Ad image

ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ….ಒಂದು ಅವಲೋಕನ

Vijayanagara Vani
ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ….ಒಂದು ಅವಲೋಕನ

ಪುಟ್ಟ ಬಾಲಕಿಯ ತಲೆ ನೋವಿನಿಂದ ಸಿಡಿಯುತ್ತಿತ್ತು ಕಾರಣ ಸ್ಪಷ್ಟ…. ಕಳೆದೆರಡು ದಿನಗಳಿಂದ ಆಕೆ ಊಟ ಮಾಡಿರಲಿಲ್ಲ. ಹಸಿವಿನ ಸಂಕಟವು ತಲೆನೋವಿನ ರೂಪದಲ್ಲಿ ಕಾಣಿಸಿಕೊಂಡಿತ್ತು.

- Advertisement -
Ad imageAd image

ವೈಭವೋಪೇತ ಕಲ್ಯಾಣಮಂಟಪದ ಹಿಂದಿನ ಕಸದ ತೊಟ್ಟಿಯಲ್ಲಿ ಹಲವಾರು ನಾಯಿಗಳು ಉಂಡು ಎಸೆದ ಬಾಳೆ ಎಲೆಯಲ್ಲಿ ಉಳಿದ ಆಹಾರವನ್ನು ಸೇವಿಸುತ್ತಿದ್ದರೆ ಅಲ್ಲಿಯೇ ದೂರದ ಸ್ಲಂ ನ ಮಕ್ಕಳು ಆ ನಾಯಿಗಳನ್ನು ಓಡಿಸಿ ಅಲ್ಲಿ ಹಾಕಿದ್ದ ಇನ್ನಿತರ ಎಲೆಗಳಲ್ಲಿನ ಅಳಿದುಳಿದ ಆಹಾರವನ್ನು ಗಬಗಬನೆ ತಿನ್ನುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.

ಅವರಿವರ ಮನೆ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಆ ವಿಧವೆ ತಾಯಿಗೆ ತನ್ನ ಎರಡು ಮಕ್ಕಳ ಶಾಲಾ ಫಿ ಕಟ್ಟಲು ಒದ್ದಾಡುತ್ತಿದ್ದಳು. ಹರಿದ ಅಂಗಿಗೆ ಪಿನ್ನು ಹಾಕಿಕೊಂಡು,ತೇಪೆ ಹಾಕಿದ ಲಂಗವನ್ನು ಧರಿಸಿದ ಮಕ್ಕಳ ಮುಖದಲ್ಲಿ ನೋವು ನಿರಾಶೆ ಮಡುಗಟ್ಟಿತ್ತು.

ಉಪ್ಪು ಸಂಸ್ಕರಣೆ ಮಾಡುತ್ತಿರುವ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆ ಕೆಲಸಗಾರರಲ್ಲಿ ಶೂ ಗಳನ್ನು ಕೊಳ್ಳುವ ಆರ್ಥಿಕ ಅನುಕೂಲವಿಲ್ಲದ ಕಾರಣ ಯಾರೊಬ್ಬರೂ ಕಾಲಿಗೆ ಬೂಟು ಧರಿಸಿರಲಿಲ್ಲ…. ಈ ಕೆಲಸಗಾರರು ಮರಣ ಹೊಂದಿದ ನಂತರ ಇವರ ದೇಹದ ಎಲ್ಲಾ ಭಾಗವೂ ಸುಟ್ಟರೂ ಕೂಡ ಇವರ ಕಾಲುಗಳು ಸುಡುವುದಿಲ್ಲವಂತೆ. ಇದಕ್ಕೆ ಕಾರಣ ಇವರ ಕಾಲಿನಲ್ಲಿ ಅತಿಹೆಚ್ಚಿನ ಪ್ರಮಾಣದ ಸೋಡಿಯಂ ಕ್ಲೋರೈಡ್ ಇರುವುದು ಎಂಬುದನ್ನು ಎಲ್ಲೋ ಓದಿದಾಗ ಮನಸ್ಸು ವಿಲವಿಲ ಒದ್ದಾಡಿತ್ತು.

