ಬಳ್ಳಾರಿ,ಜು.09
ವಾಂತಿ-ಬೇಧಿ ಪ್ರಕರಣಗಳ ನಿಯಂತ್ರಣಕ್ಕೆ ಸಾರ್ವಜನಿಕರು ಕುದಿಸಿ, ಆರಿಸಿ ಸೋಸಿದ ನೀರು ಕುಡಿಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಯಲ್ಲಾ ರಮೇಶ್ಬಾಬು ಅವರು ತಿಳಿಸಿದರು.
ಸಂಡೂರು ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಶಂಕಿತ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಮುಂಜಾಗ್ರತೆಯಾಗಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ನೀಡಿ ಅವರು ಮಾತನಾಡಿದರು.
ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಟೈಫಾಯಿಡ್, ಕಾಲಾರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಯಾವುದೇ ನೀರನ್ನು ಕುಡಿಯಲು ನೇರವಾಗಿ ಬಳಸದೇ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಓಆರ್ಎಸ್ ಜೀವಜಲವನ್ನು ತಯಾರಿಸುವಾಗ 1ಲೀ ನೀರಿಗೆ ಇಲಾಖೆಯಿಂದ ಕೊಡುವ ಪೊಟ್ಟಣದಲ್ಲಿರುವ ಪುಡಿಯನ್ನು ಸಂಪೂರ್ಣವಾಗಿ ಹಾಕಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಬೇಧಿ ಭಾದಿತರಿಗೆ ಕುಡಿಯಲು ಕೊಡಬೇಕು ಮತ್ತು ಅದನ್ನು 24 ಗಂಟೆಯೊಳಗೆ ಸಂಪೂರ್ಣವಾಗಿ ಬಳಸಬೇಕು ಎಂದು ಅವರು ವಿವರಿಸಿದರು.
ಗ್ರಾಮದಲ್ಲಿ ಮೇಲ್ನೋಟಕ್ಕೆ ಕಲುಷಿತ ಆಹಾರ ಸೇವನೆಯಿಂದ ವಾಂತಿ ಬೇಧಿ ಉಂಟಾಗಿರಬಹುದೆಂದು ಸಂಶಯಿಸಲಾಗಿದು, ಮನೆ ಮನೆಗೆ ತೆರಳಿ ಜಾಗೃತಿ ನೀಡಿ ಕುದಿಸಿ, ಆರಿಸಿ ಸೋಸಿದ ನೀರು ಕುಡಿಯಲು ಮತ್ತು ಶುದ್ದ ಆಹಾರ ಸೇವನೆÀ ಕುರಿತು ಜಾಗೃತಿ ನೀಡಲಾಗುತ್ತಿದ್ದು, ಪ್ರಸ್ತುತ ಗ್ರಾಮದಲ್ಲಿ ರೋಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು, ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ದಿನದ 24 ಗಂಟೆ ವೈದ್ಯಕೀಯ ತಂಡ ಸ್ಥಳದಲ್ಲಿಯೇ ಇದ್ದು ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ. ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಕ್ಷೇತ್ರ ಸಿಬ್ಬಂದಿಯವರ 9 ತಂಡಗಳನ್ನು ರಚಿಸಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಮೈಕಿಂಗ್ ಹಾಗೂ ಸ್ವಚ್ಛತೆ ಕುರಿತು ಪ್ರಾತ್ಯಕ್ಷತೆಯನ್ನು ಮಾಡಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೆ ಬಳಸಬೇಕು. ತಂಗಳು ಆಹಾರ ಸೇವಿಸದೆ ಬೆಳಗಿನ ಆಹಾರ ಬೆಳಿಗ್ಗೆ ಮತ್ತು ರಾತ್ರಿ ಆಹಾರ ರಾತ್ರಿ ಮಾತ್ರ ಬಳಸಬೇಕು. ತಯಾರಿಸಿದ ಅಹಾರದ ಮೇಲೆ ನೊಣಗಳು ಕುಡದಂತೆ ಮುಚ್ಚಳವನ್ನು ಮುಚ್ಚಬೇಕು. ಕುಡಿಯುವ ನೀರು ತುಂಬಿದ ನಂತರ ಪಾತ್ರೆಗಳಿಗೆ ಮುಚ್ಚಳ ಮುಚ್ಚಬೇಕು. ಆದಷ್ಟು ನಳ ಇರುವ ಪಾತ್ರೆಗಳನ್ನು ಬಳಸಿ. ನೀರಿನಲ್ಲಿ ಕೈ ಇಡದಂತೆ ಮುಂಜಾಗೃತೆ ವಹಿಸಬೇಕು. ರಸ್ತೆ ಬದಿ ತೆರೆದಿಟ್ಟ ಅಥವಾ ಕತ್ತರಿಸಿದ ಹಣ್ಣುಗಳನ್ನು ತಿನ್ನಬಾರದು. ನೊಣಗಳು ಆಹಾರದ ಮೇಲೆ ಕುಳಿತುಕೊಳ್ಳುವ ಸಾಧ್ಯತೆಯಿದೆ.
ವಾಂತಿ-ಬೇಧಿ ಅಥವಾ ಕಾಲರಾ ಸೋಂಕಿತರಿಗೆ ಮನೆಯಲ್ಲಿಯೆ ತಯಾರಿಸಿದ ಗಂಜಿ, ಬೇಳೆ ತಿಳಿ, ನಿಂಬು ಪಾನಕ ಹಾಗೂ ಎಳೆನೀರು ಕುಡಿಯಲು ಕೊಡಬೇಕು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ತಪ್ಪದೆ ತೊಳೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ., ತಾಲ್ಲೂಕ ಪಂಚಾಯತ್ ನಿರ್ವಾಹಕ ಅಧಿಕಾರಿ ಷಡಕ್ಷರಯ್ಯ, ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಭರತ್, ವೈದ್ಯಾಧಿಕಾರಿ ಡಾ.ಅಕ್ಷಯ್ ಶಿವಪುರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಕಾಲಾರ ನಿಯಂತ್ರಣ ತಂಡ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಯರ್ರಿಸ್ವಾಮಿ, ಬಸವರಾಜ್, ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ, ಭುವನೇಶ್ವರಿ, ಮೇಘನರಾಣಿ, ಮಲ್ಲಿಕಾರ್ಜುನ್, ಅಂಜಿನಪ್ಪ, ವೀರೇಶ್ ಧನುಷ್ರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕವಿತ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು.