ಮುಖ್ಯಾಂಶಗಳು:
* ಚೇಳು ಸುಮಾರು430 ಮಿಲಿಯನ್ ವರ್ಷಗಳ ಹಿಂದಿನಿಂದಲೂ ಬದುಕಿರುವ ಜೀವಿ.
* ಚೇಳುಗಳು ತಮ್ಮ ಲೈಂಗಿಕ ಕ್ರಿಯೆ ಮುಂಚೆ ನೃತ್ಯ ಮಾಡುತ್ತವೆ,ಮುದ್ದಾಡುತ್ತವೆ.
* ಚೇಳುಗಳು ಬೇಟೆಯಾಡಲು ನಕ್ಷತ್ರಗಳ ಬೆಳಕು ಸಾಕು.
* 1752 ಪ್ರಬೇಧಗಳ ಚೇಳುಗಳ ಇವೆ,ಇವುಗಳಲ್ಲಿ 25 ಮಾತ್ರ ಮನುಷ್ಯರ ಜೀವಕ್ಕೆ ಹಾನಿಮಾಡಬಲ್ಲವು.
ವಿಕಾಸವಾದದ ಸಿದ್ದಾಂತ ಪ್ರಕಾರ ಚೇಳು ಮಾನವ ಕುಲಕ್ಕಿಂತ ಮುಂಚೆ ಉದಯವಾದ ಜೀವಿ.ಚೇಳು ಮಾನವನ ಪಕ್ಕದಲ್ಲೇ ಜೀವಿಸುವ ಪ್ರಾಣಿ. ಮನೆ, ಹೊಲ,ತೋಟ,ತಿಪ್ಪೆ,ಬಣವೆ…ಎಲ್ಲಿ ಹೋದರಲ್ಲಿ ಕಾಣುವ ಚೇಳು -ನಾಯಿ,ಬೆಕ್ಕು, ಇಲಿ,ಜಿರಲೆಯಂತೆ ಜನ ಸಮುದಾಯದ ನಡುವೆ ಇದ್ದೇ ಇರುತ್ತದೆ.ಏಪ್ರಿಲ್ ಮತ್ತು ಮೇ ತಿಂಗಳ ಸಮಯದಲ್ಲಿ ರೈತರು ಊರ ಮುಂದಿನ ತಿಪ್ಪೆಯ ಗೊಬ್ಬರವನ್ನು ಹೊಲಗಳಿಗೆ ಸಾಗಿಸಿ ಮಳೆ ಬರುವ ಮುನ್ನ ಹೊಲಕ್ಕೆ ಗೊಬ್ಬರ ಚೆಲ್ಲ ಬೇಕಾದಾಗ ಚೇಳುಗಳು ನಮ್ಮ ರೈತರನ್ನು ಕುಟುಕಿರೋದು ಜಾಸ್ತಿ.ಜೂನ್ ತಿಂಗಳ ಕಾಲದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಕರಿ ನೆಲದಲ್ಲಿ “ಕಾರ್ಚಿಕಾಯಿ” ಬಿಡುವ ಬಳ್ಳಿ ನೈಸರ್ಗಿಕವಾಗಿ ಬೆಳೆಯುತ್ತದೆ,ಅದರಲ್ಲಿ ಬರುವ ಕಾರ್ಚಿಕಾಯಿ ಎಲ್ಲರಿಗೆ ಇಷ್ಟ.ಇದು ಕಣ್ಣಿಗೆ ಮತ್ತು ಸಕ್ಕರೆ ಕಾಯಿಲೆಗೆ ಉತ್ತಮ ಎಂಬ ನಂಬಿಕೆ ಇದೆ.ಆ ಬಳ್ಳಿಯ ಕೆಳಗೆ ಬಹುತೇಕ ಚೇಳು ವಾಸವಾಗಿರುತ್ತವೆ. ನಮ್ಮ ಪಾಲಕರು ಬಳ್ಳಿ ಎತ್ತಿ ನೋಡಿ ಕಾರ್ಚಿಕಾಯಿ ಕೀಳಲು ಹೇಳುತ್ತಿದ್ದರು.
ಹಳ್ಳಿಯ ಮನೆಗಳಂತು ಹಳೆಕಾಲದಲ್ಲಿ ಶಿಥಿಲವಾದ ಕಟ್ಡಡಗಳು,ಗೋಡೆ,ಜಂತೆಗಳ ಸಂದುಗಳಲ್ಲಿ ಚೇಳುಗಳು ಸಹಜವಾಗಿ ಇರುತ್ತಿದ್ದವು.ಚೇಳು ಸಾಯಿಸಲು ಚಪ್ಪಲಿಯೇ ಸಾಧನವಾಗಿತ್ತು. ಮನೆಯಲ್ಲಿ ಚೇಳು ಬಂದಾಗ ಚಪ್ಪಲಿಗೆ ಮನೆಯ ಎಲ್ಲ ಪ್ರದೇಶಗಳಿಗೆ ಪ್ರವೇಶಕ್ಕೆ ಅವಕಾಶವಿತ್ತು.ಹಾವು-ಚೇಳಿನಿಂದ ರಕ್ಷಿಸಿಕೊಳ್ಳಲು ಟಾರ್ಚ್ ಬಹುತೇಕ ಬಳಕೆಗೆ ಬಂತು ಎನ್ನಬಹುದು.ಒಟ್ಟಾರೆ 30ರಿಂದ 40 ವರ್ಷಗಳ ಹಿಂದೆ ಚೇಳು ಗ್ರಾಮೀಣ ಭಾಗದ ಬಹುತೇಕ ಜನರನ್ನು ಬಹುವಾಗಿ ಕಾಡಿತ್ತು.ವಿದ್ಯುತ್ ಶಕ್ತಿ ಇಲ್ಲದಿರುವುದು,ಅಸಮರ್ಪಕ ವಸತಿ ನಿಲಯಗಳು, ಸ್ವಚ್ಚತೆಯ ಕೊರತೆ ಚೇಳಿನ ಕಡಿತಕ್ಕೆ ದಾರಿ ಮಾಡಿತ್ತು ಎನ್ನಬಹುದು.ಹೀಗೆ ಚೇಳು ನಮ್ಮ ನಡುವೆ ಇದ್ದೇ ಇದೆ.ಅದಕ್ಕೆ ಪರಿಹಾರವಾಗಿ ನಮ್ಮ ಜನಪದರು ಔಷಧಿಯನ್ನು ಕಂಡುಕೊಂಡಿದ್ದರು.ಊರಿಗೆ ಒಬ್ಬರು ಇಬ್ಬರಂತೆ ಗಿಡಮೂಲಿಕೆ,ಆಯುರ್ವೇದ ಔಷಧಿ ಕೊಡುವ ಜನರಿದ್ದರು.ಇನ್ನೂ ಕೆಲವೆಡೆ ಮಂತ್ರಹಾಕಿ (ವೈಜ್ಞಾನಿಕ ಅಲ್ಲ) ಮಾನಸಿಕವಾಗಿ ನೋವು ಕಡಿಮೆ ಮಾಡುವ ಜನರೂ ಇದ್ದರು.ಚೇಳು ಕಡಿದಾಗ ಆ ನೋವು ಕಡಿದ ಸ್ಥಳದಿಂದ ಮೇಲೇರುತ್ತಾ ಇರುತ್ತದೆ.ಔಷಧಿ ತೆಗೆದುಕೊಂಡ ನಂತರ ಅದು ಇಳಿಯುತ್ತಾ ಬರುತ್ತದೆ,ಕಡಿದ ಜಾಗದಲ್ಲಿ ಸ್ವಲ್ಪ ಸಮಯ ನೋವು ಇರುತ್ತದೆ.ಕೆಲವು ಚೇಳುಗಳ ವಿಷ ಅಪಾಯಕಾರಿ.ಮತ್ತೆ ಕೆಲವು ಚೇಳುಗಳ ವಿಷ ನೋವು ನೀಡಿ ಸಹಜ ಸ್ಥಿತಿಗೆ ಬರುವಂತೆ ಮಾಡುತ್ತವೆ.
