ಸಿರುಗುಪ್ಪ.ಜೂ.12:- ತಾಲೂಕಿನಲ್ಲಿ ಜನವರಿಯಿಂದ ಜೂನ್ ವರೆಗೆ 155.6 ಮಿ.ಮೀ. ಮಳೆ ಬರಬೇಕಾಗಿತ್ತು, ಆದರೆ 93.9ಮಿ.ಮೀ. ಮಳೆ ಬಂದಿದ್ದು, ಶೇ.34ರಷ್ಟು ಮಳೆ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಂಗಳವಾರ ಮತ್ತು ಬುಧವಾರ ಅಲ್ಲಲ್ಲಿ ಮಳೆಯಾಗಿದ್ದು, ಬುಧವಾರ ಬೆಳಗಿನಿಂದ ತಾಲೂಕಿನ ಕೆಲವು ಬಾಗಗಳಲ್ಲಿ ತುಂತುರು ಮಳೆ ಸುರಿದರೆ ಕೆಲವು ಭಾಗಗಳಲ್ಲಿ ಜೋರಾದ ಮಳೆ ಸುರಿದಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳು ಬೆಳೆಯಲು ಅನುಕೂಲವಾಗಿದೆ. ಇಲ್ಲಿಯವರೆಗೆ ತಾಲೂಕಿನಲ್ಲಿ 180 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 80-90 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬಿತ್ತನೆಯಾಗಿದ್ದು, ಕೆಲವು ಕಡೆ ಭಾನುವಾರವೂ ರೈತರು ಹತ್ತಿ ಮತ್ತು ಸೂರ್ಯಕಾಂತಿ, ಸಜ್ಜೆ ಬೆಳೆಯ ಬೀಜವನ್ನು ನಾಟಿ ಮಾಡುವ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂತು. ಆದರೆ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿರುವುದಿಲ್ಲ.
ಕೃಷಿ ಇಲಾಖೆಯ ಪ್ರಕಾರ 155.6ಮಿ.ಮೀ. ಮಳೆಯಾಗಬೇಕಾಗಿತ್ತು, ಆದರೆ 93.9ಮಿ.ಮೀ. ಮಳೆಯಾಗಿದ್ದು, ಶೇ.34ರಷ್ಟು ಮಳೆಯ ಕೊರತೆ ಉಂಟಾಗಿದೆ. ಮಳೆ ಕೊರತೆ ನಡುವೆಯೂ ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಬೇಕಾದ ಬೀಜಗಳನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದು, ಮಳೆ ಬಿಡುವು ಕೊಟ್ಟರೆ ಬೀಜ ಬಿತ್ತನೆ ಕಾರ್ಯ ತಾಲೂಕಿನಾದ್ಯಂತ ಜೋರಾಗಿ ನಡೆಯಲಿದೆ.
ನಗರದಲ್ಲಿ ಬೆಳಗಿನ ಜಾವದಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಶಾಲೆಗೆ ತೆರಳುವ ಮಕ್ಕಳು ಮತ್ತು ಸರ್ಕಾರಿ ಕಛೇರಿಗಳಿಗೆ ಬರುವ ಅಧಿಕಾರಿಗಳಿಗೆ ಹಾಗೂ ಬೀದಿ ಬದಿಯಲ್ಲಿ ಹೂ, ಹಣ್ಣು, ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳಿಗೂ ಅನಾನುಕೂಲವಾಗಿತ್ತು.
ತಾಲೂಕಿನಾದ್ಯಂತ ಮಳೆ ಸುರಿದಿದ್ದು, ಸಿರುಗುಪ್ಪ 18.0, ತೆಕ್ಕಲಕೋಟೆ 12.8, ಸಿರಿಗೇರಿ 13.1, ಎಂ.ಸೂಗೂರು 9.2, ಹಚ್ಚೊಳ್ಳಿ 16.4, ರಾವಿಹಾಳು 34.2, ಕರೂರು 22.4, ಕೆ.ಬೆಳಗಲ್ಲು 22.4 ಮಿ.ಮೀ. ಮಳೆಯಾಗಿದೆ ಎಂದು ತಾಲೂಕು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.