Ad image

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

Vijayanagara Vani
ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ
ಕೊಪ್ಪಳ ಆಗಸ್ಟ್ 05: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ ಕಾನೂನುಗಳ ಕುರಿತು ಸೋಮವಾರದಂದು ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇಂದರಗಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ “ಕಾಯಂ ಜನತಾ ನ್ಯಾಯಾಲಯ ಕಾರ್ಯವಿಧಾನ ಪರಿಚಯ, ನಾಲ್ಸಾ ಜಾಗೃತಿ ಯೋಜನೆ-2025 ಹಾಗೂ ಮಕ್ಕಳ ಹಕ್ಕುಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆ ಪೋಕ್ಸೋ ಕಾಯ್ದೆ”ಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ್ ಅವರು ಗಿಡಕ್ಕೆ ನೀರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ಅದರ ಅಡಿಯಲ್ಲಿ ಇರುವ ಶಿಕ್ಷೆಗಳ ಕುರಿತು ಮತ್ತು ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳು, ಕಾನೂನಿನ ಸೂಕ್ಷ್ಮತೆಗಳು ಮತ್ತು ಮಕ್ಕಳ ಬೆಳವಣಿಗೆಗಳ ಸೂಕ್ಷ್ಮತೆಗಳ ಕುರಿತು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತ ಸ್ವಾಮಿ ಪೂಜಾರ ಅವರು, ಮಕ್ಕಳ ಹಕ್ಕುಗಳಾದ ಬದುಕುವ ರಕ್ಷಣೆಯ ವಿಕಾಸ ಹೊಂದುವ ಮತ್ತು ಭಾಗವಹಿಸುವ ಹಕ್ಕುಗಳ ಕುರಿತು ಮಾಹಿತಿಯನ್ನು ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದದ ಶಿವಲೀಲಾ ವನ್ನೂರು ಅವರು, ಪೋಕ್ಸೋ ಕಾಯ್ದೆ ಅಡಿಯಲ್ಲಿನ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀರಾಮಪ್ಪ ಅವರು, ಅಗ್ನಿ ಅವಘಡದ ಸಂದರ್ಭದಲ್ಲಿ ಯಾವ ರೀತಿ ಅಗ್ನಿಯನ್ನು ನಂದಿಸುವುದು ಎಂಬುದರ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವರದವ್ವ ನಿಂಗಪ್ಪ ಎಮ್ಮಿ, ಉಪಾಧ್ಯಕ್ಷರಾದ ಅಮರೇಶ್, ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಬಸವರಾಜ್ ಹಿರೇಗೌಡ್ರು, ಮುನಿರಾಬಾದ್ ಪೊಲೀಸ್ ಠಾಣೆಯ ಅಮರೇಶ, ಅಂಗನವಾಡಿ ಮೇಲ್ವಿಚಾರಕಿ ಉಷಾ ಸಿಂಗ್ ಸೇರಿದಂತೆ ಇಂದ್ರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಗ್ರಾಮದ ಗುರುಹಿರಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ್ ಎಸ್.ಎಚ್ ಅವರು ನೆರವೇರಿಸಿದರು. ಮಕ್ಕಳ ರಕ್ಷಣಾ ಘಟಕದ ಪ್ರತಿಭಾ ಕಾಶಿಮಠ ಅವರು ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಸಹಾಯವಾಣಿಯ ಶರಣಪ್ಪ ಸಿಂಗನಾಳ್ ಅವರು ಕೊನೆಯಲ್ಲಿ ವಂದಿಸಿದರು.

Share This Article
error: Content is protected !!
";