Ad image

ಬಳ್ಳಾರಿ: ತಲೆದೂಗಿಸಿದ “ಹಾಡಿರೇ ರಾಗಗಳ-ತೂಗಿರೇ ದೀಪಗಳ” ಸಂಗೀತ ಗಾಯನ ಕಾರ್ಯಕ್ರಮ

Vijayanagara Vani
ಬಳ್ಳಾರಿ: ತಲೆದೂಗಿಸಿದ “ಹಾಡಿರೇ ರಾಗಗಳ-ತೂಗಿರೇ ದೀಪಗಳ” ಸಂಗೀತ ಗಾಯನ ಕಾರ್ಯಕ್ರಮ
ಬಳ್ಳಾರಿ,ಆ.03
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ “ಹಾಡಿರೇ ರಾಗಗಳ-ತೂಗಿರೇ ದೀಪಗಳ” ಸಂಗೀತ ಗಾಯನ ಕಾರ್ಯಕ್ರಮವು ನೆರೆದಿದ್ದ ಜನತೆಯ ತಲೆದೂಗಿಸಿತು.
ಕಾರ್ಯಕ್ರಮವನ್ನು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ಜಾನಪದ, ತತ್ವಪದ, ಸುಗಮ ಸಂಗೀತ, ಶೋಭಾನೆ ಪದಗಳು, ರಂಗಗೀತೆ ಸೇರಿದಂತೆ ಈ ನೆಲ ಮೂಲದ ಕಲಾಪ್ರಕಾರಗಳನ್ನು ಪ್ರಸ್ತುತಪಡಿಸುವ ಕಲೆ ಮತ್ತು ಕಲಾವಿದರರ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ಜಾನಪದ ಸಾಹಿತ್ಯ ಹಾಗೂ ತತ್ವಪದಗಳಿಗೆ ತನ್ನದೇ ಆದ ಇತಿಹಾಸ ಹೊಂದಿದೆ. ಈ ಹಿಂದೆ ಕೆಲಸದಿಂದ ದಣಿದು ಬಂದ ಹಿರಿಯರು ಪದಗಳನ್ನು ಹೇಳುತ್ತಾ ದಣಿವಾರಿಸಿಕೊಳ್ಳುತ್ತಿದ್ದರು. ಈ ಪ್ರಕಾರಗಳ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನದ ಕಾರ್ಯಕ್ರಮ ಇದಾಗಿದ್ದು, ಇಂತಹ ಕಾರ್ಯಕ್ರಮ ರೂಪಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಅರ್ಪಿಸುತ್ತೇನೆ ಎಂದರು.
ಹಿಂದಿನ ಕಾಲದಲ್ಲಿ ತತ್ವಪದ, ಜಾನಪದ ಗೀತೆಗಳು ವ್ಯಕ್ತಿಯನ್ನು ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಉತ್ತಮ ನಾಗರಿಕರನ್ನಾಗಿ ಬೆಳೆಸುತ್ತಿದ್ದವು. ಗ್ರಾಮೀಣ ಭಾಗದಲ್ಲಿ
ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಹಳ್ಳಿಗಳಲ್ಲಿ ಹವ್ಯಾಸ ಜೀವನವಾಗಿದ್ದವು ಎಂದರು.
ತೊಗಲುಗೊಂಬೆಯ ಬೆಳಗಲ್ಲು ವೀರಣ್ಣ, ಕಲಾವಿದರಾದ ಮನ್ಸೂರ್ ಸುಭದ್ರಮ್ಮ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ರೀತಿಯ ಕಲಾವಿದರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಜಾನಪದಕಾರರು, ತತ್ವಪದಕಾರರು ಎಲೆ ಮರೆ ಕಾಯಿಯಂತೆ ಬಯಸುವವರು. ಯಾವುದೇ ಪ್ರಚಾರವನ್ನು ಬಯಸುವವರಲ್ಲ, ತಮ್ಮದೇ ಆದ ಸಾಹಿತ್ಯ ಲೋಕ, ತತ್ವಪದ ಲೋಕದಲ್ಲಿ ಬದುಕಿದವರು ಎಂದು ಬಿಂಬಿಸಿದರು.
