ಬಳ್ಳಾರಿಯಲ್ಲಿ ಅನೇಕ ಮಹಪುರುಷರು ಮತ್ತು ಸಿದ್ದಪುರಷರನ್ನ ಪಡೆದ ಜಿಲ್ಲೆ

Vijayanagara Vani
ಬಳ್ಳಾರಿಯಲ್ಲಿ  ಅನೇಕ ಮಹಪುರುಷರು ಮತ್ತು    ಸಿದ್ದಪುರಷರನ್ನ ಪಡೆದ  ಜಿಲ್ಲೆ

ಜನನ-ಬಾಲ್ಯ: ಬಳ್ಳಾರಿಜಿಲ್ಲೆಯ ಚಿಕ್ಕಗ್ರಾಮ ಹಂದ್ಯಾಳು. ಇಲ್ಲಿ ಕಂಬಾಳಿಮಠದ ಚೆನ್ನಬಸವಯ್ಯ ಮತ್ತು ನೀಲಮ್ಮ ಎಂಬ ಸಾತ್ವಿಕ ದಂಪತಿಗಳಿದ್ದರು. ಈ ದಂಪತಿಗೆ ಕ್ರಿ.ಶ.1810ನೆಯ ಪ್ರಮೋದೂತ ಸಂವತ್ಸರ ವೈಶಾಖ ಮಾಸದ ಶುಕ್ಲಪಕ್ಷ ದಿನದಂದು ಗಂಡು ಮಗುವೊಂದು ಜನಿಸಿತು. ತಂದೆ-ತಾಯಿಗಳು ಮಗುವಿನ ಲಾಲನೆ-ಪಾಲನೆಯಲ್ಲಿ ಸಂತೋಷಪಡುತ್ತಿದ್ದರು. ಚೆನ್ನಬಸವಯ್ಯನ ಗುರುಗಳು ತೆಕ್ಕಲಕೋಟೆಯ ಕಂಬಾಳಿಮಠದ ಶ್ರೀಗಳು. ಅವರು ಒಮ್ಮೆ ಚೆನ್ನಬಸವಯ್ಯನ ಮನೆಗೆ ಬಂದಾಗ ‘ಈತ ಸಾಮಾನ್ಯ ವ್ಯಕ್ತಿಯಲ್ಲ; ಜಗತ್ತಿನ ಜನರ ಜಡತ್ವವನ್ನು ನೀಗಿಸಲು ಬಂದವನು. ಈಗ ಲೋಕವು ಜಡ್ಡುಗಟ್ಟಿ ಅಂಧಕಾರಮಯವಾಗಿದೆ. ಆದ್ದರಿಂದ ಈ ಮಗುವಿಗೆ ಜಡೆಸಿದ್ಧ ಎಂದು ನಾಮಕರಣ ಮಾಡಿರಿ’ ಎಂದು ನುಡಿದರು. ಶ್ರೀಗಳ ಆಣತಿಯಂತೆ ‘ಜಡೆಸಿದ್ಧ’ ಎಂದು ಮಗುವಿಗೆ ನಾಮಕರಣ ಮಾಡಿದರು.


