ಹಾಸನ : ಹಾಸನದ ಮಾಣಿಕ್ಯ ಪ್ರಕಾಶನವು ಕಳೆದ ಒಂಭತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ವಿವಿದ ಪ್ರಕಾರಗಳ ಕೃತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೪ ರ ದತ್ತಿ ಪ್ರಶಸ್ತಿಗೆ ೨೦೨೩ ರಲ್ಲಿ ಮೊದಲ ಮುದ್ರಣವಾದ ಸ್ವತಂತ್ರ ರಚನೆಯ ನಾಟಕ, ಕಾದಂಬರಿ, ಗಜಲ್ ಹಾಗೂ ಚುಟುಕು ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಲೇಖಕರು ನಿರೀಕ್ಷೆಗೂ ಮೀರಿ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಅವುಗಳಲ್ಲಿ ಸಾಹಿತಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ಡಾ. ಹಸೀನಾ ಎಚ್.ಕೆ, ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್, ವಾಸು ಸಮುದ್ರವಳ್ಳಿ, ಲತಾಮಣಿ ಎಂ.ಕೆ. ತುರುವೇಕೆರೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು..
ನಾಟಕ ವಿಭಾಗದ “ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ” ಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸಾವಿತ್ರಿ ಮನೋಹರ್ ಅವರ “ನಮ್ಮ ಸಂಸಾರ ಆನ್ ಲೈನ್ ಅವಾಂತರ” ಕೃತಿ ಆಯ್ಕೆಯಾಗಿದ್ದು ಪ್ರಶಸ್ತಿ ಜೊತೆಗೆ ೨೫೦೦ ನಗದು ಪುರಸ್ಕಾರ ಹೊಂದಿದೆ.
ಕಾದಂಬರಿ ವಿಭಾಗದ ತುಮಕೂರಿನ ಮೋಹನ್ ಎಂ. ಕೆ. ತುರುವೇಕೆರೆ ಪ್ರಾಯೋಜಕತ್ವದ “ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ – ಕಾದಂಬರಿ ಮಾಣಿಕ್ಯ ಪ್ರಶಸ್ತಿ” ಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವೀಣಾ ರಾವ್ ಅವರ “ಮಧುರ ಮುರುಳಿ” ಕೃತಿ ಆಯ್ಕೆಯಾಗಿದ್ದು ಪ್ರಶಸ್ತಿ ಜೊತೆಗೆ ೨೫೦೦ ನಗದು ಪುರಸ್ಕಾರ ಹೊಂದಿದೆ.
ಗಜಲ್ ವಿಭಾಗದ ಶಿವಮೊಗ್ಗದ ಪಾರಂಪರಿಕ ವೈದ್ಯರಾದ ಸೈಯದ್ ಮುಹುಬುಲ್ಲಾ ಖಾದ್ರಿ ಪ್ರಾಯೋಜಕತ್ವದ “ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ – ಗಜಲ್ ಮಾಣಿಕ್ಯ ಪ್ರಶಸ್ತಿ” ಗೆ ಬೆಳಗಾವಿ ಜಿಲ್ಲೆಯ ಈಶ್ವರ ಮಮದಾಪೂರ ಅವರ “ಕಣ್ಣೊಳಗಿನ ಕಣ್ಣು” ಕೃತಿ ಆಯ್ಕೆಯಾಗಿದ್ದು ಪ್ರಶಸ್ತಿ ಜೊತೆಗೆ ೨೫೦೦ ನಗದು ಪುರಸ್ಕಾರ ಹೊಂದಿದೆ.
ಚುಟುಕು ಸಾಹಿತ್ಯ ವಿಭಾಗದ ರಾಯಚೂರಿನ ರೇಷ್ಮಾ ಕಂದಕೂರು ಪ್ರಾಯೋಜಕತ್ವದ “ಕೆ. ವೈ. ಕಂದಕೂರ ದತ್ತಿ – ಚುಟುಕು ಮಾಣಿಕ್ಯ ಪ್ರಶಸ್ತಿ” ಗೆ ಬಾಗಲಕೋಟ ಜಿಲ್ಲೆಯ ಮುರ್ತುಜಾಬೇಗಂ ಕೊಡಗಲಿಯವರ “ಗಿಲಿಗಿಂಚಿ” ಕೃತಿ ಆಯ್ಕೆಯಾಗಿದ್ದು ಪ್ರಶಸ್ತಿ ಜೊತೆಗೆ ೨೫೦೦ ನಗದು ಪುರಸ್ಕಾರ ಹೊಂದಿದೆ.
ಪ್ರಶಸ್ತಿ ಪುರಸ್ಕೃತರಿಗೆ ೨೦೨೪ ಸೆಪ್ಟಂಬರ್ ೨೮ ಶನಿವಾರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಎಂಟನೇ ಕವಿ-ಕಾವ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.