ಚೇಳುಗಳ ಆದಿ:
ಚೇಳುಗಳು ಮೊದಲು ಸಿಲೂರಿಯನ್ ಅವಧಿಯಲ್ಲಿ (ಅಂದರೆ 443 ರಿಂದ417 ಮಿಲಿಯನ್ ವರ್ಷಗಳ ಹಿಂದೆ) ಇದ್ದವೆಂದು ಅಂದಾಜಿಸಲಾಗಿದೆ.ಆರಂಭಿಕ ಚೇಳುಗಳು ಈಗಿನ ಏಡಿಗಳಂತೆ ಉಭಯಚರ ಜೀವಿಯಾಗಿತ್ತು,ಕಾಲಾನುಕ್ರಮದಲ್ಲಿ ಅದು ಭೂಮಿಯ ಮೇಲೆ ಮಾತ್ರವಾಸಿಸಲು ಆರಂಭಿಸಿದೆ.ಭೂಮಿಗೆ ವಲಸೆ ಬಂದ ಚೇಳುಗಳು ತಮ್ಮ ಚಲನೆ ಮತ್ತು ಉಸಿರಾಟದಲ್ಲಿ ಹೊರತುಪಡಿಸಿ ಮೂಲ (430 ವರ್ಷಗಳ ಹಿಂದಿನ) ದೇಹದ ವಿನ್ಯಾಸ ಹಾಗೇ ಇದೆ.
ಪ್ರಪಂಚದಾದ್ಯಂತ ಸಾವಿರಾರು ಜಾತಿಯ ಅಂದರೆ1752 ಪ್ರಬೇಧಗಳ ಚೇಳುಗಳು ಇವೆ, ಇವುಗಳಲ್ಲಿ 111 ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ. ಅಂಟಾರ್ಕಟಿಕಾ ಬಿಟ್ಟರೆ ಎಲ್ಲಾ ಖಂಡಗಳಲ್ಲೂ ಚೇಳುಗಳು ಕಂಡುಬರುತ್ತವೆ. ವಿಶೇಷವೆಂದರೆ ಬ್ರಿಟನ್, ನ್ಯೂಜಿಲ್ಯಾಂಡ್ ನಂತಹ ಕೆಲವು ದೇಶಗಳಲ್ಲಿ ಮೊದಲಿಗೆ ಇಲ್ಲದ ಚೇಳುಗಳು ಜನರ ಪ್ರವಾಸ ಮತ್ತು ವ್ಯವಹಾರದ ಸಂಪರ್ಕದಿಂದ ಆ ದೇಶಗಳಲ್ಲಿ ವಾಸವಾಗಿವೆ ಎನ್ನುತ್ತಾರೆ ತಜ್ಞರು.
ಜೀರ್ಣ ವ್ಯವಸ್ಥೆ, ಸಂತಾನವ್ಯವಸ್ಥೆಯ ವ್ಯತ್ಯಾಸಗಳು ದೇಶದಿಂದ ದೇಶಕ್ಕೆ ಭಿನ್ನವಾಗಿವೆ.ಅಮೇರಿಕಾದ ಶುಷ್ಕ ಪ್ರದೇಶಗಳಲ್ಲಿ,ಟರ್ಕಿ ಮತ್ತು ಗ್ರೀಸ್ ಪ್ರದೇಶದಲ್ಲಿ 21 ಜಾತಿಯ ಚೇಳುಗಳು ಕಂಡುಬರುತ್ತವೆ,ಇವುಗಳಲ್ಲಿ ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯ ಅಂಡಾಶಯವನ್ನು ಒಳಗೊಂಡಿವೆ.
ಚೇಳುಗಳು ಪರಭಕ್ಷಕ ಜಾತಿಗೆ ಸೇರಿದ ಸಂಧಿಪದಿ ಪ್ರಾಣಿಗಳು.ಚೇಳುಗಳು ಆರ್ಕಿಡ್ ಎಂಬ ಪ್ರಬೇಧಕ್ಕೆ ಸೇರುತ್ತವೆ,
ಚೇಳುಗಳು ಅತ್ಯಂತ ವಿಷಕಾರಿ ಎಂಬ ಭಯವಿದೆ ಆದರೆ ಅದರಲ್ಲಿ 25 ಪ್ರಬೇಧಗಳಲ್ಲಿ ಮಾತ್ರ ಮನುಷ್ಯನನ್ನು ಕೊಲ್ಲುವ ವಿಷದ ಪ್ರಮಾಣವಿದೆ.