ಜಡೆಸಿದ್ಧ ಬೆಳೆದಂತೆ ಊರಿನ ಜನ ತಮ್ಮತಮ್ಮ ಮನೆಗೆ ಕರೆದುಕೊಂಡು ಹೋಗಿ ಆದರಿಸುತ್ತಿದ್ದದ್ದುಂಟು. ಜಡೆಸಿದ್ಧ ಐದು ವರ್ಷದವನಿದ್ದಾಗ ಊರಿನಲ್ಲಿದ್ದ ಗಾಂವಟಿ ಶಾಲೆಗೆ ಹಾಕಿದರು. ಅವನು ಓದಿನಲ್ಲಿ ಉಳಿದ ವಿದ್ಯಾರ್ಥಿಗಳಿಗಿಂತ ಮುಂದಿರುತ್ತಿದ್ದ. ಗುರುಹಿರಿಯರು ಮೆಚ್ಚುವ ಹಾಗೆ ಅಧ್ಯಯನ ಮಾಡುತ್ತಿದ್ದ. ಆಗ ಜಡೆಸಿದ್ಧನಿಗೆ ಎಂಟುವರ್ಷ. ಕರುಣೆ, ಸೇವಾಸಕ್ತಿ, ಔದಾರ್ಯ, ಸರಳತೆ, ಕ್ಷಮಾಗುಣಗಳಿಂದ ಮನೆಯವರಿಗೆ ಅಷ್ಟೇ ಅಲ್ಲದೆ, ಊರವರಿಗೂ ಪ್ರಿಯನಾಗಿದ್ದ. ತೆಕ್ಕಲಕೋಟೆಯ ಸಂಗಮೇಶ್ವರ ಸ್ವಾಮಿಗಳಿಂದ ದೀಕ್ಷಾ ಸಂಸ್ಕಾರವನ್ನು ಚೆನ್ನಬಸವಯ್ಯ ಕೊಡಿಸಿದನು. ಇದು ಜಡೆಸಿದ್ಧನ ಮೇಲೆ ಅಪಾರವಾದ ಪ್ರಭಾವ ಬೀರಿತು. ಆತ ಪ್ರತಿನಿತ್ಯ ಕ್ಲುಪ್ತಕಾಲಕ್ಕೆ ಎದ್ದು ಸ್ನಾನ, ಭಸ್ಮಧಾರಣೆ ಮಾಡಿಕೊಂಡು ಊರಜನರಿಗೆ ಶಿವಶರಣರ ಕಥೆಗಳನ್ನು ಹೇಳುತ್ತ ಮೈಮರೆಯುತ್ತಿದ್ದ. ಅನೇಕ ವೇಳೆ ಮೌನಿಯಾಗಿದ್ದು ಧ್ಯಾನಮುಖದಲ್ಲಿಯೇ ಇದ್ದುದೇ ಹೆಚ್ಚು. ಜಡೆಸಿದ್ಧ ಬೆಳೆದಂತೆ ಅವನ ನಡೆ-ನುಡಿ ಸ್ವಭಾವಗಳು ಭಿನ್ನವಾದವು. ಆದರೆ, ತಂದೆ-ತಾಯಿಗಳಿಗೆ ಈ ವರ್ತನೆ ಹಿಡಿಸಲಿಲ್ಲ. ಶಾಲೆಯನ್ನು ಬಿಡಿಸಿ, ದನ ಕಾಯಲು ಕಳುಹಿಸಿದರು. ಜಡೆಸಿದ್ಧ ಅಲ್ಲಿ ಒಂಟಿಯಾಗಿ ಕುಳಿತು ಮನದಲ್ಲೇ ಧ್ಯಾನ ಮಾಡುತ್ತಿದ್ದ.
ಗುರುಬೋಧೆ: ಜಡೆಸಿದ್ಧನ ಬಾಲ್ಯದ ವರ್ತನೆಗಳು ಲೌಕಿಕ ಅನುಭವಕ್ಕೆ ಭಿನ್ನವಾಗಿದ್ದವು. ಆತ ಸದಾ ಮೌನ, ಧ್ಯಾನ ಮತ್ತು ಏಕಾಂಗಿತನದಲ್ಲಿ ಬೆಳೆಯುತ್ತ ಹೋದ. ಇದು ತಂದೆ-ತಾಯಿಗಳಿಗೆ ಆತಂಕವನ್ನು ತಂದೊಡ್ಡಿತು. ಮಗನಿಗೆ ಮದುವೆ ಮಾಡಿದರೆ ಇದು ಸರಿಹೋಗಬಹುದೆಂದು ಯೋಚಿಸಿದರು. ಆಗ ಜಡೆಸಿದ್ಧ ಮದುವೆಗೆ ನಿರಾಕರಿಸಿದ. ನಂತರ ಗೂಳ್ಯದ ಗಾದಿಲಿಂಗಪ್ಪ ಎಂಬುವವರ ಬಳಿ ಮಗನನ್ನು ಕರೆದುಕೊಂಡು ಹೋದರು. ಅವರು ಮಗನನ್ನು ಬಿಟ್ಟುಹೋಗಿ ಎಂದು ಸೂಚಿಸಿದರು. ಆಮೇಲೆ ಜಡೆಸಿದ್ಧನಿಗೆ ಪ್ರತಿನಿತ್ಯ ವೇದಾಂತವನ್ನು ಹೇಳಿ ಸಂಸಾರದಲ್ಲಿದ್ದೂ ಸದ್ಗತಿಯನ್ನು ಕಂಡ ಶರಣರ ಚರಿತ್ರೆಯನ್ನು ಜಡೆಸಿದ್ಧನಿಗೆ ಬೋಧಿಸಿದರು. ಗುರುಗಳ ಸದ್​ಬೋಧೆ ಜಡೆಸಿದ್ಧನಲ್ಲಿ ಪರಿಣಾಮವನ್ನು ಉಂಟುಮಾಡಿತು. ಅವನು ಊರಿಗೆ ಬಂದು ಮದುವೆಯಾಗುವೆನೆಂದು ತಂದೆ-ತಾಯಿಗಳಿಗೆ ತಿಳಿಸಿದನು. ಆಗ ಗೆಣಕೆಹಾಳುಗ್ರಾಮದ ಶಂಕರಯ್ಯ ಎಂಬ ಶಿವಭಕ್ತನ ಮಗಳು ಗೌರಮ್ಮನನ್ನು ನಿಶ್ಚಯಮಾಡಿದರು. ಮದುವೆ ಸರಳವಾಗಿ ಮತ್ತು ಸಾಂಗೋಪಾಂಗವಾಗಿ ನಡೆಯಿತು. ಆಕೆ ಮನೆಗೆ ಬಂದು ಸಂಸಾರ ಹೂಡಿದಳು. ಕೆಲಕಾಲಕ್ಕೆ ಹೆಣ್ಣುಮಗುವಿನ ಜನನವಾಯಿತು. ಆ ಮಗುವಿಗೆ ‘ವೀರಮ್ಮ’ ಎಂದು ನಾಮಕರಣ ಮಾಡಿದರು. ಜಡೆಸಿದ್ಧನಿಗೆ ಒಲವಿಲ್ಲದ ಸಂಸಾರಕ್ಕೆ ಕಟ್ಟುಬಿದ್ದು ವ್ಯಥೆ ಪಡುತ್ತಿದ್ದದ್ದುಂಟು. ಲೌಕಿಕ ಜೀವನದ ಬಗ್ಗೆ ಆಗಾಗ್ಗೆ ಜಿಗುಪ್ಸೆ ಮೂಡುತ್ತಿತ್ತು. ಒಮ್ಮೊಮ್ಮೆ ಗುರು ಗಾದಿಲಿಂಗಪ್ಪನನ್ನು ಹೋಗಿ ಕಾಣುತ್ತಿದ್ದರು. ಅವರ ವಿಶ್ವಾಸವನ್ನು ಗಳಿಸಿ ಪುರಾಣ ಪ್ರವಚನಗಳನ್ನು ಅವರಿಂದ ಕೇಳಲಾರಂಭಿಸಿದರು. ಒಮ್ಮೆ ಚಿದಾನಂದ ಅವಧೂತರ ‘ಜ್ಞಾನಸಿಂಧು’ ಗ್ರಂಥವನ್ನು ಗುರುಗಳ ಮೂಲಕ ತತ್ತ್ವದ ಸಾರವನ್ನು ಗ್ರಹಿಸಿದರು. ಗುರುಗಳಲ್ಲಿ ಹನ್ನೆರಡು ವರ್ಷಗಳ ಜ್ಞಾನಬೋಧೆಯನ್ನು ಪಡೆದರು. ಈಗ ಜಡೆಸಿದ್ಧರು ಸಂಪೂರ್ಣ ಬದಲಾಗಿದ್ದರು.

