ಬಳ್ಳಾರಿ,ಡಿ.20
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ಹಾಗೂ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ನಡೆದ ಈ ವರ್ಷದ ನಾಲ್ಕುರಾಷ್ಟ್ರೀಯ ಲೋಕ್-ಅದಾಲತ್‌ಗಳು ಯಶಸ್ವಿಯಾಗಿ ನಡೆದಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ರಾಜೇಶ್.ಎನ್ ಹೊಸಮನೆ ಅವರು ತಿಳಿಸಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರ, ವಕೀಲರ, ಕಕ್ಷಿಗಾರರ, ಸಾರ್ವಜನಿಕರ ಮತ್ತು ಸರ್ಕಾರಿ ಅಧಿಕಾರಿಗಳ ಸಹಯೋಗದಲ್ಲಿ ಈ ವರ್ಷದ ಲೋಕ್-ಅದಾಲತ್‌ಗಳು ಯಶಸ್ವಿಯಾಗಿ ನಡೆದಿವೆ.
ಲೋಕ್-ಅದಾಲತ್‌ನಲ್ಲಿ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ದಾವೆಗಳು, ಚೆಕ್ ಪ್ರಕರಣಗಳು, ಹಣ ವಸೂಲಾತಿ ದಾವೆಗಳು, ಪಾಲು ವಿಭಾಗ ದಾವೆಗಳು, ವೈವಾಹಿಕ ಅಥವಾ ಕೌಟುಂಬಿಕ ಪ್ರಕರಣಗಳು, ಮೋಟಾರ್ ವಾಹನ ಪ್ರಕರಣಗಳು, ಸಿವಿಲ್ ಪ್ರಕರಣಗಳು ಹಾಗೂ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ರಾಜಿ ಸಂಧಾನದ ಮೂಲಕ ತೀರ್ಮಾನಿಸಲಾಗಿದೆ.
ಇದರಿಂದ ಕಕ್ಷಿಗಾರರಲ್ಲಿ ಪರಸ್ಪರ ಬಾಂಧವ್ಯ ಮುಂದುವರೆದು, ಹಣ ಮತ್ತು ಸಮಯ ಉಳಿತಾಯವಾಗುತ್ತವೆ ಹಾಗೂ ಸಮಾಜದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಸಾಮರಸ್ಯ ಜೀವನ ಹಾಗೂ ಸಹಬಾಳ್ವೆ ನಡೆಸಲು ಸಹಾಯವಾಗುತ್ತದೆ.
*ನಾಲ್ಕು ರಾಷ್ಟ್ರೀಯ ಲೋಕ್-ಅದಾಲತ್‌ನ ಸಂಕ್ಷಿಪ್ತ ವರದಿ:*
2024 ನೇ ಸಾಲಿನ ಮಾ.16 ರಂದು ನಡೆದ ಮೊದಲನೇ ಲೋಕ್-ಅದಾಲತ್‌ನಲ್ಲಿ 8,879 ಬಾಕಿ ಪ್ರಕರಣಗಳು ಮತ್ತು 71,032 ವಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡಿದ್ದು, ಒಟ್ಟಾರೆಯಾಗಿ 67,51,55,446 ರೂ.ಗಳು ಪರಿಹಾರ ರೂಪದಲ್ಲಿ ವಸೂಲಿಯಾಗಿದೆ.
ಜು.13 ರಂದು ನಡೆದ ಎರಡನೇ ಲೋಕ್-ಅದಾಲತ್‌ನಲ್ಲಿ 11,902 ಬಾಕಿ ಪ್ರಕರಣಗಳು ಹಾಗೂ 1,13,540 ವಾಜ್ಯಪೂರ್ವ ಪ್ರಕರಣಗಳು ರಾಜಿ ಮುಖಾಂತರ ಮುಕ್ತಾಯಗೊಂಡಿದ್ದು, ಅವುಗಳಿಂದ ರೂ.74,00,64,519 ಪರಿಹಾರ ಮೊತ್ತ ವಸೂಲಿಯಾಗಿದೆ.
ಸೆ.14 ರಂದು ನಡೆದ ಮೂರನೇ ಲೋಕ್-ಅದಾಲತ್‌ನಲ್ಲಿ 9,058 ಬಾಕಿ ಪ್ರಕರಣಗಳು ಹಾಗೂ 24,01,84 ವಾಜ್ಯಪೂರ್ವ ಪ್ರಕರಣಗಳು ರಾಜಿ ಮುಖಾಂತರ ಮುಕ್ತಾಯಗೊಂಡಿದ್ದು, ಅವುಗಳಿಂದ ರೂ. 173,81,09,382 ಪರಿಹಾರದ ಮೊತ್ತ ವಸೂಲಿಯಾಗಿದೆ.
ಡಿ.14 ರಂದು ನಡೆದ ನಾಲ್ಕನೇ ಲೋಕ್-ಅದಾಲತ್‌ನಲ್ಲಿ 11,120 ಬಾಕಿ ಪ್ರಕರಣಗಳು ಹಾಗೂ 3,88,993 ವಾಜ್ಯಪೂರ್ವ ಪ್ರಕರಣಗಳು ರಾಜಿ ಮುಖಾಂತರ ಮುಕ್ತಾಯಗೊಂಡಿದ್ದು, ಅವುಗಳಿಂದ ರೂ. 143,80,76,093 ಪರಿಹಾರದ ಮೊತ್ತ ವಸೂಲಿಯಾಗಿದೆ.
2025 ನೇ ವರ್ಷದ ಮೊದಲನೆ ಲೋಕ್-ಅದಾಲತ್ ಮಾರ್ಚ್ 08 ರಂದು ನಡೆಯಲಿದ್ದು, ಈಗಾಗಲೇ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ.
ಲೋಕ್-ಅದಾಲತ್ ಕುರಿತು ಸಾರ್ವಜನಿಕರು ಹೆಚ್ಚಿನ ಅರಿವು ಹೊಂದಿ, ತಮ್ಮ ವ್ಯಾಜ್ಯಗಳಿದ್ದಲ್ಲಿ ಸಕಾಲದಲ್ಲಿ ಬಗೆಹರಿಸಿಕೊಳ್ಳಲು ರಾಷ್ಟ್ರೀಯ ಲೋಕ್-ಅದಾಲತ್ ಸಹಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ರಾಜೇಶ್.ಎನ್ ಹೊಸಮನೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———–