ತನ್ನ ಪ್ರತಿಭಾವಂತ ಮಗನಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗದ ತಂದೆ ಆತನನ್ನು ತನ್ನೊಂದಿಗೆ ಗಾರೆ ಕೆಲಸಕ್ಕೆ ಕರೆದೊಯ್ಯುತ್ತಿದ್ದನು.
ಬೇರೆಯವರ ಮನೆ ಕಟ್ಟುತ್ತಿದ್ದ ಆತನ ತಲೆಯ ಮೇಲೆ ಸ್ವಂತಕ್ಕೊಂದು ಸೂರು ಇರಲಿಲ್ಲ. ಮುಳಿ ಹುಲ್ಲಿನ ಮೇಲೆ ಸಿಮೆಂಟಿನ ಶೀಟ್ ಹೊದಿಸಿದ್ದ ಪುಟ್ಟ ಗುಡಿಸಿಲಿನಲ್ಲಿ ಮಳೆ ಬಂದರೆ ಕಾಲು ಚಾಚಿ ಮಲಗಲು ಸಾಧ್ಯವಿಲ್ಲದೆ ಪರಿಸ್ಥಿತಿ.

ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಕಂಡು ಬರುವ ದೃಶ್ಯವಿದು. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಹಲವಾರು ಕೋಟಿ ಜನರಿಗೆ ಒಳ್ಳೆಯ ಆಹಾರ,ಬಟ್ಟೆ,ವಸತಿ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ನೀಡಲು ಆಯಾ ಸರಕಾರಗಳು ಅಹರ್ನಿಶಿ ಪ್ರಯತ್ನ ನಡೆಸುತ್ತಿದ್ದು ಈ ಬಡತನ ನಿರ್ಮೂಲನೆಗಾಗಿಯೇ ಜಾಗತಿಕ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 17 ನೇ ದಿನಾಂಕವನ್ನು ‘ಅಂತರಾಷ್ಟ್ರೀಯ ಬಡತನ ನಿರ್ಮೂಲನ ದಿನ’ವಾಗಿ ಆಚರಿಸಲಾಗುತ್ತಿದೆ.

ಬಡತನಕ್ಕೆ ಕಾರಣವಾಗುವ ಮೂಲ ಅಂಶಗಳು….. ಅತಿಯಾದ ಜನಸಂಖ್ಯೆ, ಮೂಲಭೂತ ಸೌಲಭ್ಯಗಳ ಕೊರತೆ, ಶೈಕ್ಷಣಿಕ ಹಿನ್ನಡೆ ಮತ್ತು ಆರೋಗ್ಯದ ಸಮಸ್ಯೆಗಳು, ಸುರಕ್ಷಿತವಲ್ಲದ ಜೀವನ ಶೈಲಿ, ಬೇಜವಾಬ್ದಾರಿಯ ಬದುಕು ಹೀಗೆ ಹತ್ತು ಹಲವು ಕಾರಣಗಳು ಬಡತನ ಹೆಚ್ಚಾಗಲು ಕಾರಣವಾಗಿದೆ.