ಚೇಳಿನ ದೇಹದ ವಿನ್ಯಾಸ: ಚೇಳಿನ ಅಂಗರಚನೆ ವಿಶಿಷ್ಟ ವಾಗಿದೆ,
1.ಶಿರೋವಕ್ಷ ಭಾಗ ಇದನ್ನು ವಿಜ್ಞಾನದಲ್ಲಿ ಪ್ರೊಸೋಮಾ ಎಂದು ಕರೆಯುತ್ತಾರೆ.ಇಲ್ಲಿ ಬೆನ್ನು ಚಿಪ್ಪು,ಕಣ್ಣುಗಳು,ಬಾಯಿ (ಜಗಿಯುವ ಹಲ್ಲುಗಳು) ಇಕ್ಕಳಾಕಾರದ ಉಗುರುಗಳೊಂದಿರುವ ವ್ಯವಸ್ಥೆ, ನಡೆಯಲು ನಾಲ್ಕು ಜೋಡಿ ಕಾಲುಗಳು ಇವೆ. ತಲೆಯ ಬುರುಡೆ ಭಾಗ ದಪ್ಪ ಇದ್ದು ಶತ್ರುಗಳಿಂದ ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿವೆ. ಈ ತಲೆಯಮೇಲೆ ಎರಡು ಕಣ್ಣುಗಳಿವೆ,ಅವು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಕೆಲವು ಕಡೆ ತಲೆಯ ಅಂಚಿನಲ್ಲಿ 5 ಜೊತೆ ಕಣ್ಣುಗಳ ಸಾಲು ಇರುತ್ತವೆ.ಮುಂಭಾಗದ ಕೊಂಡಿಗೂಡು ನಖ ಅಂದರೆ ಬಲಿಷ್ಠ ಉಗುರಿನಿಂದ ಕೂಡಿದ್ದು ಅದು ಬೇಟೆಯನ್ನು ಹಿಡಿಯಲು,ಸ್ವಯಂ ರಕ್ಷಣೆಗೆ ಮಾತ್ರವಲ್ಲ ವಾಸನಾಗ್ರಹಣಕ್ಕೆ ಬಳಸಿಕೊಳ್ಳುತ್ತದೆ.
2. ಮೆಸೋಮಾ (ಅಂಗರಚನೆಯ ಕೊಂಡಿಗಳು):
ಚೇಳಿನ ದೇಹದ ಪ್ರಧಾನ ಭಾಗ ಇಲ್ಲಿ ಉದರ (ಹೊಟ್ಟೆ) ಭಾಗ ಇರುತ್ತದೆ,ಅದರಲ್ಲಿ ಏಳು ಭಾಗಗಳು ಇರುತ್ತವೆ, ಇವು ಬೆನ್ನಿನ ಭಾಗದ ಮೇಲೆ ಪ್ಲೇಟ್ ಗಳಿಂದ ಮುಚ್ಚಲ್ಪಟ್ಟಿವೆ.ಉದರದ ಪಕ್ಕದಲ್ಲಿ ಒಂದು ಜೋಡಿ ಜನನಾಂಗ ಪೊರೆ ಇರುತ್ತದೆ,ನಂತರ ಒಂದು ಜೋಡಿ ಶ್ವಾಸದ್ವಾರಗಳಿವೆ.
ಅಂಗರಚನೆಯ ವಿಭಾಜಕ:
ಅಂಗರಚನೆಯ ವಿಭಾಜಕವು ಬಾಲ,ಇದರಲ್ಲಿ ಆರು ಭಾಗಗಳಿರುತ್ತವೆ, ಕೊನೆಯದು ಕೊಂಡಿ ಈ ಕೊಂಡಿಯಲ್ಲಿ ಚೇಳಿನ ಗುದದ್ವಾರದ ಜೊತೆ ವಿಷದ ಬಾಲ ( ಕಚ್ಚುವ ಭಾಗ) ಇರುತ್ತದೆ.ಈ ಬಾಲದ ವಿಭಾಜಕವು ಎರಡು ಗೂಡುಗಳನ್ನು ಒಳಗೊಂಡಿದೆ ,ಅವು ನಂಜು- ವಿಷಗ್ರಂಥಿಗಳನ್ನು ಪಡೆದಿದೆ,ಇವು ಕಚ್ಚುವ ಮತ್ತು ಪಿಚಕಾರಿಯಂತೆ ಕೆಲಸ ಮಾಡುತ್ತದೆ.