ಸಮಸ್ತವೂ ಬ್ರಹ್ಮಸ್ವರೂಪವೆಂಬ ಅರಿವು ಅವರಲ್ಲಿ ತಲೆದೋರಿತ್ತು. ಪರಿಪೂರ್ಣನಾದ ಆತ್ಮನೇ ತಾನೆಂದು ಅರಿತು ಅದ್ವಯಭಾವದ ತಿಳಿವು ಅವರಲ್ಲಿ ಮೂಡಿತ್ತು. ಗುರುಬೋಧೆಯನ್ನು ಪಡೆದ ನಂತರ ಸಂಪೂರ್ಣವಾಗಿ ವಾಸನತ್ರಯಗಳನ್ನು ತಿರಸ್ಕರಿಸಿದರು. ಸಿಂಧಿಗೇರಿ ಮಲ್ಲಪ್ಪ, ದಮ್ಮೂರ ಶರಣಮಲ್ಲಮ್ಮ, ಶರಣಬುಗ್ಗೂರಪ್ಪ ಮುಂತಾದವರ ಜೊತೆ ಶ್ರೀಶೈಲದ ಯಾತ್ರೆಯನ್ನು ಕೈಗೊಂಡರು. ಅಲ್ಲಿ ಪಾತಾಳಗಂಗೆಯಲ್ಲಿ ಸ್ನಾನಮಾಡಿ ಮಲ್ಲಿಕಾರ್ಜುನನ್ನು ಪೂಜಿಸಿ, ಪ್ರಕೃತಿಸೌಂದರ್ಯವನ್ನು ಸವಿಯುತ್ತ ಬಾಹ್ಯಪ್ರಪಂಚವನ್ನೇ ಮರೆತರು. ಜಡೆಸಿದ್ಧರು ಎಷ್ಟೋದಿನಗಳ ಕಾಲ ಪರವಶದ ಸ್ಥಿತಿಯಲ್ಲಿದ್ದದ್ದುಂಟು. ಶ್ರೀಶೈಲದಿಂದ ಬಂದ ಮೇಲೆ ಸಂಪೂರ್ಣ ವೈರಾಗ್ಯವನ್ನು ತಾಳಿದರು. ಜನರು ಧ್ಯಾನಮೂರ್ತಿಯಂತೆ ಕಾಣುತ್ತಿದ್ದ ಜಡೆಸಿದ್ಧರನ್ನು ತಾತ, ಸ್ವಾಮಿ ಎಂದು ಕರೆಯಲಾರಂಭಿಸಿದರು. ಅನೇಕರಿಗೆ ಮಹಿಮಾಪುರುಷನೆಂಬ ಭಾವ ತಲೆದೋರಿತು. ಅನೇಕರು ಇವರ ಭಕ್ತರಾದರು. ಆ ಗ್ರಾಮದ ಭೀಮನಗೌಡ ತಾತನ ಆಪ್ತಭಕ್ತನಾದ. ಒಮ್ಮೆ ಭೀಮನಗೌಡ ತಾತನ ಜೊತೆ ಕುಳಿತಿದ್ದಾಗ, ಊರಲ್ಲಿ ಮಳೆಯಿಲ್ಲದೆ ಹಸು-ಕರುಗಳು ಕಂಗಾಲಾಗಿರುವುದನ್ನು ಗಮನಕ್ಕೆ ತಂದ. ಇನ್ನೇನು ಮಳೆ ಬರುವುದೆಂದು ಜಡೆಸಿದ್ಧರು ಹೇಳುವ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಮೋಡ ಕವಿದು ಮಳೆ ಸುರಿಯಿತು. ಜನ ಇದನ್ನು ಕಂಡು ಬೆರಗುಗೊಂಡರು. ಈತ ಸಾಮಾನ್ಯನಲ್ಲ ಮಹಾತ್ಮನೆಂದೇ ಅವರು ಕೊಂಡಾಡಿದರು. ಗ್ರಾಮದ ಜನರನ್ನೆಲ್ಲ ಕರೆದು ‘ನಾವು ಈಗ ಊರು ಬಿಡುವೆವು, ನೀವುಗಳೆಲ್ಲ ದ್ವೇಷ, ಅಸೂಯೆ ಮರೆತು ಒಂದಾಗಿ ಒಕ್ಕಲುತನವನ್ನು ನಡೆಸಿರಿ. ಆ ಪರಮಾತ್ಮ ನಿಮ್ಮನ್ನು ರಕ್ಷಿಸುತ್ತಾನೆ’ ಎಂದು ಹೇಳಿ ಎಲ್ಲರನ್ನು ತೊರೆದು ಹುಟ್ಟಿದ ಗ್ರಾಮವನ್ನು ಬಿಟ್ಟು ಸಂಚಾರಕ್ಕೆ ಹೊರಟರು.
