ಸಿಂಧನೂರು:ನಗರದ ಅನೇಕ ಹೊಟೇಲ್ ಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಗ್ರಾಮಾಂತರ ಪ್ರದೇಶಗಳಿಂದ ಬರುವ ರೈತರು, ಶಾಲಾ ಮಕ್ಕಳು, ಸಾರ್ವಜನಿಕರು, ಇದ್ಯಾವುದನ್ನು ಗಮನಿಸದೆ ಟಿಫಿನ್, ಊಟ, ಮತ್ತು ಟೀ ಕುಡಿದು ಹೋಗುತ್ತಾರೆ. ಇನ್ನು ಅಡುಗೆಯಲ್ಲಿ ಒಮ್ಮೆ ಮಾಡಿದ ಎಣ್ಣೆಯನ್ನೆ ಮತ್ತೆ ಮತ್ತೆ ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರ ಎಂದು ತಾಲೂಕು ಅಂಬೇಡ್ಕರ್ ದಲಿತ ಸೇನೆ ಅಧ್ಯಕ್ಷ ವಿರುಪಾಕ್ಷಿ ಸಾಸಲಮರಿ ಹೇಳಿದರು.
ತಾಲೂಕು ಉಪತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಹೊಟೇಲ್ ಗಳಲ್ಲಿ ತಿಂಡಿ ತಿನ್ನುವ, ಊಟ ಮಾಡುವ, ಗ್ರಾಹಕರ ಆರೋಗ್ಯ ಕಾಪಾಡುವಂತೆ ಮನವಿ ಮಾಡಿ ಮಾತನಾಡಿದ ಅವರು, ಹೊಟೇಲ್ ಗಳಲ್ಲಿ ಅಡುಗೆ ಮಾಡುವವರಿಗೆ ಸ್ವಚ್ಛತೆಯಿಂದರಲು ಮಾಲೀಕರು ಹೇಳಬೇಕು. ಹೆಂಗಾದರೂ ಇರಲಿ ನಮ್ಮ ಹೊಟೇಲ್ ಗೆ ಗ್ರಾಹಕರು ಬಂದರೆ ಸಾಕು, ನಮ್ಮ ಖಜಾನೆ ತುಂಬಿದರೆ ಸಾಕು, ಅನ್ನೋ ಮನೋಭಾವನೆ ಇರಬಾರದು.
ಆಹಾರ ಇಲಾಖೆ ನಿರೀಕ್ಷಕರು, ನಗರಸಭೆ ನೈರ್ಮಲ್ಯ ನಿರೀಕ್ಷಕರು, ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾಕೆ ಈ ಕುರಿತು ತನಿಖೆ ಮಾಡಲಿಲ್ಲ. ಇವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲವೆ? ಅಥವಾ ಯಾರಿಗೆ ಏನಾದರೂ ಆಗಲಿ ನಮಗೆ ಬರುವ ಕಮಿಷನ್ ಬಂದರೆ ಸಾಕು ಎಂಬ ತಾತ್ಸಾರವೆ?ಕಾರ್ಮಿಕ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಶುದ್ದವಿಲ್ಲದ ಕಾರ್ಮಿಕರೊಂದಿಗೆ ಹೊಟೇಲ್ ಮಾಲೀಕರು ಅಡುಗೆ ಮಾಡಿಸಿ ಗ್ರಾಹಕರಿಗೆ ಅವರಿಂದಲೇ ಸರ್ವಿಸ್ ಮಾಡಿಸುತ್ತಾರೆ. ಇಂತಹ ಮಾಲೀಕರ ವಿರುದ್ದ ಕಾರ್ಮಿಕ ಇಲಾಖೆಯವರು ಕ್ರಮ ಜರುಗುಸುತ್ತಿಲ್ಲ. ಇನ್ನು ಮುಂದಾದರು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿ, ಕ್ರಮ ಜರುಗಿಸಲು ಸೂಚಿಸಿ, ಇದಕ್ಕೂ ಹೊಟೇಲ್ ಗಳ ಮಾಲೀಕರು ಬಗ್ಗದೇ ಹೋದರೆ ಅಂತಹವರ ವಿರುದ್ಧ ಆಹಾರ ಪೂರೈಕೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲು ಒತ್ತಾಯಿಸಿದರು.
ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ ಅಂಬೇಡ್ಕರ್ ದಲಿತ ಸೇನೆ ಸಮಿತಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಸ್ವಚ್ಛತೆ ಇರದ ಹೊಟೇಲ್ ಗಳನ್ನು ಬಂದ್ ಮಾಡಿಸಲು ತಮ್ಮ ಮತ್ತು ನಗರಸಭೆ ಕಾರ್ಯಾಲಯದ ಮುಂದೆ ಏಕಕಾಲಕ್ಕೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ: ಅಂಬೇಡ್ಕರ್ ದಲಿತ ಸೇನೆ ಸಮಿತಿಯ ಪ್ರಧಾನ ಕಾರ್ಯದರ್ಶಿ ದೊಡ್ಡಬಸವರಾಜ, ಸದಸ್ಯರಾದ ಬಸವರಾಜ, ಶರಣಬಸವ, ಇದ್ದರು.