ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು, ಕುಡಿಯುವ ನೀರಿಸ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೂನ್ ಮಾಹೆಯಲ್ಲಿ ಮಳೆ ಬರುವ ಸಾಧ್ಯತೆ ಇದ್ದು, ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಕುಡಿಯುವ ನೀರಿನ ಒದಗಿಸುವ ಬಗ್ಗೆ ಮೊದಲ ಆದ್ಯತೆ ನೀಡಿ ಎಂದರಯ.
ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಬಹು ಗ್ರಾಮ ಕುಡಿಯುವ ನೀರು, ಜೆ.ಜೆ.ಎಂ ಸೇರಿದಂತೆ ವಿವಿಧ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದ್ದು, ಕುಡಿಯುವ ನೀರಿನ ತೊಂದರೆ ಇರುವ ಗ್ರಾಮವನ್ನು ಸ್ಥಳ ಭೇಟಿ ಮಾಡಿ ನಿಖರವಾಗಿ ಪಟ್ಟಿ ಮಾಡಿಕೊಳ್ಳಿ ಎಂದರು.
ಟ್ಯಾಂಕರ್ ನಲ್ಲಿ ನೀರು ಕೊಡುವುದು ಕೊನೆಯ ಹಂತವಾಗಿರುತ್ತದೆ. ಮೊದಲ ಹಂತದಲ್ಲಿ ಕುಡಿಯುವ ನೀರಿನ ತೊಂದರೆಯಾದಲ್ಲಿ ಇರುವ ಬೋರ್ ವೆಲ್ ಗಳನ್ನು ಫ್ಲಷಿಂಗ್ ಹಾಗೂ ಡೀಪ್ನಿಂಗ್ ಮಾಡಿಕೊಳ್ಳಬೇಕು ಎಂದರು.
ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳ ವ್ಯಾಪ್ತಿಯಲ್ಲಿರುವ ಖಾಸಗಿ ಬೋರ್ ವೆಲ್ ಗಳನ್ನು ಪಟ್ಟಿ ಮಾಡಿಕೊಳ್ಳಿ. ಖಾಸಗಿ ಬೋರ್ ವೆಲ್ ಗಳಿಂದ ನೀರು ಪಡೆಯುವ ಸಂದರ್ಭದಲ್ಲಿ ಬೋರ್ ವೆಲ್ ನಲ್ಲಿ ನೀರಿನ ಪ್ರಮಾಣವನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಇಂಜಿನಿಯರ್ ನಿಂದ ದೃಢೀಕರಣ ಪಡೆದುಕೊಳ್ಳಬೇಕು. ಖಾಸಗಿ ಬೋರ್ ವೆಲ್ ಮಾಲೀಕರಿಂದ ನೀರು ಪಡೆಯುವ ದಿನಾಂಕದಿಂದ ಒಪ್ಪಂದ ಮಾಡಿಕೊಳ್ಳಬೇಕು. ನೀರು ಕೊಡುವ ಸಂದರ್ಭದಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಿ. ಆಗ ಬಿಲ್ ಪಾವತಿಗೆ ತೊಂದರೆಯಾಗುವುದಿಲ್ಲ ಎಂದರು.
ಟ್ಯಾಂಕರ್ ಮೂಲಕ ನೀರು ಪಡೆಯುವುದು ಕೊನೆಯ ಆದ್ಯತೆ ಆಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆದು ದರ ಪಡೆದುಕೊಳ್ಳಿ. ಅಗತ್ಯವಿದ್ದರೆ ಕಾರ್ಯಾದೇಶ ನೀಡಿ ನೀರು ಪಡೆದುಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಬಿಸಿಲು ಹೆಚ್ಚಿರುವುದರಿಂದ ಬಿಸಿ ಗಾಳಿ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಕುರಿತು ಆರೋಗ್ಯ ಇಲಾಖೆಯಿಂದ ಹೆಚ್ಚು ಹೆಚ್ಚು ಐ.ಇ.ಸಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಮನ್ವಯತೆ ಅತಿ ಮುಖ್ಯ. ಅನುದಾನದ ಕೊರತೆ ಇಲ್ಲ, ನಿಗದಿತ ಸಮಯಕ್ಕೆ ಬಿಲ್ ಪಾವತಿಯಾಗಬೇಕು ಎಂದರು.
ಜಲ್ ಜೀವನ್ ಮಿಷನ್ ಯೋಜನೆಯಡಿ ಬೋರ್ ವೆಲ್ ಗಳು ಲಭ್ಯವಿದ್ದು, ಅವುಗಳಿಗೆ ಚೆಸ್ಕಂ ಸಹಾಯದಿಂದ ವಿದ್ಯುತ್ ವ್ಯವಸ್ಥೆ ಮಾಡಿದರೆ ಬಹಳಷ್ಟು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಸಿ ಕಸ ,ಒಣ ಕಸ ಪ್ರತ್ಯೇಕ ಮಾಡಿ ವಿಲೇವಾರಿ ಮಾಡಿ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ವಚ್ಛಗೊಳಿಸಿ ನೀರನ್ನು ಪರಿಶೀಲಿಸಿ. ಇದರಿಂದ ಸಾಂಕ್ರಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದು. ಗ್ರಾಮೀಣ ಭಾಗದ ಒವರ್ ಹೆಡ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಕಾರ್ಯಾಪಾಲಕ ಅಭಿಯಂತರ ಪ್ರಮೋದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.