ಸಂಚಾರ-ಬೋಧನೆ: ಅವರು ಊರೂರು ಸಂಚರಿಸುತ್ತ ಹಗೆದಾಳು ಎಂಬ ಗ್ರಾಮಕ್ಕೆ ಬಂದರು. ಆ ಗ್ರಾಮದ ಸಿಹಿನೀರಿನ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದರು. ಊರಜನ ಇದನ್ನು ಕಂಡು ಈತನಾರೊ ಹುಚ್ಚನೆಂದು ತಿಳಿದು ನಾನಾ ರೀತಿಯಾಗಿ ಗೋಳಾಡಿಸಿದರು. ಆದರೆ, ತಾತ ಇವರ ಚೇಷ್ಟೆಗಳನ್ನೆಲ್ಲ ಸಹಿಸಿಕೊಂಡರು. ಸಿಹಿನೀರಿನ ಬಾವಿ ಉಪ್ಪುನೀರಿನ ಬಾವಿಯಾಗಿ ಪರಿಣಮಿಸಿತು. ಅಲ್ಲಿಯ ಜನ ‘ಮಹಾನುಭಾವ ನಮ್ಮದು ತಪ್ಪಾಯಿತು ಕ್ಷಮಿಸು. ನಮ್ಮ ಬಾಧೆಗಳನ್ನು ನಿವಾರಿಸು’ ಎಂದು ಬೇಡಿಕೊಂಡರು. ಆಗ ಜಡೆಸಿದ್ಧರು ಕ್ಷಮಾಮೂರ್ತಿಗಳಾದರು. ಅಲ್ಲಿ ಕೆಲಕಾಲ ಇದ್ದು ನೌಲಿಗ್ರಾಮಕ್ಕೆ ಬಂದರು. ಅಲ್ಲಿಯ ಜನ ತಾತನ ಅಪೂರ್ವ ತೇಜಸ್ಸನ್ನು ಕಂಡು ಅಪ್ರತಿಭರಾದರು. ಏನಾದರೊಂದು ವಿಷಯ ಉಪದೇಶ ಮಾಡಬೇಕೆಂದು ಜನರೆಲ್ಲ ತಾತನಲ್ಲಿ ವಿನಂತಿಸಿಕೊಂಡರು. ಆಗ ತಾತ ಲಿಂಗಾಂಗ ಸಾಮರಸ್ಯವನ್ನು ಬೋಧಿಸಿ ತನ್ನನ್ನು ತಾನು ತಿಳಿದರೆ, ಭವದ ಮೂಲ ನಾಶವಾಗುವುದೆಂದು ಬೋಧಿಸಿದರು. ಈ ತತ್ತ್ವವನ್ನು ಕೇಳಿ ಜನ ಸಂತೋಷಗೊಂಡರು.