*ಮನಸೊರೆಗೊಂಡ ಸಂಗೀತ ಗಾಯನ:*
ಬಳ್ಳಾರಿಯ ಎಸ್.ಎಂ ಹುಲುಗಪ್ಪ ತಂಡದಿಂದ ಜಾನಪದ ಗೀತೆಗಳು, ಸಿರುಗುಪ್ಪದ ಅಂಬಣ್ಣ ದಳವಾಯಿ ಅವರಿಂದ ಸುಗಮ ಸಂಗೀತ, ಬಳ್ಳಾರಿಯ ಕೆ.ಜಡೇಶ್ ಅವರಿಂದ ಭಾವ ಗೀತೆಗಳು, ಸಿರುಗುಪ್ಪ ತಾಲ್ಲೂಕಿನ ಉತ್ತನೂರಿನ ರಾಮಪ್ಪ ಅವರಿಂದ ರಂಗ ಗೀತೆಗಳು, ಕುರುಗೋಡು ತಾಲ್ಲೂಕಿನ ಕಲ್ಲುಕಂಬದ ಬಿ.ಆನಂದ ಅವರಿಂದ ಕ್ರಾಂತಿ ಗೀತೆಗಳು, ಸಂಗನಕಲ್ಲಿನ ಉಷಾ ಅವರಿಂದ ವಚನ ಗೀತೆಗಳು, ಯರ್ರಗುಡಿಯ ಸುಂಕಪ್ಪ ಹೆಚ್.ಜಿ ಅವರಿಂದ ಹೋರಾಟ ಗೀತೆಗಳು, ಇಬ್ರಾಹಿಂಪುರದ ಹೆಚ್.ಯರ್ರಿಸ್ವಾಮಿ ಅವರಿಂದ ಕ್ರಾಂತಿ ಗೀತೆಗಳು, ಕುರುಗೋಡಿನ ಕೆ.ಹನುಮಂತಪ್ಪ ಜೋಗಿ ಅವರಿಂದ ಕಿನ್ನರಿ ಜೋಗಿ ಪದಗಳು, ಕಂಪ್ಲಿ ತಾಲ್ಲೂಕಿನ ಮೆಟ್ರಿಯ ಸಿ.ಡಿ.ಮೌನೇಶ್ ಅವರಿಂದ ತತ್ವಪದ ಮತ್ತು ದಾಸರ ಪದಗಳು, ಸಂಡೂರು ತಾಲ್ಲೂಕಿನ ಭುಜಂಗನಗರದ ತಾಯಪ್ಪ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸಂಗನಕಲ್ಲಿನ ಮಾರೆಮ್ಮ ಅವರಿಂದ ಸಂಪ್ರದಾಯ ಗೀತೆಗಳು, ಸಿರುಗುಪ್ಪ ತಾಲ್ಲೂಕಿನ ಅರಳಿಗನೂರಿನ ನೀಲಗಂಗಮ್ಮ ಅವರಿಂದ ಶೋಭಾನೆ ಪದಗಳು ಸೇರಿದಂತೆ ವಿವಿಧ ಸಂಗೀತ ಗಾಯನ ಕೇಳುಗರ ಮನಸೂರೆಗೊಂಡವು.
ಈ ವೇಳೆ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ, ಹಿರಿಯ ರಂಗಭೂಮಿ ಕಲಾವಿದರು ಹಾಗೂ ನೃತ್ಯ ಕಲಾವಿದರಾದ ಬಿ.ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿರಿಯ ತತ್ವಪದಗಳ ಕಲಾವಿದ ಸಿ.ಡಿ.ಮಾರೆಪ್ಪ, ಬಯಲಾಟದ ಹಿರಿಯ ಕಲಾವಿದರು ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ರಂಗಾರೆಡ್ಡಿ, ಕುರುಗೋಡಿನ ಕಿನ್ನರಿ ಜೋಗಿ ಪದಗಳ ಗಾಯಕ ಕೆ.ಹನುಮಂತಪ್ಪ ಸೇರಿದಂತೆ ಕಲಾವಿದರು, ಸಾರ್ವಜನಿಕರು ಇದ್ದರು.

Share This Article
error: Content is protected !!
";