ಕೊಪ್ಪಳ ಮಾರ್ಚ್ 12 : ಜಿಲ್ಲೆಯ ಕುಕನೂರ ತಾಲ್ಲೂಕಿನ ಮಂಗಳೂರಿನ ಶ್ರೀ ಮಂಗಳೇಶ್ವರ ಜಾತ್ರಾ ಪ್ರಯುಕ್ತ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆಯಿಂದ ಯೋಜನೆಗಳು ಮತ್ತು ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಶ್ರೀ ಮಂಗಳೇಶ್ವರ ಜಾತ್ರಾ ಪ್ರಯುಕ್ತ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಸ್ತು ಪ್ರದರ್ಶನವನ್ನು ಜಾತ್ರೆ, ಸಂತೆಗಳಲ್ಲಿ ಏರ್ಪಡಿಸುವಂತೆ ನಿರ್ದೇಶನವಿರುವುದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಸಾರ್ವಜನಿಕರು ಇಲಾಖೆಯಲ್ಲಿ ಲಭ್ಯವಿರುವ ಜನನಿ ಸುರಕ್ಷಾ ಯೋಜನೆ, ಜನನಿ-ಶಿಶು ಸುರಕ್ಷಾ ಯೋಜನೆ, ಡಾ. ಪುನಿತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆ, ತಾಯಿ-ಮಕ್ಕಳ ಆರೋಗ್ಯ ಸುರಕ್ಷಿತ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆಗಳಾದ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳು, ಜೀವನ ಶೈಲಿಯಿಂದ ಬರುವ ರೋಗಗಳಾದ ಅಧಿಕ ರಕ್ತದೋತ್ತಡ(ಬಿ.ಪಿ), ಮಧುಮೇಹ, ಕ್ಯಾನ್ಸರ್, ಬೇಡವಾದ ಬೊಜ್ಜು, ಹೃದಯ ಖಾಯಿಲೆ ಹಾಗೂ ಪಾರ್ಶ್ವವಾಯು, ಮಾನಸಿಕ ಆರೋಗ್ಯ ಖಾಯಿಲೆ ಚಿಕಿತ್ಸೆ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ, ಸೋಂಕಿತ ಸೊಳ್ಳೆಗಳಿಂದ ಹರಡುವ ಡೆಂಗ್ಯೂ-ಚಿಕನ್‌ಗುನ್ಯಾ, ಮಲೇರಿಯಾ, ಮೆದುಳು ಜ್ವರ ನಿಯಂತ್ರಣ, ಬೇಸಿಗೆ ಸಮಯದಲ್ಲಿ ಸಾರ್ವಜನಿಕರು ಆರೋಗ್ಯ ರಕ್ಷಣೆಗಾಗಿ ಅನುಸರಿಸುವ ಮುಂಜಾಗೃತ ಕ್ರಮಗಳು ಮತ್ತು ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಜಾತ್ರೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಈ ವಸ್ತು ಪ್ರದರ್ಶನ ಏರ್ಪಡಿಸಿ, ಅರಿವು ಮೂಡಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಭಿತ್ತಿಪತ್ರ ಬಿಡುಗಡೆ: ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಕ್ರಪ್ಪ ಚಿನ್ನೂರ್ ಅವರು ಭಿತ್ತಪತ್ರ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿಗ ಡಾ. ಸಿ.ಎಂ ಹಿರೇಮಠ, ಗ್ರಾಮದ ಮುಖಂಡರಾದ ರವೀಂದ್ರ ತೋಟದ್, ಶರಣಪ್ಪ ಎಮ್ಮಿ, ನಿಂಗನಗೌಡ ಮಾಲಿಪಾಟೀಲ್, ನೀಲನಗೌಡ ಪೊಲೀಸ್ ಪಾಟೀಲ್, ಲಚ್ಚಪ್ಪ ದೇಸಾಯಿ, ಚನ್ನಪ್ಪಗೌಡ ಪೊಲೀಸ್ ಪಾಟೀಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.