ಚಿತ್ರದುರ್ಗ ಆಗಸ್ಟ್ 30:
ನಶಾ ಮುಕ್ತ ಭಾರತ ಅಭಿಯಾನದಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಬಂಡೀಪುರದಿಂದ ಬೀದರ್ವರೆಗೆ ಹಮ್ಮಿಕೊಂಡಿರುವ ಬೈಕ್ ಜಾಥಾವು ಶನಿವಾರ ತುಮಕೂರು ಮಾರ್ಗದಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿತು.
ನಶಾ ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಪಿವಿಎಸ್ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಆ.29 ರಿಂದ 31 ರವರೆಗೆ ಬಂಡೀಪುರದಿಂದ ಬೀದರ್ವರೆಗೆ ಮೂರು ದಿನಗಳ ಕಾಲ 1 ಸಾವಿರ ಕಿ.ಮೀ ಬೈಕ್ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎನ್.ಸಿ.ಸಿ ಸಹಯೋಗದೊಂದಿಗೆ ಜಾಥಾ ನಡೆಸಲಾಗುತ್ತಿದ್ದು, 20ಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿದ್ದು, ಈ ಜಾಥಾ ಕಾರ್ಯಕ್ರಮವು ಮಾರ್ಗದುದ್ದಕ್ಕೂ ರಾಜ್ಯದ ಪ್ರಮುಖ ಜಿಲ್ಲೆಗಳ ಮೂಲಕ ಸಾಗುತ್ತಾ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
2020ರ ಮಿಸ್ಸಸ್ ಇಂಡಿಯಾ ವಿಜೇತೆ ರೇಣುಕಾ ಮಾತನಾಡಿ, ಯುವಕರು ದುಶ್ಚಟದಿಂದ ದೂರವಿರಬೇಕು ಹಾಗೂ ವ್ಯಾಯಾಮ ಹಾಗೂ ನಡಿಗೆಯಂತಹ ಅಭ್ಯಾಸ ರೂಡಿಸಿಕೊಳ್ಳಬೇಕು ಹಾಗೂ ನೆರೆಹೊರೆಯಲ್ಲಿ ಯಾರಾದರೂ ದುಶ್ಚಟಕ್ಕೆ ಒಳಗಾಗಿದ್ದರೆ ಪೋಲಿಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅಭಿನವ್, ಎನ್ಎಸ್ಎಸ್ ರಾಜ್ಯ ಸಮಾಲೋಚಕ ಪ್ರತಾಪ್ ಲಿಂಗಯ್ಯ, ಪಿವಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಪಿ.ವಿ.ಶ್ರೀಧರ್ ಮೂರ್ತಿ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಇದ್ದರು.