ಬಳ್ಳಾರಿ,ಏ.30
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಅಂಗವಾಗಿ ಬುಧವಾರ ಸಂಜೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ನಗರದ ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭಗೊಂಡು ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಬೆಂಗಳೂರು ರಸ್ತೆ, ಹಳೆ ಬ್ರೂಸ್ ಪೇಟೆ ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ತೇರು ಬೀದಿ ರಸ್ತೆಯ ಮೂಲಕ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿ ಬಂದು ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ವೀರಗಾಸೆ, ಕಂಸಾಳೆ, ಡೊಳ್ಳು ಕುಣಿತ, ತಾಷೆ ರಾಂಡೋಲ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು ಹಾಗೂ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳಿಂದ ಬಸವೇಶ್ವರರ ಕುರಿತ ರೂಪಿಸಿದ ಮಾಹಿತಿ ಫಲಕಗಳನ್ನೊಳಗೊಂಡ ಸ್ತಬ್ಧಚಿತ್ರಗಳು ಆಕರ್ಷಿಸಿದವು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಇತರರು ಇದ್ದರು.
ಬೈಕ್ ರ್ಯಾಲಿ:
ನಗರದಲ್ಲಿ ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಅಂಗವಾಗಿ ಬುಧವಾರ ಬೆಳಿಗ್ಗೆ ಬೈಕ್ ರ್ಯಾಲಿ ನಡೆಯಿತು.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯ ಬಸವೇಶ್ವರರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಗಣ್ಯರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಸೇರಿದಂತೆ ಪಾಲಿಕೆಯ ಸದಸ್ಯರು, ಸಮುದಾಯದ ಮುಖಂಡರು ಹಾಗೂ ಅನೇಕರು ಭಾಗವಹಿಸಿದ್ದರು.