ಮುಂದೆ ಅವರು ತಾವರೆಗೇರಿಗೆ ಬಂದರು. ಊರಗೌಡ ತಾತನವರನ್ನು ಕಂಡ. ಅವನು ಬಲವಂತವಾಗಿ ತನ್ನ ಮನೆಗೆ ಪ್ರಸಾದಕ್ಕಾಗಿ ಕರೆದುಕೊಂಡು ಹೋದ. ಜಡೆಸಿದ್ಧರು ಪ್ರಸಾದಕ್ಕೆ ಹಾಲು ಬೇಕೆಂದರು. ಆದರೆ, ಎಮ್ಮೆ ಬರಡಾಗಿತ್ತು. ಅದು ಹಾಲು ಕೊಡುತ್ತಿರಲಿಲ್ಲ. ಆಗ ತಾತ ‘ಎಮ್ಮೆ ಹಾಲು ಕೊಡುತ್ತದೆ, ಹಿಂಡಿಕೊಳ್ಳಿ’ ಎಂದು ಹೇಳಿದರು. ಆಗ ಬರಡು ಎಮ್ಮೆ ಹಾಲು ನೀಡಿತು. ಅವರು ತಮಗಿಷ್ಟ ಬಂದ ಭಕ್ತರನ್ನು ಉದ್ಧರಿಸುತ್ತ ಊರಿಂದೂರಿಗೆ ಸಂಚರಿಸುತ್ತಿದ್ದರು. ಅವರು ಮಣೆದಾಳು ಎಂಬ ಗ್ರಾಮಕ್ಕೆ ಬಂದಾಗ, ಬಾವಿಗೆ ಬಿದ್ದು ಸತ್ತಿದ್ದ ಬಾಲಕನನ್ನು ರ್ಸ³ಸಿ ಬದುಕಿಸಿದರು. ಮತ್ತೊಂದು ಊರಿನಲ್ಲಿ ಬಿಲ್ವಪತ್ರೆಯ ಮರವನ್ನು ಕೈಯಿಂದ ಮುಟ್ಟಿ ಚಿಗುರುವಂತೆ ಮಾಡಿದರು. ಹೀಗೆ ತಾತನವರು ಭಕ್ತಜನರ ವೈಯಕ್ತಿಕ ಮತ್ತು ಸಾಮೂಹಿಕ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಹೀಗೆ, ಅವರು ಮೈಸೂರು, ದಾವಣಗೆರೆ, ಹರಿಹರ, ಚಿತ್ರದುರ್ಗ, ಬೆಂಗಳೂರು ಮುಂತಾದ ಪಟ್ಟಣಗಳನ್ನೆಲ್ಲ ಸಂಚರಿಸುತ್ತ ಬಳ್ಳಾರಿ ಜಿಲ್ಲೆಯ ಎಮ್ಮಿಗನೂರಿಗೆ ಬಂದು ಕೊನೆಯಲ್ಲಿ ನೆಲೆನಿಂತರು. ಎಮ್ಮಿಗನೂರಿನ ಜನ ತಾತನ ಮಹಿಮೆಗೆ ಬೆರಗಾದರು. ಜನರ ಕಷ್ಟ-ಸುಖಗಳಿಗೆ ತಾತ ಸ್ಪಂದಿಸಿದರು. ದಿನೇದಿನೇ ತಾತನ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಜಡೆಸಿದ್ಧರನ್ನು ಕಾಣಲು ಕಾಕಬಾಳು, ಮೇಟ್ರಿ, ಸಿದ್ಧಾಪುರ, ಸಿಂಧಿಗೇರಿಯಿಂದ ಜನ ಬರುತ್ತಿದ್ದುದುಂಟು.


