ಧಾರವಾಡ () ಫೆಬ್ರವರಿ 17: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಧಾರವಾಡ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಶೀಘ್ರದಲ್ಲಿ ಆಯೋಜಿಸಲಾಗುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಮತ್ತು ಉದ್ಯೋಗದಾತರಾದ ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು, ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ಇಂದು (ಫೆ.17) ಸಂಜೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಹಾಗೂ ಕೈಗಾರಿಕೆ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.
ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಧಾರವಾಡ ಜಿಲ್ಲೆಯ ಸುಮಾರು ಆರು ಸಾವಿರಕ್ಕೂ ಹೆಚ್ಚು ಯುವ ನಿಧಿ ಫಲಾನುಭವಿಗಳಿದ್ದಾರೆ. ಇವರಿಗೆ ಅಗತ್ಯ ತರಬೇತಿ ನೀಡುವ ಕಾರ್ಯದಲ್ಲಿ ಕೈಗಾರಿಕೆಗಳು ಕೈಜೊಡಿಸಬೇಕು. ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹೆರಳವಾದ ಮಾನವ ಸಂಪನ್ಮೂಲವಿದೆ. ಇವರಿಗೆ ಅಗತ್ಯ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಧಾರವಾಡ ಜಿಲ್ಲಾ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲ ಪಧವಿ, ಐಟಿಐ ಕಾಲೇಜುಗಳ ಪಧವಿದರ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತ್ತು ಆಯಾ ಕಾಲೇಜಿನ ಕ್ಯಾಂಪಸ್‍ನಿಂದ ಉದ್ಯೋಗ ಮೇಳದ ಸ್ಥಳಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ಉದ್ಯೋಗ ಮೇಳದಲ್ಲಿ ಸುಮಾರು 8 ರಿಂದ 10 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮತ್ತು ಧಾರವಾಡ ಜಿಲ್ಲೆಯ ಬೇಲೂರು, ತಾರಿಹಾಳ ಮತ್ತು ಸತ್ತೂರ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೋಧ್ಯಮಿಗಳು ಸಹ ಭಾಗವಹಿಸಲಿದ್ದಾರೆ ಎಂದು ಜಿ.ಪಂ. ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.
ಹುಬ್ಬಳ್ಳಿ ಚೇಂಬರ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಪಿ.ಸಂಶಿಮಠ ಅವರು ಮಾತನಾಡಿ, ಈ ಉದ್ಯೋಗ ಮೇಳದಲ್ಲಿ 60 ಕ್ಕೂ ಹೆಚ್ಚು ಕೈಗಾರಿಕೋಧ್ಯಮಿಗಳು ಭಾಗವಹಿಸಲಿದ್ದಾರೆ. ಆಯಾ ಕೈಗಾರಿಕೆಗಳಿಗೆ ಅಗತ್ಯವಿರುವ ಉದ್ಯೋಗಿಗಳ ಸಂಖ್ಯೆಯನ್ನು ಮುಂಚಿತವಾಗಿ ನೀಡಲಿದ್ದಾರೆ. ಅಕೌಶಲ್ಯವಿರುವ ಉದ್ಯೋಗ ಆಕಾಂಕ್ಷಿಗಳನ್ನು ಸಹ ಆಯ್ಕೆ ಮಾಡಿಕೊಂಡು ಕೆಲವು ಕೈಗಾರಿಕೆಗಳು ತರಬೇತಿಯನ್ನು ನೀಡುತ್ತಿವೆ ಎಂದು ಅವರು ಹೇಳಿದರು.
ಧಾರವಾಡ ಕೈಗಾರಿಕಾ ಬೆಳವಣಿಗೆ ಕೇಂದ್ರದ ವೈಸ್‍ಚೇರಮನ್ ಶಿರಿಶ್ ಉಪ್ಪಿನ ಅವರು ಮಾತನಾಡಿ, ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಉದ್ಯೋಗ ಮೇಳದ ಮಾಹಿತಿಯನ್ನು ನೀಡಲಾಗಿದೆ. ಮತ್ತು ಉದ್ಯೋಗಿಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಉದ್ಯೋಗ ಬಯಸಿ ಬರುವ ಅನೇಕ ಆಕಾಂಕ್ಷಿಗಳು ಅರ್ಧಕ್ಕೆ ಕೆಲಸ ಬಿಡುತ್ತಾರೆ. ತರಬೇತಿ ನಂತರ ಕೆಲವು ಬಾರಿ ಬೇರೆ ಕೈಗಾರಿಕೆಗಳಿಗೆ ಹೋಗುತ್ತಾರೆ. ಇದರಿಂದ ಆಯ್ಕೆ ಮಾಡಿಕೊಂಡ ಕೈಗಾರಿಕೆಗಳಿಗೆ ಸ್ವಲ್ಪಮಟ್ಟಿಗೆ ತೊಂದರೆ ಆಗುತ್ತಿದೆ. ಈ ಕುರಿತು ಮೇಳದಲ್ಲಿ ಗಮನ ಹರಿಸಬೇಕೆಂದು ವಿನಂತಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ವಂದಿಸಿದರು.
ಸಭೆಯಲ್ಲಿ ಶಾಹಿ ಎಕ್ಸಪೊಜ್, ಕನೆಕ್ಟಿವಿಟಿ, ಪಿಡ್‍ಕಾರ್ಡ, ಡಾಪ್ಸಮ್ ಸೇರಿದಂತೆ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಮತ್ತು ಐಟಿಐ, ಕಾಲೇಜು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ, ಉದ್ಯೋಗ ವಿನಿಮಯ ಇಲಾಖೆ, ಡೇ-ನಲ್ಮ್ ಯೋಜನೆ ಘಟಕ, ಕೈಗಾರಿಕೆ ಇಲಾಖೆ, ಕೈಗಾರಿಕಾ ತರಬೇತಿ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
**