣಿ ಕೇಂದ್ರಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಿರುತ್ತಾರೆ. ಇವರ ಸಂಗೀತ ಸಾಧನೆಗೆ ಹಲಾವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. 1978ರಲ್ಲಿ ಗದುಗಿನಲ್ಲಿ ಜರುಗಿದ ಎಡೆಯೂರು ಸಿದ್ದಲಿಂಗೇಶ್ವರ 5ನೇ ಶತಮಾನೋತ್ಸವದ ಸಂದರ್ಭದಲ್ಲಿ ಡಾ. ಪುಟ್ಟರಾಜ ಗವಾಯಿಗಳಿಂದ ಸ್ವರ್ಣ ಪದಕ ಸನ್ಮಾನ, 1990ರಲ್ಲಿ ಪಂ. ಪಂಚಾಕ್ಷರಿ ಗವಾಯಿಗಳ 46ನೇ ಪುಣ್ಯಸ್ಮರಣೆಯಲ್ಲಿ ಪಂಚಾಕ್ಷರಿ ಪ್ರಶಸ್ತಿ, 1997ರಲ್ಲಿ ಶಿವಾನುಭವ ಧರ್ಮಸಂಸ್ಥೆ ಕಂಪ್ಲಿ ಇವರಿಂದ ಗಾಯನ ಕುಶಲ ಪ್ರಶಸ್ತಿ, 1997ರಲ್ಲಿ ವೀರಶೈವ ಸಮನ್ವಯ ಸಮಿತಿ ಬೆಂಗಳೂರು ಇವರಿಂದ ಸ್ವರಶ್ರೀ ಪ್ರಶಸ್ತಿ ಹಾಗೂ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2023-24ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇವರಿಗೆ ಸಂದಿವೆ. ಇವರ ಸಂಗೀತ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ, ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ) ಧಾರವಾಡ ವತಿಯಿಂದ 2024-25ನೇ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗುತ್ತಿದೆ.
ವಿನಾಯಕ ಹೆಗಡೆ: ವಿನಾಯಕ ಹೆಗಡೆ ಅವರು ದತ್ತಾತ್ರೇಯ ಹೆಗಡೆ ಹಾಗೂ ಯಶೋಧಾ ಹೆಗಡೆ ಪುತ್ರರಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಶಿರಸಿಯ ಸಮೀಪ ಮುತ್ತಮುರ್ಡು ಗ್ರಾಮದಲ್ಲಿ ಜನಿಸಿದರು. ಬಿಕಾಂ ಪದವಿದರರಾದ ಇವರು ತಂದೆಯವರ ಮೂಲಕ ಬಾಲ್ಯದಿಂದಲೇ ಸಂಗೀತದ ಆಸಕ್ತಿ ಬೆಳೆಸಿಕೊಂಡರು ಹಾಗೂ ಭಾರತರತ್ನ ಪಂ. ಭೀಮಸೇನ ಜೋಶಿಯವರ ಸಂಗೀತದ ಬಗ್ಗೆ ವ್ಯಾಮೋಹ ಬೆಳೆಸಿಕೊಂಡರು. ಪಂ.ಶ್ರೀಪಾದ ಹೆಗಡೆ ಸೋಮನಮನೆ ಇವರಲ್ಲಿ ಸುಮಾರು ಏಳು ವರ್ಷ ಸಂಗೀತಾಭ್ಯಾಸ ಮಾಡಿದ ಇವರು, ನಂತರ ಪಂ. ಜಯತೀರ್ಥ ಮೇವುಂಡಿ ಅವರಲ್ಲಿ ಸುಮಾರು ಒಂಬತ್ತು ವರ್ಷ ಸಂಗೀತ ಅಭ್ಯಾಸ ಮಾಡಿದರು. ಪ್ರಸ್ತುತ ಕಳೆದ ಎಂಟು ವರ್ಷಗಳಿಂದ ಪುಣೆಯಲ್ಲಿ ಪಂ. ಶ್ರೀನಿವಾಸ ಜೋಶಿ ಇವರಲ್ಲಿ ಸಂಗೀತ ಅಭ್ಯಾಸ ಮುಂದುವರೆಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಪ್ರತಿಭಾ ಪುರಸ್ಕಾರ, ಶಿಷ್ಯ ವೇತನ, ನಿಶ್ಚಯ ಪುರಸ್ಕಾರ, ಶಾರದಾ ಪುರಸ್ಕಾರ, ಪಂ. ಲಿಂಗರಾಜ ಬುವಾ ಯರಗುಪ್ಪ ಯುವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಪಡೆದಿರುತ್ತಾರೆ. ಇವರು ಭಾರತರತ್ನ ಪಂ. ಭೀಮಸೇನ ಜೋಶಿಯವರ ಪರಂಪರೆಯಲ್ಲಿ ಬೆಳೆಯುತ್ತಿರುವ ಕಿರಾಣಾ ಘರಾಣೆಯ ಭರವಸೆಯ ಗಾಯಕರಾಗಿದ್ದಾರೆ. ಇವರು ಅದ್ಬುತವಾದ, ಶಕ್ತಿಶಾಲಿಯಾದ, ಮಾಧುರ್ಯಯುತ ಧ್ವನಿಯಿಂದ ಮಂದ್ರ ಸಪ್ತಕದಲ್ಲಿ ವಿಶೇಷ ಹಿಡಿತ ಸಾಧಿಸಿರುತ್ತಾರೆ. ವೈವಿಧ್ಯಮಯ, ವಿಶಿಷ್ಟ ತಾನ್ ಬಾಜ್, ಹಳೆಯ ಶೈಲಿಯ ಗಾಯನದಿಂದ ಸಂಗೀತದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಇವರು, ತಮ್ಮ ತಂದೆಯವರ ನಿರಂತರ ಪ್ರೋತ್ಸಾಹದಿಂದ ಇಂದು ಖಯಾಲ್ ಗಾಯನ, ಭಜನ್, ಅಭಂಗ್, ಠುಮರಿ ಮುಂತಾದ ಪ್ರಕಾರಗಳಲ್ಲಿ ಬಹು ಬೇಡಿಕೆಯ ಗಾಯಕರಾಗಿದ್ದಾರೆ.
ಪುಣೆ ಮುಂಬೈ, ಅಹ್ಮದಾಬಾದ್, ಕೋಲ್ಕತ್ತಾ, ಚೆನೈ, ಕೇರಳ, ಗೋವಾ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಗಾಯನದ ಮೂಲಕ ಪ್ರಸಿದ್ಧಿ ಪಡೆದಿರುವ ಇವರು, ಇತ್ತೀಚಿಗೆ ಸಿಂಗಾಪೂರದಲ್ಲಿ ತಮ್ಮ ಕಾರ್ಯಕ್ರಮ ನೀಡಿರುತ್ತಾರೆ. ಇವರು ಸಂಗೀತ ಸಾಧನೆಗಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ, ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ) ಧಾರವಾಡ ವತಿಯಿಂದ 2024-25ನೇ ಸಾಲಿನ ‘ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
**