ಕೊಪ್ಪಳ ಮಾರ್ಚ್ 14 : ಫಿರ್ಯಾದುದಾರರಿಗೆ ವಿಮಾ ಪಾಲಿಸಿ ಪರಿಹಾರ ಪಾವತಿಸಲು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಇನ್ಸೂರೆನ್ಸ್ ಕಂಪನಿಗೆ ಆದೇಶ ನೀಡಿದೆ.
ಗ್ರಾಹಕ ಫಿರ್ಯಾದು ಸಂಖ್ಯೆ:30/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ರಮೇಶ ಕೆಸಕಿ, ಹಂಚಿನಾಳ, ತಾ:ಗಂಗಾವತಿ ಇವರ ತಂದೆಯಾದ ದಿ: ಸಣ್ಣ ಲಚಮಪ್ಪ ಇವರು ಎದುರುದಾರರಾz ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಲಿ., ಗುರುಗ್ರಾಮ್ (Max Life Insurance Company Ltd., Gurugram) ಮತ್ತು ಇನ್ನೊಬ್ಬರ ವಿರುದ್ಧ ದೂರನ್ನು ಸಲ್ಲಿಸಿರುತ್ತಾರೆ. ಈ ದೂರಿನ ಸಾರಂಶ ಏನೆಂದರೆ ದೂರುದಾರರ ತಂದೆ ಸಣ್ಣ ಲಚಮಪ್ಪ ತಮ್ಮ ಜೀವಿತಾವಧಿಯಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು 2ನೇ ಎದುರುದಾರರ ಆಕ್ಯಿಸ್ ಬ್ಯಾಂಕಿನಿಂದ ರೂ. 9,90,000 ಗಳಷ್ಟು ಚಿನ್ನದ ಸಾಲವನ್ನು ಪಡೆದಿದ್ದರು. ಚಿನ್ನದ ಸಾಲದ ಭದ್ರತೆಗಾಗಿ 1ನೇ ಎದುರುದಾರg ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಲಿ., ಗುರುಗ್ರಾಮ್ ಇವರಲ್ಲಿ ಮ್ಯಾಕ್ಸ್ ಲೈಫ್ ಗ್ರೂಪ್ ಟರ್ಮ ಲೈಫ್ ಪ್ಲಾಟಿನಮ್ ಅಶ್ಯೂರೆನ್ಸ್ ಪಾಲಸಿಯನ್ನು ಪಡೆದುಕೊಂಡಿದ್ದಾರೆ. ಈ ಪಾಲಸಿಗೆ ದೂರುದಾರರೇ ನಾಮಿನಿಯಾಗಿರುತ್ತಾರೆ. ದೂರುದಾರರ ತಂದೆ ವಿಮಾದಾರರು ದಿನಾಂಕ: 10-09-2022 ರಂದು ಹೃದಯಘಾತದಿಂದ ಮೃತಹೊಂದಿರುತ್ತಾರೆ. ಆತನ ಮರಣದ ನಂತರ ದೂರುದಾರರು ಎದುರುದಾರ ನಂ-1ರ ಕಂಪನಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಕ್ಲೇಮ್ ಸಲ್ಲಿಸಿ 1ನೇ ಎದುರುದಾರರವರು ವಿಮಾ ಮೊತ್ತವನ್ನು 2ನೇ ಎದುರುದಾರರ ಬ್ಯಾಂಕ್‌ಗೆ ಸಾಲದ ಬಾಕಿ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಡಲು ಕೋರಿರುತ್ತಾರೆ. 1ನೇ ಎದುರುದಾರರಾದ ವಿಮಾ ಕಂಪನಿಯವರು ದಿನಾಂಕ 23-03-2023 ರಂದು ಪತ್ರವನ್ನು ಬರೆದಿದ್ದು, ಆ ಪತ್ರದಲ್ಲಿ ತನಿಖೆಯ ಸಮಯದಲ್ಲಿ, ಪಾಲಸಿಯನ್ನು ನೀಡುವ ಸಮಯದಲ್ಲಿ ವಿಮಾದಾರರು ಪ್ರಸ್ತಾವನೆಯಲ್ಲಿ ಬಹಿರಂಗಪಡಿಸಿದ ಮಾಹಿತಿ ಮತ್ತು ದಾಖಲೆಗಳ ವಿವರಗಳು ಸುಳ್ಳು ಎಂದು ತಿಳಿಸಿ ಪಾಲಿಸಿ ಮೊತ್ತವನ್ನು ನೀಡಲು ನಿರಾಕರಿಸಿರುತ್ತಾರೆ. 