ಆಯುಷ್ಯ ಮತ್ತು ಬದುಕು:
ಚೇಳುಗಳ ಆಯುಷ್ಯದ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ 4 ವರ್ಷಗಳಿಂದ 25 ವರ್ಷಗಳೆಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಚೇಳುಗಳು27°ಸೆಲ್ಸಿಯಸ್ ನಿಂದ 37° ಸೆಲ್ಸಿಯಸ್ ಉಷ್ಣತೆ ಯಲ್ಲೂ ಜೀವುಸಬಲ್ಲವು.ಇವು ಅತಿ ಎತ್ತರದ ಬೆಟ್ಟಗಳಲ್ಲಿ, ಗವಿಗಳಲ್ಲಿ, ಅತಿ ಹೆಚ್ಚು ಚಳಿ ಮತ್ತು ಅತಿಯಾದ ಉಷ್ಣತೆ ಇರುವ ಮರುಭೂಮಿಗಳಲ್ಲೂ ಅವು ಜೀವಿಸಬಲ್ಲವು.
ಆಹಾರ ಸೇವನೆ: ಚೇಳುಗಳು ಸಣ್ಣ ಕೀಟಗಳು,ಹುಳುಗಳು ಮತ್ತು ದೊಡ್ಡಗಾತ್ರದ ಚೇಳುಗಳು ಒಮ್ಮೊಮ್ಮೆ ಹಲ್ಲಿಗಳನ್ನು ಬೇಟೆಯಾಡುತ್ತವೆ.ಅದರ ಕೊಂಡಿಗಳು ಅದರ ಸುತ್ತಲು ಸುರಳಿ ಆಕಾರದ ಸಂವೇದಿ ಕೂದಲನ್ನು ಹೊಂದಿದ್ದು ಅದರ ಹತ್ತಿರ ಬಂದ ಬೇಟೆಯನ್ನು ಅದು ಸಲೀಸಾಗಿ ಆಹಾರವಾಗಿಸಿಕೊಂಡು ಬಿಡುತ್ತವೆ. ಬೇಟೆ ಹತ್ತಿರಕ್ಕೆ ಬಂದ ತಕ್ಷಣ ಅದು ತನ್ನ ವಿಷದ ಕೊಂಡಿಯಿಂದ ನಿಧಾನವಾಗಿ ಘಾಸಿಗೊಳಿಸಿ ತಿನ್ನುತ್ತದೆ.ಅದು ಯಾವ ಬೇಟೆಗೆ ಎಷ್ಟು ವಿಷ ಬಿಡಬೇಕು ಎಂದು ಲೆಕ್ಕ ಹಾಕುತ್ತದೆ.ಕೆಲವೊಮ್ಮೆ ಬೇಟೆ ಸಾಯುವಷ್ಟು ಮತ್ತೆ ಕೆಲವೊಮ್ಮೆ ಅವುಗಳ ನರವ್ಯೂಹ ಮೇಲೆ ವಿಷ ಬಿಟ್ಟು ನಿಷ್ಕ್ರಿಯಗೊಳಿಸಿ ಭಕ್ಷಿಸುತ್ತದೆ.
ಚೇಳಿನ ಮುಂಭಾಗದ ಹಲ್ಲುಗಳ ಪಂಕ್ತಿ ಬೇಟೆಯನ್ನು ಅರೆಯಲು ಅನುಕೂಲಕರವಾಗಿವೆ. ಚೇಳು ತನ್ನ ಬಾಯಲ್ಲಿ ಆಹಾರ ಅರೆದು ಗಟ್ಟಿ ಭಾಗಗಳನ್ನು ಬಾಯಿಯಲ್ಲಿಟ್ಟುಕೊಂಡು ಮಾಂಸದ ಭಾಗ ಮತ್ತು ದ್ರವರೂಪದ ಆಹಾರವನ್ನು ಹೊಟ್ಟೆಯೊಳಗೆ ಕಳಿಸಿ ಗಟ್ಟಿ ಭಾಗ ಉಗುಳುತ್ತದೆ.
