Ad image

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

Vijayanagara Vani
ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ, ಡಿ.17
“ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಕರ್ನಾಟಕಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಳಗಾವಿ ಸರ್ಕಿಟ್ ಹೌಸ್ ಹಾಗೂ ಪೀರನವಾಡಿ ಗಾಂಧಿ ಭವನದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
“ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗ ಗಂಗಾಧರ ದೇಶಪಾಂಡೆ ಹಾಗೂ ಜವಹಾರ್ ಲಾಲ್ ನೆಹರೂ ಅವರು ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ದೇಶಪಾಂಡೆ ಅವರು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸಲು ಆಹ್ವಾನ ನೀಡಿದರು.
ಆ ಅಧಿವೇಶನಕ್ಕೆ ಬಂದ ಬರುವ ಜನರಿಗೆ ಕುಡಿಯುವ ನೀರು ಕಲ್ಪಿಸಲು ಬಾವಿ ತೋಡಲಾಗಿತ್ತು. 100 ವರ್ಷಗಳ ನಂತರ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಂದು ಗಾಂಧಿ ಇಂದು ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ಅನೇಕ ಮಹಾನ್ ನಾಯಕರು ಆ ಸ್ಥಾನ ಅಲಂಕರಿಸಿದ್ದಾರೆ. ನಿಜಲಿಂಗಪ್ಪನವರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕೂಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಈ ಬಾರಿಯ ಅಧಿವೇಶನವನ್ನು ಗುಜರಾತಿನ ಸಬರಮತಿ ಆಶ್ರಮದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯಿತು. ನಂತರ ನಾನು ಎಐಸಿಸಿಗೆ ಬೆಳಗಾವಿಯಲ್ಲೇ ನಡೆಸುವ ಪ್ರಸ್ತಾವನೆ ಸಲ್ಲಿಸಿದೆ, ಅವರು ಒಪ್ಪಿದರು.
ʼಗಾಂಧಿ ಭಾರತʼ ಕಾರ್ಯಕ್ರಮದ ಭಾಗವಾಗಿ ಅ. 2 ರಂದು ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ಹೆಜ್ಜೆ ಹಾಕಿದೆವು. ನಂತರ ಪಕ್ಷದ ವತಿಯಿಂದ ಗಾಂಧಿ ವೃತ್ತದಿಂದ ಭಾರತ ಜೋಡೋ ಭವನದವರೆಗೂ ಹೆಜ್ಜೆ ಹಾಕಲಾಗಿತ್ತು. ಈಗ ಮುಂದುವರಿದ ಭಾಗವಾಗಿ ಡಿ. 26 ರಂದು ಬೆಳಗಾವಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಎಲ್ಲ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಆಗಮಿಸಲಿದ್ದಾರೆ. ಮರುದಿನ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಪಂಚಾಯ್ತಿ ಸದಸ್ಯರು, ಸಮಿತಿ ಹಾಗೂ ನಿಗಮಗಳ ಸದಸ್ಯರು, ನಾಮನಿರ್ದೇಶಿತರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ.
ಈ ಮಧ್ಯೆ ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದ ಶಾಸಕರು ಹಾಗೂ ಪರಿಷತ್ ನಾಯಕರಿಗೂ ಆಹ್ವಾನ ನೀಡಲಾಗುವುದು. ಸ್ಪೀಕರ್ ಹಾಗೂ ಸಭಾಪತಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ನಡೆಯಲಿರುವ ಜಾಗಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಇತರೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅವಕಾಶ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಇಂದಿರಾ ಗಾಂಧಿ ಅವರ ನುಡಿಮುತ್ತುಗಳ ಬಗ್ಗೆ ಸೋನಿಯಾ ಗಾಂಧಿ ಅವರು ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕವನ್ನು ನಾನು ಕನ್ನಡಕ್ಕೆ ಅನುವಾದ ಮಾಡಿಸಿದ್ದು, ಗಾಂಧಿ ಭಾರತ ಕಾರ್ಯಕ್ರಮದ ವೇಳೆ ಬಿಡುಗಡೆ ಮಾಡಲಾಗುವುದು.
ಬೆಳಗಾವಿ ವಲಯದ ಎಲ್ಲಾ ನಾಯಕರ ಜತೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಮಾಡಲಿದ್ದು, ಕಾರ್ಯಕ್ರಮದ ಪೂರ್ವಸಿದ್ಧತೆ ಬಗ್ಗೆ ಚರ್ಚೆ ಮಾಡಲಾಗುವುದು.”
*ಸಿದ್ದರಾಮಯ್ಯ ಅನ್ಯಾಯ ಮಾಡಿಲ್ಲ:*
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿಲ್ಲ ಎಂಬ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಕೇಳಿದಾಗ, “ಸಿದ್ದರಾಮಯ್ಯ ಅವರು ಅನ್ಯಾಯ ಮಾಡಿಲ್ಲ. ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ” ಎಂದು ತಿಳಿಸಿದರು.
ಮಾಣಿಪ್ಪಾಡಿ ಅವರ ಆರೋಪ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮುಂದೆ ಈ ವಿಚಾರವಾಗಿ ಚರ್ಚೆ ಮಾಡೋಣ” ಎಂದರು.
ಖರ್ಗೆ ಅವರು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂಬ ಮಾಣಿಪ್ಪಾಡಿ ಅವರ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ದಾಖಲೆ ಸಮೇತ ಸದನದಲ್ಲಿ ಚರ್ಚೆ ಮಾಡೋಣ” ಎಂದರು.
Share This Article
error: Content is protected !!
";