2ನೇ ಎದುರುದಾರರು ದೂರುದಾರರ ತಂದೆಗೆ ಚಿನ್ನದ ಸಾಲವನ್ನು ಅಗತ್ಯ ದಾಖಲೆಗಳನ್ನು ಪಡೆದು ಸಾಲ ಮಂಜೂರು ಮಾಡಿರುತ್ತಾರೆ. 2ನೇ ಎದುರುದಾರರು ದೂರುದಾರರ ತಂದೆ ಸಣ್ಣ ಲಚಮಪ್ಪ ಹೆಸರಿಗೆ ಸಾಲದ ಭದ್ರತೆಗಾಗಿ 1ನೇ ಎದುರುದಾರರ ವಿಮಾ ಕಂಪನಿಯಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸಿ ಹಾಗೂ ವಿಮಾ ಕಂತನ್ನು ಪಾವತಿಸಿ ಪಾಲಿಸಿಯನ್ನು ಪಡೆದಿರುತ್ತಾರೆ. 1ನೇ ಎದುರುದಾರರ ಕಂಪನಿಯು ವಿನಾ:ಕಾರಣ ವಿಮಾ ಪಾಲಿಸಿಯ ಪರಿಹಾರದ ಮೊತ್ತವನ್ನು ನೀಡದೇ ಸೇವಾ ನ್ಯೂನ್ಯತೆಯನ್ನು ಎಸಗಿರುತ್ತಾರೆ. ಆದ್ದರಿಂದ ದೂರುದಾರರು ಎದುರುದಾರರ ವಿರುದ್ಧ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ಪರಿಹಾರವನ್ನು ಕೋರಿ ದೂರನ್ನು ಸಲ್ಲಿಸಿರುತ್ತಾರೆ.
ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರನ್ನು ದಾಖಲಿಸಿಕೊಂಡ ನಂತರ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿದ ನಂತರ 1ನೇ ಎದುರುದಾರ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಇವರ ವಿರುದ್ಧ ದೂರುದಾರರ ತಂದೆ ಸಣ್ಣ ಲಚಮಪ್ಪರವರ ಚಿನ್ನದ ಸಾಲದ ಭದ್ರತೆಗಾಗಿ ಮಾಡಿದ ಪಾಲಿಸಿಯ ವಿಮಾ ಮೊತ್ತ ರೂ.9,90,000 ಗಳನ್ನು ಚಿನ್ನದ ಸಾಲದ ಖಾತೆ ಸಂಖ್ಯೆ ನಂ:922060052242813ಕ್ಕೆ 2ನೇ ಎದುರುದಾರ ಆಕ್ಸಿಸ್ ಬ್ಯಾಂಕಿಗೆ ಪಾವತಿಸಲು ಆದೇಶಿಸುತ್ತಾ, ವಿಮಾ ಮೊತ್ತ ರೂ. 9,90,000 ಗಳಿಗೆ ವಾರ್ಷಿಕ 6% ಬಡ್ಡಿಯನ್ನು ಮಾತ್ರ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ದೂರುದಾರರಿಗೆ 1ನೇ ಎದುರುದಾರರು ಪಾವತಿಸಬೇಕು ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 10,000 ಮತ್ತು ದೂರಿನ ಖರ್ಚು ರೂ. 5,000 ಗಳನ್ನು ದೂರುದಾರರಿಗೆ ಪಾವತಿಸುವಂತೆ ಹಾಗೂ ಮೇಲೆ ಹೇಳಿದ ಪರಿಹಾರದ ಮೊತ್ತವನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ 1ನೇ ಎದುರುದಾರರು ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.