ಕೊಟ್ಟೂರು : ತಾಲೂಕು ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸತತ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಇಳೆಗೆ ವರುಣದೇವ ಬಿಟ್ಟುಬಿಡದೆ ತಂಪೆರೆಯುತ್ತಿದ್ದಾನೆ ಕೊಟ್ಟೂರು ತಾಲೂಕು ಮಳೆಯಾಶ್ರಿತ ಕೃಷಿ ಪ್ರದೇಶವಾಗಿದ್ದು ಇಲ್ಲಿನ ಬಹುತೇಕ ರೈತರು ಮಳೆಯನ್ನೇ ನಂಬಿ ಕೂತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ 32,000 ಹೆಕ್ಟರ್ ಭೂಮಿಯಲ್ಲಿ ಇದೀಗ ಬಿತ್ತನೆಗೆ ರೈತರು ಅಣಿಯಾಗಿದ್ದಾರೆ. ಜೋಳ ಹಾಗೂ
ಸೂರ್ಯಕಾಂತಿ ಬೆಳೆಗಳ ಬಿತ್ತನೆಗೆ ಸಕಾಲವಾಗಿದ್ದು, ಈಗಾಗಲೇ ರೈತರು ಭೂಮಿಯನ್ನು ಹಸನು ಮಾಡಿಕೊಂಡಿದ್ದಾರೆ. ಹಾಗೂ ಬಿತ್ತನೆ ಬೀಜ ಗೊಬ್ಬರ ಇನ್ನಿತರ ಕೃಷಿ ಪರಿಕರ ಚಟುವಟಿಕೆಗಳಿಗೆ ರೈತ ಸಂಪರ್ಕ ಕೇಂದ್ರಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಇದೇ ವೇಳೆ ಕೃಷಿ ಅಧಿಕಾರಿಗಳ ತಂಡ ಜಾಗೃತಿ ವಹಿಸಿದ್ದು ರೈತರು ಯಾವುದೇ ಮಧ್ಯವರ್ತಿಗಳ ಸಂಪರ್ಕ ಮಾಡದೆ ಹಾಗೂ ನಕಲಿ ಬೀಜಗಳ ಮೊರೆ ಹೋಗದೆ ಅಧಿಕೃತ ಡೀಲರ್ ಹಾಗೂ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಿ ರಿಯಾಯಿತಿ ದರದಲ್ಲಿ ಖರೀದಿಸಲು ಸಲಹೆ ನೀಡಿದ್ದಾರೆ. ಸೋಮವಾರ ರಾತ್ರಿಯಿಂದ ಸುರಿದ ಮಳೆಗೆ ತಾಲೂಕಿನ ಕೊಗಳಿ ಹೋಬಳಿಯಲ್ಲಿ ಗರಿಷ್ಠ 50.3 ಮಿ. ಮಿ ಮಳೆಯಾದ ವರದಿಯಾಗಿದೆ. ಕೊಟ್ಟೂರಿನಲ್ಲಿ 16.8 ಮಿ. ಮೀ ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ಚುರುಕಾಗಿದ್ದಾರೆ.
ಕೊಟ್ಟೂರು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನಿದ್ದು ರೈತರು ತಮ್ಮ ದಾಖಲಾತಿಗಳನ್ನು ನೀಡಿ ಬಾರ್ ಕೋಡ್ ಸ್ಕ್ಯಾನರ್ ಮುಖಾಂತರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸ ಬಹುದಾಗಿದೆ.
ಸುನಿಲ್ ಕುಮಾರ್ ಸಹಾಯಕ ಕೃಷಿ ನಿರ್ದೇಶಕ