ಚೇಳುಗಳು ಒಂದೇ ಸಾರಿಗೆ ಹೆಚ್ಚು ಆಹಾರವನ್ನು ಸೇವಿಸುತ್ತವೆ, ಇವುಗಳಲ್ಲಿ ಸಂಗ್ರಹ ಸಾಮರ್ಥ್ಯ ಹೆಚ್ಚು,ಜೊತೆಗೆ ಚಯಾಪಚಯ ಕ್ರಿಯೆ ತುಂಬಾ ನಿಧಾನವಾಗಿ ನಡೆಯುತ್ತದೆ.ಇವುಗಳ ಆಯುಸ್ಸು ಹೆಚ್ಚು ಅನ್ನ ಬಹುದು. ಇವು ಆಹಾರವಿಲ್ಲದೆ ಸುಮಾರು 6 ತಿಂಗಳಿನಿಂದ 12 ತಿಂಗಳವರಗೆ ಉಪವಾಸ ಇರಬಲ್ಲವು.
ಚೇಳುಗಳ ಶೃಂಗಾರ:
ಚೇಳುಗಳಲ್ಲಿನ ಲೈಂಗಿಕ ಜೀವನ ಆಕರ್ಷಕವಾದುದು.ಚೇಳುಗಳ ಸೇರುವಿಕೆ ಸಂಕೀರ್ಣವಾದುದು.ಇವುಗಳ ಸೇರುವಿಕೆ ಆರಂಭದಲ್ಲಿ ತಾವು ಸೇರುವ ಜಾಗವನ್ನು ಆಯ್ಕೆಮಾಡಿಕೊಳ್ಳುವುದು, ಈ ಆಯ್ಕೆಗೆ ಅವು ಮಿಶ್ರಿತ ಫೆರೋಮಾನ್ಸ್ (ಒಂದು ರಾಸಾಯನಿಕ ವಸ್ತು) ಬಿಡುಗಡೆ ಮಾಡಿ ಆ ವಾಸನೆಯಿಂದ ಮತ್ತು ಕಂಪನದ ಅಲೆಗಳಿಂದ ಸಂಪರ್ಕ ಸಾಧಿಸುತ್ತವೆ.ಅವೆರಡೂ ತಾವಿಬ್ಬರೂ ವಿಭಿನ್ನ ಜಾತಿಗೆ ಸೇರಿದ್ದೇವೆ ಎಂಬುದು ಖಾತ್ರಿಯಾದ ಬಳಿಕ ಪರಸ್ಪರ ಸೇರಿ ತಮ್ಮ ಸರಿಯಾದ ಒಟ್ಟಾಗುವಿಕೆಯನ್ನು ಪ್ರತಿಪಾದಿಸುತ್ತವೆ.ಮೊದಲು ಗಂಡು-ಹೆಣ್ಣು ಸೇರಿ ನೃತ್ಯ ಮಾಡುತ್ತವೆ. ಇದನ್ನು “ಪ್ರೊಮೆನೆಡ್ ಎಡೆಕ್ಸ್” ಎಂದು ಕರೆಯುತ್ತಾರೆ.ತುಂಬಾ ಆತುರದಿಂದ ದಡಾಬಡಾಯಿಸಿ ಸೇರುವ ಇವು ತಮ್ಮ ಮುಂಭಾಗದ ದವಡೆ ಹಲ್ಲುಗಳ ಮೂಲಕ ಚುಂಬನ ಶುರುಮಾಡುತ್ತವೆ. ಗಂಡು ಚೇಳು ಹೆಣ್ಣು ಚೇಳನ್ನು ಜೋರಾಗಿ ತನ್ನೆಡೆಗೆ ಸೆಳೆದುಕೊಂಡು ನಿಖಟವಾಗಿ ಚುಂಬನದ ಮಳೆಗರೆಯುತ್ತದೆ.