ಹಾನಗಲ್ಲು ಕುಮಾರಸ್ವಾಮಿಗಳಿಗೆ ಇಷ್ಟಲಿಂಗದ ಬಗೆಗೆ ಗೊಂದಲ ಉಂಟಾದಾಗ ಅದನ್ನು ಜಡೆಸಿದ್ಧರು ಪರಿಹಾರ ಮಾಡಿದರು. ಅಪರೋಕ್ಷ ಜ್ಞಾನಿಗಳಾದ ಜಡೆಸಿದ್ಧರಿಗೆ ಹಾನಗಲ್ಲು ಕುಮಾರಸ್ವಾಮಿಗಳು ಬರುತ್ತಿರುವುದು ತಿಳಿಯಿತು. ಆಗ ಭಕ್ತರಿಗೆ ‘ನೋಡ್ರಪ್ಪ ನಾಳೆ ಇಲ್ಲಿಗೆ ಒಬ್ಬ ಮಹಾಪುರುಷ ಬರುತ್ತಾರೆ, ನೆಲಸಾರಣೆ ಮಾಡಿ ಶುದ್ಧಗೊಳಿಸಿ’ ಎಂದು ಸೂಚನೆ ನೀಡಿದರು. ಮರುದಿನ ಕುಮಾರಸ್ವಾಮಿಗಳು ಬಂದರು. ಅವರು ಬರುವಾಗ ಭಕ್ತಗಣದ ನಡುವೆ ಕುಳಿತಿದ್ದ ತಾತ, ತಕ್ಷಣವೇ ಪಕ್ಕದಲ್ಲಿದ್ದ ವ್ಯಕ್ತಿಯ ಹೆಗಲ ಮೇಲಿನ ವಸ್ತ್ರವನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ಕೊರಳಲ್ಲಿ ಕಟ್ಟಿಕೊಂಡು ಕೈಜೋಡಿಸಿ ನಿಂತುಕೊಂಡರು. ಆಗ ತಾತನವರ ಕೊರಳಲ್ಲಿದ್ದ ಲಿಂಗ ಕಂಡು ಕುಮಾರಸ್ವಾಮಿಗಳ ಸಂಶಯ ನಿವಾರಣೆಗೊಂಡಿತು. ಲಿಂಗವೇ ಅಂಗ, ಅಂಗವೇ ಲಿಂಗವೆಂಬ ಸಮರಸ ಬರುವವರೆಗೂ ಲಿಂಗಧಾರಣೆ ಬೇಕು. ಎಲ್ಲವೂ ಲಿಂಗಮಯವಾಗಿ ಲಿಂಗಾಂಗಿಯಾದ ಲಿಂಗ ದೇಹಿಯು ಉದಾತ್ತ ಸ್ಥಿತಿಗೆ ಏರಿದಾಗ ಬಾಹ್ಯದ ಇಷ್ಟಲಿಂಗಧಾರಣೆ ಅವಶ್ಯವಿಲ್ಲವೆಂಬ ರಹಸ್ಯವನ್ನು ಕುಮಾರಸ್ವಾಮಿಗಳಿಗೆ ತಾತ ಬೋಧಿಸಿದರು. ಸ್ವಾಮಿಗಳಿಗೆ ಸಂಶಯ ನಿವಾರಣೆ ಆಯಿತು. ‘ ನಿಮ್ಮ ದರ್ಶನದಿಂದ ನನ್ನ ಜನ್ಮ ಸಾರ್ಥಕವಾಯಿತು. ನನ್ನ ಉಸಿರು ಇರುವವರೆಗೂ ನಿಮ್ಮ ಸ್ಮರಣೆ ಮರೆಯಲಾರೆ’ ಎಂದು ಹೇಳಿ ಬಾದಾಮಿಗೆ ಹಿಂತಿರುಗಿದರು.


ಅಂತಿಮದಿನಗಳು: ಆಗ ಜಡೆಸಿದ್ಧರಿಗೆ ತೊಂಬತ್ತುವರ್ಷ. ಒಮ್ಮೆ ಬಂದ ಭಕ್ತರೊಬ್ಬರಲ್ಲಿ ತಮ್ಮ ಅಂತ್ಯಕಾರ್ಯಕ್ಕೆ ಭೂಮಿಯನ್ನು ಕೇಳಿದರು. ಆಗ ದೇವರೆಡ್ಡಿಗೌಡ ಎಂಬಾತನು ತಾನು ತಂದಿರುವ ಕಾಯಿಪಲ್ಲೆಗಳ ಹೆಸರು ಹೇಳಿದರೆ ಕೊಡುವೆನೆಂದು ಹೇಳಿದನು. ಆಗ ತಾತ ಎಲ್ಲ ಕಾಯಿಪಲ್ಲೆಗಳ ಹೆಸರನ್ನು ನೋಡದೆಯೇ ಹೇಳಿದರು. ಗೌಡನಿಗೆ ಆಶ್ಚರ್ಯವೋ ಆಶ್ಚರ್ಯ. ಅವನು ಕೊಟ್ಟ ಮಾತಿನಂತೆ ಊರಮುಂದಿನ ಭೂಮಿಯನ್ನು ತಾತನಿಗೆ ದಾನವಾಗಿ ಕೊಟ್ಟನು. ಒಂದು ದಿನ ಊರಿನ ಪ್ರಮುಖರನ್ನು ಕರೆಸಿದರು. ತಾನಿನ್ನು ಒಂದು ತಿಂಗಳು ಮಾತ್ರ ಇರುವೆನೆಂದೂ ತಮ್ಮ ಅಂತ್ಯ ಸಮೀಪಿಸುತ್ತಿದೆಯೆಂದು ಹೇಳಿದರು. ಆಗ ಶಾರ್ವರಿ ಸಂವತ್ಸರ, ಮಾಘಮಾಸವಾಗಿತ್ತು. ಅಂದು ಶುದ್ಧ ಪಂಚಮಿಯ ದಿನ ಭಕ್ತರಿಗೆಲ್ಲ ಆಶೀರ್ವದಿಸುತ್ತ ಸಮಾಧಿ ಸ್ಥಿತಿಗೆ ತಾತ ಏರಿದರು. ಸುತ್ತ ಭಕ್ತಜನರು ಭಜನೆ ಮಾಡುತ್ತಿದ್ದರು; ಅದನ್ನು ಕೇಳುತ್ತ ಪರವಶರಾದರು. ಜಡೆಸಿದ್ಧರು ಪದ್ಮಾಸನ ಹಾಕಿದರು. ಮುಖವು ತೇಜಸ್ಸಿನಿಂದ ಉದ್ದೀಪ್ತವಾಗಿತ್ತು. ಉಸಿರನ್ನು ಎಳೆದುಕೊಂಡು ಸ್ತಂಭನಗೊಳಿಸಿದರು. ಅವರ ಚೈತನ್ಯವು ಸಹಸ್ರಾರದಲ್ಲಿ ನೆಲೆನಿಂತಿತು. ಭಕ್ತಸಮೂಹ ವಿಸ್ಮಯದಿಂದ ಜಡೆಸಿದ್ಧರ ದೇಹತ್ಯಾಗವನ್ನು ನೋಡುತ್ತಿದ್ದರು. ಶಿಷ್ಯಗಣ ಗುರುವಿನ ಪ್ರಾಣ ಉತ್ಕ›ಮಣಗೊಳ್ಳುವ ಯೌಗಿಕಸ್ಥಿತಿಯನ್ನು ಗಮನಿಸುತ್ತಿತ್ತು. ಲಿಂಗಮಯವಾದ ಶರೀರವು ಲಿಂಗದಲ್ಲಿಯೇ ತದ್ಗತವಾಯಿತು. ಅವರು ದೇಹತ್ಯಾಗ ಮಾಡಿದರು.

 

ಜಡೆಸಿದ್ಧರು ಕ್ರಿ.ಶ.1900ರಂದು ಲಿಂಗೈಕ್ಯರಾದರು. ಅವರ ಇಚ್ಛೆಯಂತೆ ದೇವರೆಡ್ಡಿಗೌಡ ಕೊಟ್ಟಿದ್ದ ದಾನದ ಭೂಮಿಯಲ್ಲಿ ಸಂಸ್ಕಾರ ಕ್ರಿಯೆಗಳನ್ನು ಊರಿನ ಭಕ್ತರು ವಿಧಿವತ್ತಾಗಿ ನೆರವೇರಿಸಿದರು. ಅಲ್ಲಿ ಗದ್ದುಗೆಯ ನಿರ್ವಣವೂ ಆಯಿತು. ಜಡೆಪ್ಪತಾತ ತೊಂಬತ್ತುವರ್ಷ ಬದುಕಿ ಸಾಧನೆಯ ಶಿಖರವನ್ನು ಏರಿದರು. ಪ್ರತಿಯೊಬ್ಬರಿಗೂ ಪರಮಾರ್ಥದ ಸುಲಭದಾರಿಯನ್ನು ತೋರಿಸಿಕೊಟ್ಟರು. ಬಳ್ಳಾರಿಜಿಲ್ಲೆಯ ಪ್ರಮುಖ ಅವಧೂತರಲ್ಲೊಬ್ಬರಾಗಿ ಈಗಲೂ ತೊಳಗಿ ಬೆಳಗುತ್ತಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!