ಇತ್ತೀಚೆಗೆ ಫೇಸ್ಬುಕ್ನಲ್ಲಿ ತಮಿಳುನಾಡಿನ ಚೆನ್ನೈ ಮಹಾನಗರದ ಒಂದು ಶಾಲೆಯವರು ಎರಡು ತಿಂಗಳ ಬೇಸಿಗೆ ರಜೆಗೆ ಪಾಲಕರಿಗೆ ಒಂದು ಕಾರ್ಯ ಸೂಚಿಯನ್ನು ಪಾಲಿಸಲು ನಿಯೋಜಿಸಿತು. ಆ ಕಾರ್ಯಸೂಚಿಯು ಅತ್ಯಂತ ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿತ್ತು. ಆ ಕಾರ್ಯ ಸೂಚಿಯನ್ನು ಓದುವುದರ ಮೂಲಕ ಪಾಲಕರಿಗೆ ನಾವು ನಮ್ಮ ಮಕ್ಕಳೊಂದಿಗೆ ಹೇಗಿದ್ದೇವೆ ಮತ್ತು ಹೇಗಿರಬೇಕು ಎಂಬುದರ ಅರಿವನ್ನು ಮೂಡಿಸುವಂತಿದ್ದು ಇದೀಗ ಆ ಕಾರ್ಯಸೂಚಿಯು ಜಗತ್ತಿನಾದ್ಯಂತ ವೈರಲ್ ಆಗಿದೆ.
ವಯೋಲೆಟ್ ಮೆಟ್ರಿಕ್ಯುಲೇಶನ್ ಅಂಡ್ ಹೈಯರ್ ಸೆಕೆಂಡರಿ ಸ್ಕೂಲ್, ಚೆನ್ನೈ…. ತನ್ನ ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ಈ ರೀತಿಯ ಮನೆ ಪಾಠವನ್ನು ನೀಡಿದ್ದು ಇದು ಎಲ್ಲ ಪಾಲಕರಿಗೂ ಮಾರ್ಗದರ್ಶಿಯಾಗಿದ್ದು ಅದರ ಕನ್ನಡ ತಾತ್ಪರ್ಯ ಹೀಗಿದೆ.
ಕಳೆದ 10 ತಿಂಗಳಿಂದ ನಿಮ್ಮ ಮಕ್ಕಳನ್ನು ನಾವು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡಿದ್ದೇವೆ. ನಿಮ್ಮ ಮಕ್ಕಳು ಶಾಲೆಗೆ ಬರಲು ಇಷ್ಟಪಡುವುದನ್ನು ನೀವು ಗಮನಿಸಿರಬಹುದು. ಇದೀಗ ನಿಮ್ಮ ಸರದಿ. ಮುಂದಿನ ಎರಡು ತಿಂಗಳು ಆ ಮಕ್ಕಳ ನಿಜವಾದ ಪಾಲಕರು ಅಂದರೆ ನೀವುಗಳು ಅವರನ್ನು ಅಷ್ಟೇ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು. ಅದಕ್ಕಾಗಿ ನಾವು ನಿಮಗೆ ಕೆಲವು ಸಲಹೆಗಳನ್ನು ಕೊಡಲು ಇಚ್ಚಿಸುತ್ತೇವೆ. ನಮ್ಮ ಸಲಹೆಗಳು ನಿಮ್ಮ ಮಕ್ಕಳನ್ನು ಸಂತೋಷವಾಗಿ ಇಟ್ಟುಕೊಳ್ಳಲು ನಿಮಗೆ ಉಪಯೋಗಕರವಾಗಬಹುದು.
◆ ದಿನದ ಕನಿಷ್ಠ ಎರಡು ಹೊತ್ತಿನ ಆಹಾರವನ್ನು ನಿಮ್ಮ ಮಕ್ಕಳ ಜೊತೆ ಸೇವಿಸಿ. ನಿಮ್ಮ ಮಕ್ಕಳಿಗೆ ರೈತರು ಮತ್ತು ಅವರು ಪಡುವ ಶ್ರಮದ ಕುರಿತು ತಿಳಿ ಹೇಳಿ. ಆಹಾರವನ್ನು ಪೋಲು ಮಾಡದಂತೆ ಸೂಚಿಸಿ ಮತ್ತು ನಡೆದುಕೊಳ್ಳಿ
◆ ಊಟದ ನಂತರ ತಮ್ಮ ತಟ್ಟೆ, ಲೋಟ, ಚಮಚಗಳನ್ನು ತಾವೇ ತೊಳೆದುಕೊಳ್ಳಲು ಸೂಚಿಸಿ. ಮಕ್ಕಳಿಗೆ ಕೆಲಸದ ಮಹತ್ವದ ಅರಿವನ್ನು ಮೂಡಿಸುವುದರ ಜೊತೆ ಜೊತೆಗೆ ಸ್ವಾವಲಂಬನೆಯಲ್ಲಿ ದೊರೆವ ಸಂತಸದ ಅರಿವಾಗುತ್ತದೆ.
◆ ಮಕ್ಕಳು ಅಡುಗೆ ಮನೆಯಲ್ಲಿ ನಿಮಗೆ ಸಹಾಯ ಮಾಡಲಿ. ಯಾವುದಾದರೂ ಒಂದು ತರಕಾರಿಯ ಪಲ್ಯ ಇಲ್ಲವೇ ಸಲಾಡ್ ಗಳನ್ನು ಮಕ್ಕಳು ಮಾಡಲು ಬಿಡಿ.
◆ ಅಕ್ಕ ಪಕ್ಕದ ಜನರೊಂದಿಗೆ ಒಳ್ಳೆಯ ಸಂವಹನ ಮತ್ತು ಸ್ನೇಹ ಭಾವದಿಂದ ವರ್ತಿಸಲು ಅನುವು ಮಾಡಿಕೊಡಿ. ಸಹಬಾಳ್ವೆಯನ್ನು ಮಕ್ಕಳು ಇದರಿಂದ ಕಲಿಯುತ್ತವೆ.
◆ ಮಕ್ಕಳನ್ನು ಅವರ ಅಜ್ಜ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿ ಅವರು ಬೇರೆ ಮಕ್ಕಳೊಂದಿಗೆ ಬೆರೆಯಲಿ. ಹಿರಿಯರ ಅಕ್ಕರೆ ಮತ್ತು ಭಾವನಾತ್ಮಕ ಬೆಂಬಲ ಮಕ್ಕಳಿಗೆ ಅತ್ಯವಶ್ಯಕ. ಅಜ್ಜ, ಅಜ್ಜಿ ಮತ್ತು ಮೊಮ್ಮಕ್ಕಳ ಫೋಟೋಗಳನ್ನು ತೆಗೆದು ಅವುಗಳನ್ನು ಕಾಯ್ದಿರಿಸಿ.
◆ ಮಕ್ಕಳನ್ನು ನಿಮ್ಮ ಉದ್ಯೋಗದ ಸ್ಥಳಕ್ಕೆ ಕರೆದೊಯ್ಯಿರಿ. ಕುಟುಂಬಕ್ಕಾಗಿ ಮತ್ತು ಮಕ್ಕಳ
ಏಳಿಗೆಗಾಗಿ ನೀವು ಪಡುವ ಶ್ರಮವನ್ನು ಮಕ್ಕಳು ಅರಿಯಲಿ.
◆ ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳನ್ನು ಕಡ್ಡಾಯವಾಗಿ ಆಚರಿಸಿ. ಆ ದಿನ ಮಾರುಕಟ್ಟೆಗೆ ಮಕ್ಕಳನ್ನು ಕರೆದೊಯ್ದು ತೋರಿಸುವುದನ್ನು ಮರೆಯದಿರಿ.
◆ನಿಮ್ಮ ಮಕ್ಕಳಿಗೆ ಸಣ್ಣಪುಟ್ಟ ಬೀಜಗಳನ್ನು ನಾಟಿ ಮಾಡಲು, ಮತ್ತು ಅವುಗಳಿಗೆ ನೀರು ಹಾಕಲು ಬಳಸಲು ಅನುವು ಮಾಡಿಕೊಡಿ. ಸಸಿಗಳ,ಗಿಡ ಮರಗಳ ಕುರಿತ ಜ್ಞಾನ ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
◆ ಮಕ್ಕಳೊಂದಿಗೆ ನಿಮ್ಮ ಬಾಲ್ಯದ ಸವಿ ನೆನಪುಗಳನ್ನು ಹಂಚಿಕೊಳ್ಳಿ…. ನಿಮ್ಮ ಕುಟುಂಬದ ಇತಿಹಾಸದ ಅರಿವನ್ನು ಮಕ್ಕಳು ಹೊಂದಿರಲಿ.
