ಬಳ್ಳಾರಿ,ಫೆ.07
ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದ ಸರ್ಕಾರಿ ಫ್ರೌಡ ಶಾಲೆ ಮತ್ತು ಕುರಿಗನೂರು ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ಮಕ್ಕಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಕ್ಕಳ ರಕ್ಷಣೆ ಮತ್ತು ಪೋಷಣೆ ನಮ್ಮೆಲರ ಹೊಣೆಯಾಗಿದ್ದು, ಮಕ್ಕಳನ್ನು ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ, ಲೈಂಗಿಕ ಕಿರುಕುಳದಿಂದ ಮತ್ತು ಇನ್ನಿತರೆ ಸಂಕಷ್ಟಕ್ಕೆ ಒಳಗಾದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂತಹ ಸಮಸ್ಯೆಗಳು ಕಂಡುಬAದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಗೆ ಕರೆ ಮಾಡಿ ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮಂಜುನಾಥ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಬಾಗವಹಿಸಿ, ಬಾಲ್ಯವಿವಾಹಕ್ಕೆ ಕಾರಣ, ದುಷ್ಪರಿಣಾಮ ಮತ್ತು ಕಾಯ್ದೆ-ಕಾನೂನು ಕುರಿತು ತಿಳಿಸಿದರು.
ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್ ಅವರು, ಪೋಕ್ಸೋ ಕಾಯ್ದೆ ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಜಿ.ಯಂಕಪ್ಪ ಅವರು ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ನೈರ್ಮಲ್ಯ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳ ಕುರಿತು ಮಕ್ಕಳ ರಕ್ಷಣಾಧಿಕಾರಿ (ಆಸಾಂಸ್ಥಿಕ ಸೇವೆ) ಚನ್ನಬಸಪ್ಪ ಪಾಟೀಲ್ ಅವರು ಮಾಹಿತಿ ವಿವರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನ್ ಎಸ್.ಕಾಳಪ್ಪ, ಶಾಲೆಯ ಮುಖ್ಯ ಗುರುಗಳಾದ ಭಾಗ್ಯಮ್ಮ, ಬಿ.ಆರ್.ಪಿ ಸದಾನಂದಚಾರ್ಯ, ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಹೇಶ್ ಕುಮಾರ್, ಹಿರಿಯ ಮೇಲ್ವಿಚಾರಕರಾದ ಹೇಮಾವತಿ, ವಸತಿ ನಿಲಯದ ಪ್ರಾಂಶುಪಾಲರಾದ ಕಾಸಿಂ ಸಾಹೇಬ್.ಪಿ ಹಾಗೂ ವಸತಿ ನಿಲಯದ ಭೋದಕ ಮತ್ತು ಭೋದಕತೇರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
———–