Ad image

ಹುಡುಗಾಟದಿಂದ ಜವಾಬ್ದಾರಿಯವರೆಗೆ….. ಒಂದು ಪಯಣ

Vijayanagara Vani
ಹುಡುಗಾಟದಿಂದ ಜವಾಬ್ದಾರಿಯವರೆಗೆ….. ಒಂದು ಪಯಣ

ತುಸು ಹಿಂದುಮುಂದಾಗಬಹುದು…ಆದರೆ ಖಂಡಿತವಾಗಿಯೂ ಪ್ರತಿಯೊಬ್ಬರ ಜೀವನದಲ್ಲಿಯೂ ಆ ದಿನ ಬಂದೇ ಬರುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವುದನ್ನು ಯಾರು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ವ್ಯಕ್ತಿಯು ಬದುಕಿನಲ್ಲಿ ಎದುರಿಸುವ ಸಮಯ ಸಂದರ್ಭಗಳು ವ್ಯಕ್ತಿಯನ್ನು ಜವಾಬ್ದಾರಿಯತನನ್ನಾಗಿಸುತ್ತವೆ. ತಾವು ಕೈಗೊಳ್ಳುವ ಕಾರ್ಯಗಳು ಮತ್ತು ಅವುಗಳ ಪರಿಣಾಮಗಳ ಜವಾಬ್ದಾರಿಯನ್ನು ಹೊರುವ ಮೂಲಕ ಅವರು ತಾವು ಮಾಡುವ ತಪ್ಪುಗಳ ಪರಾಮರ್ಶೆ ಮಾಡಿ ತಿದ್ದಿಕೊಳ್ಳುತ್ತಾರೆ. ಹೊಸ ಸವಾಲುಗಳನ್ನು ಎದುರಿಸುವಾಗ ಹಿಂಜರಿಯದೆ, ಯಾರನ್ನೂ ಹೊಣೆಯಾಗಿಸದೆ ಎದುರಿಸುವ ಅವರು ಈ ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಾರೆ.

- Advertisement -
Ad imageAd image

ನಂಬಿಕೆ….ಯಾವುದೇ ಸಂಬಂಧದ ಬುನಾದಿ ನಂಬಿಕೆ ಎಂಬುದನ್ನು ಅರಿತಿದ್ದು ತಮ್ಮ ಕೆಲಸ ಮತ್ತು ನಡವಳಿಕೆಗಳಿಂದ ಆ ನಂಬಿಕೆಯನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ನಿರಂತರವಾದ ಬದ್ಧತೆ ಪ್ರಬುದ್ಧತೆಯನ್ನು ಮೂಡಿಸುವುದಲ್ಲದೆ ವೈಯುಕ್ತಿಕ ಮತ್ತು ಔದ್ಯೋಗಿಕ ಪ್ರಗತಿಯನ್ನು ಸಾಧಿಸಲು ನೆರವಾಗುತ್ತದೆ.

ಸ್ವಯಂಶಿಸ್ತನ್ನು ಅಳವಡಿಸಿಕೊಳ್ಳುವುದು… ಜೀವನದ ಎಲ್ಲಾ ಆಯಾಮಗಳಲ್ಲಿ ಸ್ವಯಂಶಿಸ್ತು ಅತ್ಯವಶ್ಯಕ.ನಿಖರವಾದ ಗುರಿಗಳನ್ನು ತಲುಪಲು ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಆರೋಗ್ಯವಂತ ಜೀವನಶೈಲಿ ಮತ್ತು ಆರ್ಥಿಕ ವ್ಯವಹಾರಗಳನ್ನು ಇಟ್ಟುಕೊಳ್ಳುವುದು ಅತ್ಯವಶ್ಯಕ. ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಗುರಿಯನ್ನು ತಲುಪುವೆಡೆ ಅಚಲ ಶ್ರದ್ಧೆಯನ್ನು ಹೊಂದಿರುವ ಮೂಲಕ ಪ್ರತಿ ಹಂತದಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಬಹುದು.