◆ ಮಕ್ಕಳು ಮನೆಯಿಂದ ಆಚೆ ಹೊರಗಡೆ ಆಡಿಕೊಳ್ಳಲಿ, ಧೂಳು ಮಣ್ಣು ಕೆಸರಿನಿಂದ ಆವೃತ್ತರಾಗಲಿ, ಪೆಟ್ಟು ತಿನ್ನಲಿ. ಸೋಲುವುದು ಮತ್ತು ನೋವನ್ನನುಭವಿಸುವುದು ಕೂಡ ಕೆಲವೊಮ್ಮೆ ಒಳ್ಳೆಯದು. ಸೋಫಾಗೆ ಹಾಕಿರುವ ಕುಶನ್ನಿನಂತೆ ಅತಿಯಾದ ಆರಾಮದಾಯಕ ಜೀವನ ನಿಮ್ಮ ಮಕ್ಕಳನ್ನು ಆಲಸಿಗಳನ್ನಾಗಿಸಬಹುದು.
◆ ಸಾಕು ಪ್ರಾಣಿಗಳ ಒಡನಾಟದ ಅನುಭವವನ್ನು ಮಕ್ಕಳು ಹೊಂದಲಿ ಮನೆಯಲ್ಲಿ ನಾಯಿ ಬೆಕ್ಕು ಮೀನು ಮತ್ತು ಹಕ್ಕಿಗಳಲ್ಲಿ ಅವರಿಗೆ ಇಷ್ಟವಾದ ಯಾವುದಾದರೊಂದನ್ನು ಸಾಕಲು ಅವಕಾಶ ಮಾಡಿಕೊಡಿ. ಮಕ್ಕಳಲ್ಲಿ ಪಾಲನೆಯ ಮತ್ತು ಪೋಷಣೆಯ ಜವಾಬ್ದಾರಿ ಮೂಡಿಸಲು ಇದು ಕೂಡ ಸಹಾಯಕ.
◆ ಮಕ್ಕಳಿಗೆ ಹಳ್ಳಿಯ ಹಾಡುಗಳು, ಜಾನಪದ ಗೀತೆ ಒಗಟುಗಳ ಪರಿಚಯ ಮಾಡಿಕೊಡಿ.
◆ ಮಕ್ಕಳಿಗಾಗಿ ಬಣ್ಣ ಬಣ್ಣದ ಆಕರ್ಷಕವಾದ ಕಥೆ ಪುಸ್ತಕಗಳನ್ನು ತನ್ನಿ.
◆ ಮಕ್ಕಳನ್ನು ದೂರದರ್ಶನ, ಮೊಬೈಲ್ ಫೋನ್, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಂದ ದೂರವಿರಿಸಿ. ಇವೆಲ್ಲವುಗಳ ಜೊತೆ ಅವರ ಇಡೀ ಮುಂದಿನ ಜೀವನ ಸಾಗಿಸಬೇಕು ಆದರೆ ಸದ್ಯಕ್ಕೆ ಬೇಡ ಎಂಬುದನ್ನು ಮನದಟ್ಟು ಮಾಡಿಸಿ.
◆ ಕರಿದ ತಿಂಡಿಗಳು,ಚಾಕ್ಲೇಟ್ಗಳು,ಜೆಲ್ಲಿಗಳು,ಕ್ರೀಮ್ ಕೇಕ್ಗಳು, ಚಿಪ್ಸ್ ಗಳು, ಸಮೋಸ ಮತ್ತು ಪಫ್ ನಂತಹ ಬೇಕರಿ ಪದಾರ್ಥಗಳಿಂದ ದೂರವಿಡಿ. ರಾಸಾಯನಿಕಗಳನ್ನು ಹೊಂದಿರುವ ಕೂಲಡ್ರಿಂಕಗಳ ಬದಲಾಗಿ ಮನೆಯಲ್ಲೇ ತಯಾರಿಸಿದ ಪಾನಕ, ಶರಬತ್ತುಗಳನ್ನು ಕುಡಿಯಲು ಪ್ರೋತ್ಸಾಹಿಸಿ. ಅವರೇ ತಯಾರಿಸಲು ಅವಕಾಶ ಒದಗಿಸಿ. ಮಾಡಿಕೊಟ್ಟಾಗ ಪ್ರೀತಿಯಿಂದ ಪ್ರಶಂಶಿಸಿ.
◆ ನಿಮ್ಮ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮಂತಹ ಒಳ್ಳೆಯ ಮಗುವನ್ನು ಕರುಣಿಸುವುದಕ್ಕಾಗಿ ಆ ದೇವರಿಗೆ ಕೃತಜ್ಞತೆ ಅರ್ಪಿಸಿ. ಮುಂದಿನ ಕೆಲವೇ ವರ್ಷಗಳಲ್ಲಿ ನಿಮ್ಮ ಮಗು ಖಂಡಿತವಾಗಿಯೂ ಹೊಸ ಎತ್ತರಗಳನ್ನು ತಲುಪುತ್ತದೆ.
