ಸಿರುಗುಪ್ಪ.ಸೆ.೦೫. ಪ್ರತಿನಿತ್ಯ ಒಂದಿಲ್ಲೊಂದು ವಿನೂತನ ಕಲಿಕಾ ಚಟುವಟಿಕೆಗಳ ಮೂಲಕವೇ ವಿದ್ಯಾರ್ಥಿಗಳ ಮತ್ತು ತಾಲೂಕಿನ ಶಿಕ್ಷಣ ಇಲಾಖೆಯ ಗಮನ ಸೆಳೆದಿರುವ ಆರ್.ಪಿ.ಈಶಪ್ಪ ಬಿ.ಜಿ.ದಿನ್ನೆಯವರು ೨೦೨೫-೨೬ನೇ ಸಾಲಿನ ‘ಕ್ಲಸ್ಟರ್ ಹಂತದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುಡುದರಹಾಳ್ ಕ್ಲಸ್ಟರ್ ವ್ಯಾಪ್ತಿಯ ಭೈರಗಾಮದಿನ್ನೆ ಸ.ಕಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕರಲ್ಲದೆ ರಂಗ ಪದವೀಧರರಾಗಿರುವ ಇವರು ಮೂಲತಃ ಭೈರಗಾಮದಿನ್ನೆ ಗ್ರಾಮದ ಆರ್.ಪ್ರಕಾಶಗೌಡ ಮತ್ತು ಆರ್.ಅನ್ನಪೂರ್ಣ ದಂಪತಿಗಳ ಮಗನಾಗಿ ೦೧ ಜನವರಿ ೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ ಡ್ರಾಮಾ ಮಾಡಿರುವ ಇವರು ಶಾಲಾ ಪಠ್ಯ ವಿಷಯಗಳನ್ನು ನಾಟಕ, ನೃತ್ಯ, ಸಂಗೀತ, ಚಿತ್ರಕಲೆ ಚಟುವಟಿಕೆಗಳ ಮೂಲಕ ಕಲಿಸುತ್ತಾ ಶಾಲಾ ಪ್ರವೇಶಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಇವರ ಗುಣಮಟ್ಟದ ಕಲಿಕಾ ವಿಧಾನಗಳಿಗೆ ಮನಸೋತ ಊರಿನ ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಸೇರಿಸುವಂತೆ ಮೋಡಿ ಮಾಡಿದ್ದಾರೆ. ಅಭಿನಯ, ನೃತ್ಯ ಹಾಗೂ ಬೋಧನೆಯಲ್ಲಿನ ಇವರ ಸೃಜನಶೀಲತೆಯನ್ನು ಗುರುತಿಸಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ಬಿ.ಇ.ಓ ಹೆಚ್.ಗುರ್ರಪ್ಪ, ಬಿ.ಆರ್.ಪಿ ತಮ್ಮನಗೌಡ ಪಾಟೀಲ್, ಸಿ.ಆರ್.ಪಿ ಮಲ್ಲಿಕಾರ್ಜುನ, ಮುಖ್ಯೋಪಾಧ್ಯಾಯ ದೊಡ್ಡಪ್ಪ ಕೋರೆ, ರೂಂ ಟು ರೀಡ್ ಸಂಚಾಲಕ ಸಂತೋಷ್ ಮತ್ತಿತರರು ಕುಡುದರಹಾಳಿನಲ್ಲಿ ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಕ್ಲಸ್ಟರ್ ಹಂತದ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಿದರು.
ಅತಿಥಿ ಶಿಕ್ಷಕ ಆರ್.ಪಿ.ಈಶಪ್ಪರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
