Ad image

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಸಿದ್ದತೆಗೆ ಎಡಿಸಿ ಸೂಚನೆ

Vijayanagara Vani
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಸಿದ್ದತೆಗೆ ಎಡಿಸಿ ಸೂಚನೆ
ಶಿವಮೊಗ್ಗ, ಜೂ.26
2024 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು(ಕೆಎಆರ್ಟಿಇಟಿ-24) ಜೂನ್ 30 ರಂದು ನಗರದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಪರೀಕ್ಷೆಯು ಶಾಂತಿಯುತವಾಗಿ ನಡೆಯಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜೂ.26 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂ.30 ರ ಬೆಳಿಗ್ಗೆ 9.30 ರಿಂದ 12 ಗಂಟೆವರೆಗೆ ಪತ್ರಿಕೆ-1, ಅಪರಾಹ್ನ 2 ರಿಂದ 4.30 ರವರೆಗೆ ಪತ್ರಿಕೆ 2 ಪರೀಕ್ಷೆಗಳು ನಡೆಯಲಿದೆ. 11 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ಹಾಗೂ 17 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-2 ರ ಪರೀಕ್ಷೆ ನಡೆಯಲಿದೆ. ಮೊದಲನೇ ಅಧಿವೇಶನದಲ್ಲಿ 2874 ಮತ್ತು ಎರಡನೇ ಅಧಿವೇಶನದಲ್ಲಿ 4676 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ಕೇಂದ್ರ ಸ್ಥಾನಿಕ ಜಾಗೃತದಳ, ಮಾರ್ಗಾಧಿಕಾರಿಗಳು, ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಮತ್ತು ಇತರೆ ಸಿಬ್ಬಂದಿಗಳನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವನ್ನು ಜಿಲ್ಲಾಧಿಕಾರಿಗಳು ಘೋಷಿಸಿ ಆದೇಶ ಹೊರಡಿಸಿರುತ್ತಾರೆ.
ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಮಳೆಗಾಲವಾದ್ದರಿಂದ ಪರೀಕ್ಷೆ ಮುನ್ನ ಕೊಠಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು.
ಅಭ್ಯರ್ಥಿಗಳು ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಕ್ಕೆ ತರಬೇಕು. ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಬರಬೇಕು. ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುದಿಲ್ಲ. ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರಗಳಿಗೆ ಬಿಡಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿವುದು.
ಅಭ್ಯರ್ಥಿಗಳು ಗುಂಪುಗೂಡದಂತೆ ಪರೀಕ್ಷಾ ಕೇಂದ್ರದ ಹೊರಗಡೆ 2-3 ಕಡೆಗಳಲ್ಲಿ ನೋಟಿಸ್ ಬೊರ್ಡ್ನ್ನು ಹಾಕಿ ಅಭ್ಯರ್ಥಿಗಳಿಗೆ ನೋಂದಣಿ ಸಂಖ್ಯೆ, ಕೊಠಡಿ ಸಂಖ್ಯೆ ಮತ್ತು ಅಂತಸ್ತಿನ ಸಂಖ್ಯೆ ಪ್ರಕಟಿಸಬೇಕು. ದೃಷ್ಟಿದೋಷವುಳ್ಳವರು ಮತ್ತು ವಿಕಲಚೇತನರಿಗೆ ಇರುವ ಸೌಲಭ್ಯಗಳನ್ನು ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಗೂ ಪರೀಕ್ಷೆಗೆ ನಿಯೋಜಿಸಲಾದ ಎಲ್ಲ ಅಧಿಕಾರಿ/ಸಿಬ್ಬಂದಿಗಳು ತಮಗೆ ನೀಡಲಾದ ಮಾರ್ಗಸೂಚಿಗಳನ್ನು ಅನುಸರಿಸಿ, ಪರೀಕ್ಷೆ ಯಶಸ್ವಿಯಾಗಿ ನಡೆಯಲು ಅಗತ್ಯವಾದ ಎಲ್ಲ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ, ಕೇಂದ್ರ ಸ್ಥಾನಿಕ ಜಾಗೃತ ದಳ, ಮಾರ್ಗಾಧಿಕಾರಿಗಳು, ಅಧೀಕ್ಷಕರು ಮತ್ತು ಪರೀಕ್ಷಾ ನಿಯೋಜಿತ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ಪರೀಕ್ಷಾ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲರಾದ ಬಸವರಾಜ್, ಶಿಕ್ಷಣಾಧಿಕಾರಿ ಲೋಕೇಶಪ್ಪ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಪಾಲ್ಗೊಂಡಿದ್ದರು.
Share This Article
error: Content is protected !!
";