◆ ಪಾಲಕರಾಗಿ ನೀವು ನಿಮ್ಮ ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತೀರಿ ಎಂಬುದು ಅತ್ಯಂತ ಮುಖ್ಯವಾದದ್ದು.
ನೀವು ಒಬ್ಬ ಪಾಲಕರಾಗಿದ್ದರೆ ಮೇಲಿನ ಸೂಚನೆಗಳನ್ನು ಓದುವಾಗ ನಿಮ್ಮ ಕಣ್ಣುಗಳು ಒದ್ದೆಯಾಗಿದ್ದರೆ ಇದುವರೆಗೂ ಬದುಕಿನಲ್ಲಿ ನೀವು ಕಳೆದುಕೊಂಡಿರುವುದು ಏನು ಎಂಬುದರ ಅರಿವಾಗುತ್ತದೆ. ನೀವು ನಿಮ್ಮ ಮಕ್ಕಳೊಂದಿಗೆ ಈ ರೀತಿ ನಡೆದುಕೊಂಡಿಲ್ಲವಾದರೆ ಇದೀಗ ಆ ತಪ್ಪನ್ನು ಸುಧಾರಿಸಲು ಒಳ್ಳೆಯ ಸಮಯ.
ಹೌದಲ್ಲವೇ ಸ್ನೇಹಿತರೆ, ಚೆನ್ನೈನ ಶಾಲೆಯವರು ನೀಡಿರುವ ಈ ಕಾರ್ಯಸೂಚಿಯಲ್ಲಿ ಹೇಳಿರುವ ಪ್ರತಿ ಪದವು ಅಕ್ಷರಶಃ ಸತ್ಯವಾಗಿದ್ದು ಇವೆಲ್ಲವೂ ನಮ್ಮ ಬಾಲ್ಯ ಜೀವನದ ಭಾಗವಾಗಿದ್ದು ಈ ಎಲ್ಲವನ್ನು ನಾವು ನಮ್ಮ ಜೀವನದಲ್ಲಿ ಅನುಭವಿಸಿ ಬೆಳೆದಿದ್ದೇವೆ. ಆದರೆ ನಮ್ಮ ಮಕ್ಕಳು ಈ ಎಲ್ಲದರಿಂದ ವಂಚಿತರಾಗಿದ್ದಾರೆ… ಕಾರಣ ಸ್ಪಷ್ಟವಾಗಿದೆ.
ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಮಕ್ಕಳಿಗೆ ಕೌಟುಂಬಿಕ ಭದ್ರತೆಯ, ಹಿರಿಯರ ಅಕ್ಕರೆಯ, ಪ್ರೀತಿಯ, ವಿಶ್ವಾಸದ, ಮಾನಸಿಕ ಬಂಧದ ಅವಶ್ಯಕತೆ ಇದೆ. ಮಕ್ಕಳಿಗೆ ತುಸು ತ್ಯಾಗದ ಅರಿವನ್ನು ಮೂಡಿಸುವ ಅವಶ್ಯಕತೆ ಇದೆ, ಬದ್ಧತೆ, ಸೇವಾ ಮನೋಭಾವ ಮತ್ತು ದಾನ ಪ್ರವೃತ್ತಿಯನ್ನು ಬೆಳೆಸಬೇಕಾಗಿದೆ. ಮಕ್ಕಳಲ್ಲಿ ಮೌಲ್ಯವನ್ನು ಬಿತ್ತಿ ಭವಿಷ್ಯದಲ್ಲಿ ಉತ್ತಮ ನಾಗರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ನಾವು ನಮ್ಮ ಅಹರ್ನಿಶಿ ಯತ್ನವನ್ನು ಮಾಡಲೇಬೇಕಾದ ಪರಿಸ್ಥಿತಿ ನಮ್ಮ ಮುಂದಿದ್ದು ಈ ಪ್ರಯತ್ನದಲ್ಲಿ ಯಶ ಸಾಧಿಸುವ ಮೂಲಕ ಉತ್ತಮ
ಮಾನವೀಯ ಮೌಲ್ಯಗಳನ್ನೊಳಗೊಂಡ ಜನಾಂಗವನ್ನು ಸೃಷ್ಟಿಸೋಣ ಎಂಬಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