ಹಾಗೆ ಮುಂದುವರೆದು ಗಂಡು ಚೇಳು ತನ್ನ ವಿಷದ ಕೊಂಡಿಯ ಕೆಳಭಾಗದಲ್ಲಿನ ದ್ರವವನ್ನು ಹೆಣ್ಣು ಚೇಳಿನ ತಲೆಯ ಮೇಲೆ ಬಿಡುತ್ತದೆ ಇದು ಹೆಣ್ಣನ್ನು ಸಂತೈಸುವ ಪರಿ, ಇದು ಬೇಕೆನಿಸಿದರೆ ಪುನಃ ಮಾಡುತ್ತಾ,ಗಂಡು ತನ್ನ ಅಂಡಾಣುವನ್ನು ಹೆಣ್ಣಿನ ಅಂಗದಲ್ಲಿ ಇರಿಸಿದ ನಂತರ ಅದನ್ನು ಮುಂದೆ ಏನು ಮಾಡಬೇಕೆಂದು ಮಾರ್ಗದರ್ಶನ ನೀಡುತ್ತದೆ. ಗಂಡಿನ ಅಂಡಾಣು ಹೆಣ್ಣಿನ ಜನನಾಂಗ ಸೇರಿದ ನಂತರ ರೇತ್ರ ಅಂಗಾಂಶ ಅಥವಾ ಧಾತು ಬಿಡುಗಡೆಯಾಗುವಂತೆ ಮಾಡಿ ಹೆಣ್ಣು ಮರಿಹಾಕಲು ಫಲಿತವಾಗುತ್ತದೆ.ಹೀಗೆ ಸೇರಿದ ನಂತರ ಗಂಡು ಚೇಳು ಹೆಣ್ಣಿನಿಂದ ದೂರವಾಗುತ್ತದೆ ಯಾಕೆಂದರೆ ಕೆಲವು ಬಾರಿ ಹೆಣ್ಣು ಚೇಳು ಮೈಥುನದ ನಂತರ ಗಂಡು ಚೇಳನ್ನು ತಿಂದು ಬಿಡುತ್ತದೆ.
ಚೇಳಿನ ವಿಷದಲ್ಲಿ ಔಷಧೀಯ ಗುಣ:
ಚೇಳಿನ ಕೊಂಡಿಯಲ್ಲಿರುವ ವಿಷದಲ್ಲಿ ಔಷಧೀಯ ಗುಣವಿದೆ ಅದರಲ್ಲಿ ಪ್ರೊಟೀನ್ ಇರುತ್ತದೆ.ವೈದ್ಯಕೀಯ ಕ್ಷೇತ್ರದಲ್ಲಿ ಇದರಲ್ಲಿನ ರಾಸಾಯನಿಕವನ್ನು ಸಂಧಿವಾತ,ಹೊಟ್ಟೆಉರಿ, ಕಣ್ಣಿನ ಬಿಳಿಪೊರೆ ನಿವಾರಣೆ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಈ ವಿಷದಲ್ಲಿದೆ ಎನ್ನುತ್ತಾರೆ ತಜ್ಞರು.
ಸಾಂಸ್ಕೃತಿಕ ಹಿನ್ನೆಲೆ: ಚೇಳು ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲೂ ತನ್ನ ಪಾತ್ರ ಉಳಿಸಿಕೊಂಡಿದೆ. ತಪ್ಪು ಮಾಡಿದವರನ್ನು ಚೇಳು ಕಚ್ಚುತ್ತದೆ ಎಂಬ ಮೂಢನಂಬಿಕೆ, ಧನ ಸಂಪತ್ತು ಗುಪ್ತವಾಗಿರಿಸಿದ ಜಾಗದಲ್ಲಿ ಚೇಳುಗಳು ಭಯಂಕರವಾಗಿರುತ್ತವೆ ಎಂಬ ನಂಬಿಕೆ, ಭಾರತೀಯರ ಜನಮಾನಸದಲ್ಲಿ ಸಹಜವಾಗಿದೆ.
