ಬಳ್ಳಾರಿ,ಜ.02
ಪ್ರಸ್ತಕ ಸಾಲಿನ ಹಿಂಗಾರು ಹಂಗಾಮಿನಲ್ಲಿ ಖಾಸಗಿ ನಿವಾಸಿಗಳು ರೈತರಿಂದ ಬೆಳೆದ ಬೆಳೆಗಳ ಬಗ್ಗೆ ನಿಖರ ಮಾಹಿತಿಯನ್ನು ಮೊಬೈಲ್ ಆಪ್‌ನಿಂದ ದಾಖಲಿಸಲು ಆಪ್ ಬಿಡುಗಡೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
ಈಗಾಗಲೇ ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಜ.01 ರಿಂದ ಚಾಲನೆಯಾಗಿದೆ. ಖಾಸಗಿ ನಿವಾಸಿಗಳು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ ಬೆಳೆ ಸಮೀಕ್ಷೆ ಹಿಂಗಾರು ಹಂಗಾಮಿನ (PR App Crop Survey Rabi 2024-25) ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯ, ಬೆಳೆ ಕಟಾವು ಪ್ರಯೋಗ, ಪ್ರಕೃತಿ ವಿಕೋಪ ಸಂದರ್ಭ, ಬೆಳೆಹಾನಿ ವರದಿ ಸಿದ್ಧಪಡಿಸಲು, ಬೆಳೆ ವಿಮಾಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟಿçÃಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿ ಉಪಯೋಗಿಸಲಾಗುತ್ತದೆ.
ಜಿಲ್ಲೆಯಲ್ಲಿ 2,42,520 ಬೆಳೆ ತಾಕುಗಳಿದ್ದು, ಮೊಬೈಲ್ ಆಪ್ ನಲ್ಲಿ ಜಿಯೋ ರೆಫೆರೆನ್ಸ್ಡ್ ಅಂಡ್ ಡಿಜಿಟೈಜ್‌ಡ್ ಬೆಳೆ ಗ್ರಾಮ ನಕಾಶೆ ಅಳವಡಿಸಲಾಗಿರುವುದರಿಂದ ಆಯಾ ತಾಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ಎಲ್ಲಾ ಬೆಳೆಗಳ ವಿವರಗಳನ್ನು ಕಡ್ಡಾಯವಾಗಿ ದಾಖಲು ಮಾಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.