ದೇವಾದಿ ದೇವ ಮಹಾದೇವ ಪರಶಿವನನ್ನು ಪತಿಯಾಗಿ ಪಡೆಯಲು ತಪಸ್ಸನ್ನು ಆಚರಿಸಿದ ಬ್ರಹ್ಮಚಾರಿಣಿ ದೇವಿಯು ದುರ್ಗೆಯ ಎರಡನೇ ಅವತಾರವಾಗಿ ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಶ್ವೇತ ವಸ್ತ್ರಧಾರಿಣಿಯಾಗಿದ್ದು ಶುದ್ಧತೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತಾಳೆ. ಈಕೆಯು ತನ್ನ ಎಡಗೈಯಲ್ಲಿ ಕಮಂಡಲನ್ನು ಹಿಡಿದಿದ್ದು ಬಲಗೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ಶಿವ ಯೋಗದ ಸಮಯದಲ್ಲಿ ಶಿವ ಮತ್ತು ಶಕ್ತಿ ರೂಪಿಣಿಯಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ
ಎಲ್ಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ, ಸುಖ ಸಮೃದ್ಧಿ ಸಮಾಧಾನಗಳು ಹೆಚ್ಚುತ್ತವೆ.
ಸಿದ್ದಿ ಸಾಧನೆಗೆ ಮೂರ್ತ ರೂಪವೇ ಬ್ರಹ್ಮಚಾರಿಣಿ ದೇವಿ. ತನ್ನ ಹಿಂದಿನ ಜನ್ಮದಲ್ಲಿ ಸತಿ ದೇವಿಯಾಗಿ ಹುಟ್ಟಿದ ಆಕೆ ತನಗೆ ಮತ್ತು ತನ್ನ ಪತಿಗಾದ ಅವಮಾನದಿಂದ ತಂದೆಯು ಮಾಡುತ್ತಿದ್ದ ಯಜ್ಞದ ಕುಂಡಕ್ಕೆ ಹಾರಿ ಪ್ರಾಣಬಿಟ್ಟಳು… ಆಕೆಯೇ ಮರುಜನ್ಮದಲ್ಲಿ ಹಿಮವಂತನ ಮಗಳಾಗಿ ಮರುಜನ್ಮವೆತ್ತಿದಳು. ವಿಧಿ ಲಿಖಿತದಂತೆ ಶಿವನನ್ನು ವಿವಾಹವಾಗಲು ಸತತ ಶ್ರದ್ಧೆ ಮತ್ತು ಸಾಧನೆಯಿಂದ ಒಡಗೂಡಿದ ಆಕೆಯ ಭಕ್ತ ಭಾವದ ವ್ಯಕ್ತ ರೂಪಕ್ಕೆ ಸಾಕ್ಷಾತ್ ಪರಶಿವನೇ ಸೋತು ಆಕೆಯನ್ನು ಮದುವೆಯಾದನು.
ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯ ವಿಧಿಗಳನ್ನು ಪೂರೈಸಿ ಪೂಜೆಗೆ ಎಲ್ಲ ಪ್ರೀತಿಯ ತಯಾರಿಗಳನ್ನು ಮಾಡಿಕೊಂಡು ಶ್ವೇತವರ್ಣದ ಬಟ್ಟೆಗಳನ್ನು ಧರಿಸಿ
ದಧಾನ ಕರದ್ಮಾಭಾಮಕ್ಷ ಮಾಲಾ ಕಮಂಡಲ
ದೇವಿ ಪ್ರಸೀದತುಮಯೀ ಬ್ರಹ್ಮಚಾರಿಣ್ಯನುತ್ತಮಾ
ಸ್ವಾದಿಷ್ಟಾನ ಚಕ್ರದ ಮೇಲೆ ಹಿಡಿತವನ್ನು ಸಾಧಿಸಲು ಮೊಸರನ್ನವನ್ನು ಬಹುವಾಗಿ ಇಷ್ಟಪಡುವ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು. ಬ್ರಹ್ಮಚಾರ್ಯ ಶಕ್ತಿಯನ್ನು ಕಾಪಾಡುವ, ಸೃಷ್ಟಿಯ ಅಧಿದೇವತೆ ಪಾರ್ವತಿ ದೇವಿಯ ಅವತಾರವಾಗಿರುವವಳೇ ಬ್ರಹ್ಮಚಾರಿಣಿ. ಕೇವಲ ಒಂದು ಎಲೆಯನ್ನು ಸೇವಿಸಿ ನೂರಾರು ವರ್ಷ ತಪಸ್ಸನ್ನು ಆಚರಿಸಿದ ಆಕೆ ಅಪರ್ಣೇ ಎನಿಸಿದಳು. ಕಂದ ಮೂಲಗಳನ್ನು ಸೇವಿಸಿ ಕೂಡ ಆಕೆ ಕಠಿಣ ತಪಸ್ಸನ್ನು ಆಚರಿಸಿ ಶಿವನನ್ನು ಪತಿಯಾಗಿ ಪಡೆದು ಉಮಾ ಎನಿಸಿಕೊಂಡಳು
ಓಂ ಹ್ರೀಂ ಬ್ರಹ್ಮಚಾರಿಣಿ ದುರ್ಗಾಯೇ ನಮಃ ಎಂದು ಜಪಿಸಬೇಕು.
ಭಕ್ತಿ ಮತ್ತು ವೈರಾಗ್ಯಗಳನ್ನು ಹೊಂದಬಯಸುವವರು ಶಕ್ತಿ ರೂಪೀಣಿಯಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು
ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತ ನಮಸ್ತಸ್ಯೆ ನಮಸ್ತಸ್ಯೆ ನಮಸ್ತ್ಯಸ್ಯೆ ನಮೋನಮಃ
ಎಂದು ಜಪಿಸಬೇಕು.
ವೀಣಾ ಹೇಮಂತಗೌಡ ಪಾಟೀಲ ಮುಂಡರಗಿ ಗದಗ್