ನಮ್ಮ ರಾಜ್ಯದ ಯಾದಗಿರಿ ಜಿಲ್ಲೆಯ ಗುರುಮಟ್ ಕಲ್ ತಾಲೂಕಿನ ಕಂದಕೂರಿನಲ್ಲಿ ಕೊಂಡಮೇಶ್ವರಿ ದೇವಸ್ಥಾನದ ಸುತ್ತ ಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಶ್ರಾವಣ ಮಾಸದ ಪಂಚಮಿ ದಿನ ಮಕ್ಕಳು ಮತ್ತು ಭಕ್ತರು ಚೇಳು ಕೈಯಲ್ಲಿ ಹಿಡಿದು ಆಟವಾಡುವ ಸಂಪ್ರದಾಯವಿದೆ.ಇದಕ್ಕೆ ಚೇಳಿನ ಜಾತ್ರೆ ಎಂದೇ ಹೆಸರು. ಇಲ್ಲಿ ಚೇಳುಗಳನ್ನು ಆರಾಧಿಸುವ ಪರಿಪಾಠವಿದೆ.ಪುರಾಣ ಮತ್ತು ಕತೆಗಳಲ್ಲಿ ಚೇಳು ತನ್ನದೇ ಆದ ವಿಶೇಷ ಪಡೆದಿದೆ.ಚೇಳಿನ ಆಕಾರದ ನಕ್ಷತ್ರಗಳ ಗುಂಪು ಆಕಾಶದಲ್ಲಿ ಇದೆ ಅದುವೇ ವೃಶ್ಚಿಕ ರಾಶಿ.
ಚೇಳಿನ ಕಣ್ಣುಗಳ ವಿಶೇಷತೆ:
ಚೇಳುಗಳು ಯಾವಾಗಲೂ ಬೆಳಕಿಗೆ ಪ್ರತಿಕ್ರಿಯಿಸುವ ಸ್ವಭಾವ ಹೊಂದಿವೆ.ಇದರಿಂದ ಅವುಗಳನ್ನು ಭಕ್ಷಿಸುವ ಪ್ರಾಣಿಗಳಾದ ಪಕ್ಷಿಗಳು, ಸಂಧಿಪದಿಗಳು,ಹಲ್ಲಿಗಳು, ಇಲಿಗಳು, ಮೊದಲಾದವುಗಳಿಂದ ರಕ್ಷಿಸಿಕೊಳ್ಳತ್ತವೆ.
ಚೇಳುಗಳು ರಾತ್ರಿ ಬೇಟೆಯಾಡಲು ಕೇವಲ ನಕ್ಷತ್ರಗಳ ಬೆಳಕೇ ಸಾಕಂತೆ.ಅಷ್ಟು ಅವುಗಳ ಕಣ್ಣುಗಳಿಗೆ ಸಾಮರ್ಥ್ಯವಿದೆ.ನೇರಳಾತೀತ ಬೆಳಕಿಗೆ ಚೇಳುಗಳನ್ನು ಒಡ್ಡಿದಾಗ ಅವು ಮಿಂಚುತ್ತವೆ,ಅವುಗಳ ತಲೆಯಭಾಗದಲ್ಲಿ ಅಂತಹ ಬೆಳಕನ್ನು ಸೂಸುವ ರಾಸಯನಿಕ ಅವುಗಳ ದೇಹದಲ್ಲಿದೆ. ಈ ಬೆಳಕಿನ ಪ್ರದೀಪ್ತಿ ತೋರುವ. ಭಾಗವನ್ನು “ಬೆಟಾಕಾರ್ಬೋಲೈನ್” ಎಂದು ಕರೆಯುತ್ತಾರೆ.ಒಟ್ಟಾರೆ ಚೇಳು ಜೀವ ವೈವಿಧ್ಯತೆ ಯಲ್ಲಿ ನಮ್ಮ ನಡುವೆ ಇರಲೇಬೇಕಾದ ಜೀವಿ.
ಡಾ.ಯು.ಶ್ರೀನಿವಾಸ ಮೂರ್ತಿ
ವಿಜ್ಞಾನ ಸಾಹಿತ್ಯ ಲೇಖಕರು
ವಿಚಾರ ಕುಟೀರ
ರಾಮನಗರ 1ನೇ ಕ್ರಾಸ್,ಹವಂಬಾವಿ
ಬಳ್ಳಾರಿ. ಫೋನ್:9731063950