ವೈಯಕ್ತಿಕ ಬೆಳವಣಿಗೆ ಮತ್ತು ಜೀವನಪರ್ಯಂತದ ಕಲಿಕೆಗಳು ನಮಗೆ ಹೊಸ ವಿಷಯಗಳ ಕುರಿತಾದ ಜ್ಞಾನ, ಕೌಶಲಗಳು ಮತ್ತು ಅನುಭವಗಳನ್ನು ನೀಡುತ್ತದೆ. ಬೆಳವಣಿಗೆ ಎಂಬುದು ನಿರಂತರ ಪ್ರಕ್ರಿಯೆ ಎಂಬ ಅರಿವನ್ನು ಮೂಡಿಸುವುದರ ಜೊತೆ ಜೊತೆಗೆ ತಮ್ಮ ಸುರಕ್ಷತಾ ಕವಚದಿಂದ ಹೊರಬಂದು ಸವಾಲುಗಳನ್ನು ಎದುರಿಸುವ ಮತ್ತು ಅವುಗಳನ್ನು ನಿರ್ವಹಿಸುವುದನ್ನು ಕಲಿಯುತ್ತಾರೆ.

ಓದುವುದು, ಕಾರ್ಯಾಗಾರಗಳಲ್ಲಿ ಭಾಗವಹಿಸುವುದು, ಹೊಸ ಹೊಸ ವಿಷಯಗಳನ್ನು ಕಲಿಯುವ ಹವ್ಯಾಸಗಳನ್ನು ರೂಡಿಸಿಕೊಳ್ಳುವ ಮೂಲಕ ಸದಾ ಹೊಸತನದೆಡೆಗೆ ಬದಲಾಗುತ್ತಿರುವ ಪ್ರಪಂಚದೊಂದಿಗೆ ಹೊಂದಾಣಿಕೆಯ ಹೆಜ್ಜೆ ಹಾಕಬೇಕು. ಧನಾತ್ಮಕ ಮಾನಸಿಕ ಸ್ಥಿತಿಯು ನಿಮ್ಮದಾಗಿದ್ದರೆ ನಿಮ್ಮ ಸುತ್ತಲಿನ ಎಲ್ಲರನ್ನೂ ನೀವು ಆಕರ್ಷಿಸುತ್ತೀರಿ.

ಗಟ್ಟಿ ಮುಟ್ಟಾದ ಮತ್ತು ಅರ್ಥಪೂರ್ಣವಾದ ಸಂಬಂಧಗಳನ್ನು ಹೊಂದಲು ಒಳ್ಳೆಯ ಜಾಣ್ಮೆ ಮತ್ತು ಅರ್ಥ ಮಾಡಿಕೊಳ್ಳುವ ಭಾವನಾತ್ಮಕ ಸ್ವಭಾವ ಬೇಕು. ಮನುಷ್ಯ ತನ್ನ ಭಾವನೆಗಳು ಮತ್ತು ಅದರ ಪರಿಣಾಮಗಳ ಕುರಿತು ಸ್ವಯಂ ಅರಿವನ್ನು ಬೆಳೆಸಿಕೊಳ್ಳಬೇಕು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕ.ಸಹಾನುಭೂತಿಯ ವರ್ತನೆಯಿಂದ ಒಳ್ಳೆಯ ಸಂವಹನ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸಬಹುದು. ಇದರಿಂದ ಪರಸ್ಪರ ಗೌರವ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ.

ತಿಳುವಳಿಕೆಯುಳ್ಳ ವ್ಯಕ್ತಿ ಇತರರನ್ನು ಯಾವುದೇ ರೀತಿಯ ಸಾಮಾಜಿಕ ಆರ್ಥಿಕ ಬೌದ್ಧಿಕ ಹಿನ್ನೆಲೆಯ ಇಸಂಗಳಿಗೆ ಒಳಗಾಗದೆ ಗೌರವಿಸುತ್ತಾನೆ. ಗಮನವಿಟ್ಟು ಕೇಳುತ್ತಾನೆ ಮತ್ತು ವಿವಿಧ ಆಯಾಮಗಳಲ್ಲಿ ವಿಷಯವನ್ನು ವಿಶ್ಲೇಷಿಸುವ ಮತ್ತು ಗೌರವಿಸುವ ಶಕ್ತಿಯನ್ನು ಹೊಂದುತ್ತಾನೆ. ಇದು ವ್ಯಕ್ತಿ ಗೌರವಕ್ಕೆ ಆತ ಕೊಡುವ ಮಾನ್ಯತೆಯನ್ನು ಸೂಚಿಸುತ್ತದೆ. ತನ್ನ ಕೆಲಸ ಕಾರ್ಯಗಳಿಂದ ಆತ ಗೌರವಕ್ಕೆ ಅರ್ಹನಾಗುತ್ತಾನೆಯೇ ಹೊರತು ಅಧಿಕಾರ ಚಲಾವಣೆಯಿಂದಲ್ಲ.

