ಸಿರುಗುಪ್ಪ.ಜೂ.೦೧:- ಕೃಷಿ ಪರಿಕರಗಳ ಮಾರಾಟಗಾರರು ರೈತರಿಗೆ ದೇವರಿದ್ದಂತೆ ಮಾರಾಟಗಾರರು ಏನು ಹೇಳುತ್ತಾರೋ ಅದನ್ನು ರೈತರು ಕೇಳುತ್ತಾರೆ, ಅಧಿಕಾರಿಗಳ ಹೇಳಿದ್ದನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹೊರಗೆ ಬಿಡುತ್ತಾರೆ. ಆದ್ದರಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡಬೆಕೇಂದು ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಂಜುನಾಥ ತಿಳಿಸಿದರು.
ನಗರದ ಸಿ.ಡಿ.ಪಿ.ಒ ಕಛೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಮಾರಾಟಗಾರರು ತಮ್ಮ ಅಂಗಡಿಯ ಲೈಸನ್ಸ್ನ್ನು ಬಹಿರಂಗವಾಗಿ ಹಾಕಬೇಕು, ಅಲ್ಲದೆ ತಮ್ಮಲ್ಲಿ ಸಂಗ್ರಹವಿರುವ ರಸಗೊಬ್ಬರ, ಕ್ರಿಮಿನಾಶಕ, ಬೀಜಗಳ ಧರದ ಪಟ್ಟಿಯನ್ನು ಭೋರ್ಡ್ನಲ್ಲಿ ಹಾಕಬೇಕು, ಯಾವುದೇ ವಸ್ತುವನ್ನು ರೈತರು ಖರೀದಿಸಿದರು ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು, ಅಲ್ಲದೆ ಡಿ.ಎ.ಪಿ. ಗೊಬ್ಬರಕ್ಕೆ ಪರ್ಯಾಯವಾಗಿ ಅನೇಕ ಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪರ್ಯಾಯ ಗೊಬ್ಬರಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಬೇಕು, ಬೇರೆ ರಾಜ್ಯದಿಂದ ಯಾವುದೇ ರಸಗೊಬ್ಬರ, ಬೀಜ, ಕೀಟನಾಶಕ ತಂದು ಮಾರಾಟ ಮಾಡುವುದು ಅಕ್ರಮವಾಗಿರುತ್ತದೆ. ಯಾವ ಊರಿನಲ್ಲಿ ಲೈಸೆನ್ಸ್ ಪಡೆದಿರುತ್ತೀರೋ ಅದೇ ಊರಿನಲ್ಲಿ ಅಂಗಡಿಯನ್ನು ತೆರೆಯಬೇಕು, ಬೇರೆಕಡೆ ತೆರೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಆಂದ್ರಪ್ರದೇಶದಿAದ ಗಡಿಭಾಗದ ಹಳ್ಳಿಗಳಿಗೆ ಹತ್ತಿಬೀಜ, ಔಷಧಿ, ನ್ಯೂಟ್ರೆಂಟ್‌ಗಳು ಬರುತ್ತಿದ್ದು, ರೈತರು ಹೊಲದಲ್ಲಿ ಮಾರಾಟ ಮಾಡಲು ಬರುವವರಿಂದ ಯಾವುದೇ ಪರಿಕರಗಳನ್ನು ಖರೀದಿಸಬಾರದು, ಅಧಿಕೃತ ಮಾರಾಟಗಾರರ ಹತ್ತಿರ ತೆಗೆದುಕೊಂಡು ಕಡ್ಡಾಯವಾಗಿ ರಸೀದಿ ಪಡೆದು ಬೆಳೆ ಮನೆಗೆ ಬರುವವರೆಗೂ ರಸೀದಿ ಮತ್ತು ಬೀಜದ ಚೀಲವನ್ನು ಕಾಯ್ದಿರಿಸಬೇಕು. ಒಂದು ವೇಳೆ ಬೀಜ ಸರಿಯಾಗಿ ಬೆಳೆ ಕೊಡದಿದ್ದರೆ ನಷ್ಟ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ವ್ಯಾಪಾರಿಗಳು ರೈತರ ಹಿತದೃಷ್ಟಿಯನ್ನಿಟ್ಟುಕೊಂಡು ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬೇಕು, ರೈತರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆಯ ತನಿಖಾದಳದ ಸಹಾಯಕ ನಿರ್ದೇಶಕ ಮುಜಬಿರ್ ರೆಹಮಾನ್ ಮಾತನಾಡಿ ಇಲಾಖೆಯ ಮಾರ್ಗದರ್ಶನದಲ್ಲಿ ವ್ಯಾಪಾರಿಗಳು ಮಾರಾಟ ಮಾಡಲು ಅನುಮತಿಯನ್ನು ಕೊಡಲಾಗಿದೆ, ಆದ್ದರಿಂದ ಸರ್ಕಾರದ ಮಾರ್ಗದರ್ಶಿಯ ಪ್ರಕಾರ ವ್ಯಾಪಾರಿಗಳು ತಮ್ಮ ವಹಿವಾಟನ್ನು ನಡೆಸಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ವ್ಯಾಪಾರಿಗಳು ಮೂರು ರೀತಿಯ ವ್ಯಾಪಾರ ಮಾಡಲು ಮೂರು ರೀತಿಯ ಲೈಸನ್ಸ್ಗಳನ್ನು ಪಡೆದುಕೊಳ್ಳಬೇಕು, ಒಂದೇ ಲೈಸನ್ಸ್ನಲ್ಲಿ ಮೂರು ರೀತಿಯ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.
ವ್ಯಾಪಾರ ಮಾಡಲು ಲೈಸನ್ಸ್ಗಳನ್ನು ನೀಡುವಲ್ಲಿ ಪಾರದರ್ಶಕ ಕಾಯ್ದುಕೊಂಡಿದ್ದು, ಹೊಸ ಹೊಸ ಕಾನೂನುಗಳು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುತ್ತಿವೆ, ಎಲ್ಲಾ ಹೊಸ ಕಾನೂನುಗಳ ಬಗ್ಗೆ ವ್ಯಾಪಾರಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಕೃಷಿ ಅಧಿಕಾರಿಗಳಾದ ಬಾಲಾಜಿನಾಯ್ಕ್, ಪರಮೇಶ್ವರರೆಡ್ಡಿ, ಪುರುಷೋತ್ತಮ ಮತ್ತು ವಿವಿಧ ಗ್ರಾಮಗಳ ಕೃಷಿ ಪರಿಕರಗಳ ಮಾರಾಟಗಾರರು ಇದ್ದರು.
ಕೃಷಿ ಪರಿಕರ ಮಾರಾಟಗಾರರ ಸಭೆ:
