ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 26 ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ರಾಜ್ಯದ ಜಿಲ್ಲೆ, ತಾಲ್ಲೂಕುಗಳಲ್ಲಿ ಇರುವ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕಲಾವೈವಿಧ್ಯತೆಗಳನ್ನು ಒಳಗೊಂಡ ಸೃಜನಶೀಲತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇಶ/ವಿದೇಶಿ ಪ್ರವಾಸಿಗರಿಗೆ ನೀಡಲು ಅಂದರೆ ‘ಒಂದು ರಾಜ್ಯ-ಹಲವು ವಿಸ್ಮಯಗಳು’ ಎಂಬುದನ್ನು ಪರಿಚಯಿಸುವುದರ ಮೂಲಕ ನಾಡಿನ ಭವ್ಯ-ಸಂಸ್ಕೃತಿ ಹಾಗೂ ವೈವಿಧ್ಯತೆಗಳ ವಿಭಿನ್ನ ಕಲೆ-ವಾಸ್ತು ಶಿಲ್ಪ ಹಾಗೂ ನಾಡಿನ ಸಮಗ್ರತೆಯ ಬಗ್ಗೆ ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ನಾಡಿಗೆ ಸೆಳೆಯಲು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವ ಇರುವ ಪ್ರವಾಸಿ ಮಾರ್ಗದರ್ಶಿಗಳನ್ನು ಆಯ್ಕೆ ಮಾಡಲಾಗುವುದು.
ರಾಜ್ಯ ಪ್ರವಾಸಿ ಮಾರ್ಗದರ್ಶಿಗಾಗಿ ಪದವಿ ಪಡೆದಿರಬೇಕು ಹಾಗೂ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಾಗಿ ದ್ವಿತೀಯ ಪಿಯುಸಿ ಅಥವಾ ಅದರ ಸಮಾನವಾದ ಪರೀಕ್ಷೆಯನ್ನು ರಾಜ್ಯದಿಂದ ಗುರುತಿಸಲ್ಪಟ್ಟಿರುವ ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಪಡೆದಿರಬೇಕು. ವಯೋಮಿತಿ ಸಾಮಾನ್ಯ ವರ್ಗದವರು 21 ರಿಂದ 45 ವರ್ಷದೊಳಗಿರಬೇಕು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವಿಧವೆ ಇವರು 48 ವರ್ಷದೊಳಗಿರಬೇಕು. ಪ್ರವಾಸೋದ್ಯಮ ಇಲಾಖೆ/ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ/ ಅರಣ್ಯ ವಸತಿ ಮತ್ತು ವಿಹಾರಧಾಮಗಳಲ್ಲಿ ನಿವೃತ್ತಿ ಹೊಂದಿರುವ ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ನೌಕರರು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪ್ರವಾಸಿ ಮಾರ್ಗದರ್ಶಿಯಾಗಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರುವ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಇಲಾಖೆ ಅಥವಾ ಏಜೆನ್ಸಿಯಿಂದ ನೀಡಲಾದ ಮಾನ್ಯವಾದ ಪರವಾನಗಿಯನ್ನು ಹೊಂದಿರುವ ವ್ಯಕ್ತಿಗಳು ಸಹ ಅರ್ಜಿ ಸಲ್ಲಿಸಬಹುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ವಿದ್ಯಾವಂತ ಅರ್ಹ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ನಂ.09, ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 562110. ಈ ಕಛೇರಿಗೆ ಅಭ್ಯರ್ಥಿಗಳು ಕಛೇರಿ ವೇಳೆಯಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಸ್ವಯಂ ದೃಢೀಕರಿಸಿ ದ್ವಿಪ್ರತಿಯಲ್ಲಿ ಜುಲೈ 26 ರ ಸಂಜೆ 05:00 ಗಂಟೆಯೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃಧಿ ಸಮಿತಿಯ ಅಧ್ಯಕ್ಷರಾದ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.