ನೈತಿಕತೆ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಗ್ರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರುತ್ತಾನೆ. ಪ್ರಾಮಾಣಿಕತೆ, ಗೌರವ ಮತ್ತು ನಿರಂತರ ಬದ್ಧತೆಯನ್ನು ತೋರುವ ವ್ಯಕ್ತಿ ತನ್ನ ವೈಯಕ್ತಿಕ ಮತ್ತು ಔದ್ಯೋಗಿಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ. ಸತ್ಯ ಮತ್ತು ನ್ಯಾಯಪರತೆಗಳು ಆತನ ವ್ಯಕ್ತಿತ್ವದಲ್ಲಿ ಮತ್ತು ಕಾರ್ಯಗಳಲ್ಲಿ ಅಡಕವಾಗಿರುತ್ತವೆ.ವ್ಯಕ್ತಿಯ ಒಳ್ಳೆಯ ಹವ್ಯಾಸಗಳು ಮೌಲ್ಯ ಮತ್ತು ತತ್ವಗಳನ್ನು ಆಧರಿಸಿದ್ದರೆ ಬೇರೆಯವರ ಗೌರವಕ್ಕೂ ಪಾತ್ರವಾಗುತ್ತವೆ.

ಅಧಿಕಾರದ ಸೂತ್ರಗಳನ್ನು ಹಿಡಿಯುವುದು ನಾಯಕತ್ವವಲ್ಲ… ಮುಂದಾಳತ್ವವನ್ನು ವಹಿಸಿ ಇತರರಿಗೆ ಸ್ಪೂರ್ತಿಯಾಗುವುದು ನಿಜವಾದ ನಾಯಕತ್ವದ ಲಕ್ಷಣ.

ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ತಾವು ಕೈಗೊಂಡ ನಿರ್ಧಾರಗಳ ಪರಿಣಾಮಗಳಿಗೆ ಜವಾಬ್ದಾರರಾಗುವುದು ಮತ್ತು ತಮ್ಮ ಸುತ್ತಲಿನ ಜನರನ್ನು ಅವರ ಅತ್ಯುನ್ನತ ಮಟ್ಟಕ್ಕೇರಲು ಪ್ರೋತ್ಸಾಹಿಸುವುದು ನಾಯಕತ್ವದ ಲಕ್ಷಣವಾಗಿದೆ.ನಿಜವಾದ ನಾಯಕ ಮಾತ್ರ ತಾವು ಇತರರಲ್ಲಿ ಬಯಸುವ ಸ್ವಭಾವಗಳನ್ನು ಮತ್ತು ಲಕ್ಷಣಗಳನ್ನು ತಾವೇ ಅನುಸರಿಸುವ ಮೂಲಕ ಮಾದರಿಯಾಗುವನು. ಈ ಹವ್ಯಾಸವು ಬೇರೆಯವರನ್ನು ಸಶಕ್ತಿಕರಣಗೊಳಿಸುತ್ತದೆ ಮತ್ತು ಮನೆ ಮನಗಳಲ್ಲಿ ಧನಾತ್ಮಕತೆಯನ್ನು ತುಂಬುವ ಮೂಲಕ ಒಳ್ಳೆಯ ವಾತಾವರಣವನ್ನು ಸೃಷ್ಟಿಸುತ್ತದೆ.

ಮೇಲ್ಕಂಡ ಹವ್ಯಾಸಗಳು ಓರ್ವ ವ್ಯಕ್ತಿಯನ್ನು ಹುಡುಗಾಟದಿಂದ ಜವಾಬ್ದಾರಿಯೆಡೆಗೆ,ಚಂಚಲತೆಯಿಂದ ಪ್ರಬುದ್ಧತೆಯೆಡೆಗೆ ಕರೆದೊಯ್ಯುವ ಸಾಧನಗಳಾಗಿದ್ದು ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ. ಅಂತಹ ಪ್ರಬುದ್ಧತೆ ಎಲ್ಲ ಯುವ ಶಕ್ತಿಯ ಬಾಳನ್ನು ಬೆಳಗಲಿ ಎಂಬ ಹಾರೈಕೆಯೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";