ಜಗತ್ತಿನ ಯಾವೊಂದು ಜೀವಿಯೂ ಬಡತನದ ಕಾರಣಕ್ಕಾಗಿ ಹಸಿವಿನಿಂದ ಬಳಲಬಾರದು. ಗಂಡಾಗಲಿ ಹೆಣ್ಣಾಗಲಿ ಜಗತ್ತಿನ ಯಾವ ವ್ಯಕ್ತಿಯೂ ಅತೀವ ಬಡತನದಿಂದ ಒದ್ದಾಡಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ನೋವು ನಿರಾಸೆ ಅಪಮಾನ ಮತ್ತು ನಿರಾಕರಣೆಯಲ್ಲಿ ಬೇಯುವ ವ್ಯಕ್ತಿ ಸಾಮಾಜಿಕವಾಗಿ ತಾನು ಕಳೆದುಕೊಂಡ ಘನತೆಯನ್ನು ಪಡೆಯಲು ಅನೈತಿಕ ಕಾರ್ಯಗಳಿಗೆ ಕೈ ಹಾಕುತ್ತಾನೆ. ದುಷ್ಕೃತ್ಯಗಳಿಗೆ ತನ್ನನ್ನು ತಾನು ಈಡು ಮಾಡುತ್ತಾನೆ. ಸಾಮಾಜಿಕ ಅಸಮಾನತೆಯು ಸಾಮಾಜಿಕ ಮೌಲ್ಯಗಳ ಪತನಕ್ಕೆ ಕಾರಣವಾಗುತ್ತದೆ.
ಬಡವರು ಮತ್ತಷ್ಟು ಬಡವರಾಗಿ ಸಿರಿವಂತರು ಮತ್ತಷ್ಟು ಸಿರಿವಂತರಾಗುವ ವ್ಯವಸ್ಥೆಯು ದಮನಿತರ ಆಕ್ರೋಶವನ್ನು ಹೆಚ್ಚಿಸಿ ಕಳ್ಳತನ,ಕೊಲೆ,ಸುಲಿಗೆ, ದರೋಡೆಗಳಂತಹ ದುಷ್ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂಬ ಹಿನ್ನೆಲೆಯಲ್ಲಿ ಬಡತನದ ಮೂಲೋಚ್ಛಾಟನೆ ಮಾಡುವುದು ಅತ್ಯಂತ ಅವಶ್ಯಕವಾದ ಕಾರ್ಯವಾಗಿದೆ.

1987ರಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಸ್ಮರಣಾರ್ಥ ಟ್ರೊಕರೆಡೊ ಪ್ಲಾಜಾದ ಬಳಿ ಸೇರಿ ವಿಶ್ವದಾದ್ಯಂತ ಬಡತನ, ಹಸಿವು, ಹಿಂಸೆ ಮತ್ತು ಭಯದ ಬಲಿಪಶುಗಳಾದ ಜೀವಿಗಳ ಸ್ಮರಣಾರ್ಥ ಕಲ್ಲೊಂದನ್ನು ಇಂಟರ್ನ್ಯಾಷನಲ್ ಮೂವ್ಮೆಂಟ್ ಫಾರ್ ಎ ಟಿ ಡಿ ಯ ಸಂಸ್ಥಾಪಕರಾದ ಜೋಸೆಫ್ ಪ್ರೆಸೆನ್ಸ್ನ್ಕಿ ಅವರ ನಾಯಕತ್ವದಲ್ಲಿ ಸ್ಥಾಪಿಸಿ ಅದನ್ನು ಮಾನವೀಯತೆಯ ಕಲ್ಲು ಎಂದು ಕರೆದರು.
ಮುಂದೆ ಜೋಸೆಫ್ ಅವರ ಮರಣ ನಂತರ 1996ರಲ್ಲಿ ಅಕ್ಟೋಬರ್ 17ರ ದಿನವನ್ನು ವಿಶ್ವ ಬಡತನ ನಿರ್ಮೂಲನ ದಿನವೆಂದು ಘೋಷಿಸಲಾಯಿತು.

ಇಲ್ಲಿಯವರೆಗೆ ಬೆಲ್ಜಿಯಂ, ಬುರ್ಕಿನಾ ಫಾಸೋ, ಕೆನಡಾ, ಜರ್ಮನಿ, ಫಿಲಿಫೈನ್ಸ್, ಪೋರ್ಚುಗಲ್ ರಿಯೂನಿಯನ್ ಐಲ್ಯಾಂಡ್, ಸ್ವಿಜರ್ಲ್ಯಾಂಡ್, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕ ಮುಂತಾದ ದೇಶಗಳಲ್ಲಿ ಸುಮಾರು 53 ಸ್ಮರಣಾರ್ಥ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ನ್ಯೂಯಾರ್ಕನ ವಿಶ್ವ ಸಂಸ್ಥೆಯ ಪ್ರಧಾನ ಕಛೇರಿ ಮತ್ತು ಸ್ಟ್ರಾಸ್ ಬರ್ಗ್ ನಲ್ಲಿರುವ ಕೌನ್ಸಿಲ್ ಆಫ್ ಯುರೋಪ್ನಲ್ಲಿ ಕೂಡ ಈ ಪ್ರತಿಕೃತಿಗಳನ್ನು ನೋಡಬಹುದು.

ಅಂತರಾಷ್ಟ್ರೀಯ ಬಡತನ ನಿರ್ಮೂಲನ ದಿನದ ಅಂಗವಾಗಿ ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಜನರಿಗೆ ಸಾಮೂಹಿಕವಾಗಿ ಬಡತನದಿಂದ ಮೇಲೆತ್ತುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ.ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕುರಿತು ಕಾಳಜಿಪೂರ್ವಕವಾಗಿ ಕಾರ್ಯನಿರ್ವಹಿಸಲಾಗುತ್ತದೆ. ಅವರಿಗೆ ಉದ್ಯೋಗ ಸಂಬಂಧಿ ತರಬೇತಿಗಳನ್ನು ನೀಡುವ, ವಿವಿಧ ಯೋಜನೆಗಳ ಮೂಲಕ, ಪ್ರೋತ್ಸಾಹ ಧನವನ್ನು ನೀಡಿ ಅಭಿವೃದ್ಧಿ ಹೊಂದಲು, ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಲು ಉಚಿತ ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಿದ್ದಾರೆ.

ನಮ್ಮ ಭಾರತ ದೇಶದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಬಡತನದ ರೇಖೆಗಿಂತ ಕಡಿಮೆ ಇರುವ ಜನರಿಗೆ ದೊರಕಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುತ್ತಿದ್ದು ಮಕ್ಕಳ ದೈಹಿಕ ಆರೋಗ್ಯವನ್ನು ಕಾಯುವ ನಿಟ್ಟಿನಲ್ಲಿ ಹಾಲು ಮತ್ತು ಮೊಟ್ಟೆಗಳನ್ನು ಕೂಡ ನೀಡಲಾಗುತ್ತಿದೆ. ಹುಟ್ಟುವ ಮಕ್ಕಳು ಆರೋಗ್ಯ ಸಂಬಂಧಿ ತೊಂದರೆಗಳಿಂದ ಬಳಲಬಾರದು ಎಂಬ ಕಾರಣಕ್ಕಾಗಿ ಗರ್ಭಿಣಿಯರಿಗೆ ಆರೋಗ್ಯ ಇಲಾಖೆಯ ಸತತ ಮಾರ್ಗದರ್ಶನದ ಜೊತೆ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಸಮತೋಲಿತ ಆಹಾರವನ್ನು ತಯಾರಿಸಿ ಪ್ರತಿದಿನ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ.

ಇದರ ಜೊತೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಹೆಲ್ತ್ ಕ್ಯಾಂಪ್‌ಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ,ಆರೋಗ್ಯದ ಮತ್ತು ಆಹಾರ ಸೇವನೆಯ ಕುರಿತು ಕಾಳಜಿಯನ್ನು ಮೂಡಿಸಲಾಗುತ್ತದೆ.
ಹಿಂದುಳಿದ ಜನಾಂಗದ ಅಲ್ಪಸಂಖ್ಯಾತರ ಮತ್ತು ಅವಕಾಶ ವಂಚಿತರ ಮಕ್ಕಳಿಗೆ ವಸತಿ ಮತ್ತು ಊಟದ ಸೌಲಭ್ಯಗಳನ್ನು ನೀಡಿ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ.

ವಿಶ್ವದ ಜನಸಂಖ್ಯೆಯನ್ನು ಆಧರಿಸಿ ನೋಡಿದಾಗ ಬಡತನ ನಿರ್ಮೂಲನೆಗಾಗಿ ವಿಶ್ವಸಂಸ್ಥೆಯ ಸಹಯೋಗದಲ್ಲಿ ಆಯಾ ದೇಶಗಳ ಸರ್ಕಾರಗಳು ಮಾಡುತ್ತಿರುವ ಸುಧಾರಣಾ ಕಾರ್ಯವು ಇನ್ನೂ ಕೆಲವೇ ವರ್ಷಗಳಲ್ಲಿ ಫಲಪ್ರದವಾಗಿ ವಿಶ್ವದೆಲ್ಲೆಡೆ ಬಡತನ ನಿರ್ಮೂಲವಾಗಲಿ. ಸರ್ವರಿಗೂ ಸಮ ಬಾಳು ದೊರೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";