Ad image

ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಪ್ರತಿಯೊಬ್ಬರಿಗೂ ಆದರ್ಶ

Vijayanagara Vani
ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಪ್ರತಿಯೊಬ್ಬರಿಗೂ ಆದರ್ಶ
ಮಡಿಕೇರಿ ಜಾತಿ, ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭ್ರಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಆದರ್ಶ ಪೂರ್ಣವಾದದ್ದು, ಎಲ್ಲರಲ್ಲೂ ಮಾನವೀಯತೆಯ ಸದಾಶಯವನ್ನು ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಓಂಕಾರ ಸದನ ಸಭಾಂಗಣದಲ್ಲಿ ನಡೆದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
1856 ರಲ್ಲಿ ತಿರುವನಂತಪುರದ ಚೆಂಬಲಾಂತಿ ಎಂಬ ಹಳ್ಳಿಯಲ್ಲಿ ಕೆಳವರ್ಗದ ಮಧ್ಯಮ ಕುಟುಂಬದ ಈಳವ ಜಾತಿಯಲ್ಲಿ, ವಯಲ್ವರಂ ಮನೆಯ ಮಾದನ್ ಆಶಾನ್ ಮತ್ತು ಕುಟ್ಟಿಯಮ್ಮ ಎಂಬ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು. ಶಂಕರಾಚಾರ್ಯರ ಅದ್ವೈತದ ಸಾರದಲ್ಲಿ ತಮ್ಮ ದಾರ್ಶನಿಕತೆಯನ್ನು ಪ್ರತಿಪಾದಿಸಿದ ನಾರಾಯಣ ಗುರುಗಳು, ಎಲ್ಲರನ್ನೂ ಒಂದಾಗಿ ಕಂಡರು. ಇರುವವನು ಒಬ್ಬನೇ ಪರಮಾತ್ಮ, ಒಂದೇ ತತ್ವ, ಒಂದೇ ಸತ್ಯ. ಎಲ್ಲವೂ ಒಂದೇ ಅಂದಮೇಲೆ ಭೇದ-ಭಾವವಿಲ್ಲ, ಮೇಲು ಕೀಳಿಲ್ಲ. ಎಲ್ಲರಲ್ಲಿರುವ ಪರಮಾತ್ಮ ಒಬ್ಬನೇ ಅಂದಮೇಲೆ, ಅಲ್ಲಿ ಮೇಲು ಕೀಳೆಂಬ ಮಾತೆಲ್ಲಿ ಎಂದು ಪ್ರಶ್ನಿಸಿದವರು ಎಂದು ಲೋಕೇಶ್ ಸಾಗರ್ ಅವರು ವಿವರಿಸಿದರು.
ಮಾನವೀಯತೆ ಮಲಗಿ, ಮೂಢನಂಬಿಕೆಗಳು ಎದ್ದಿದ್ದ ಕಾಲದಲ್ಲಿ ಮಹಾನ್ ಮಾನವತಾವಾದಿಯಾಗಿ ಸಮಾಜದ ಕಣ್ಣರಳಿಸಿದ ದಾರ್ಶನಿಕ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು. ವ್ಯಕ್ತಿ ಸತ್ತರೂ ಅವರು ಸಮಾಜಕ್ಕೆ ಸಾರಿದ ಸಾಮಾಜಿಕ ಮಾನವೀಯ ಮೌಲ್ಯಗಳು ಸಾಯಬಾರದು. ಅದು ಎಂದೆಂದಿಗೂ ಜೀವಂತ ಎಂದು ನುಡಿದರು.
ಅಸ್ಪøಶ್ಯತೆ ಎಂಬ ರೋಗವನ್ನು ನಿರ್ಮೂಲನೆ ಮಾಡಲು ನಾರಾಯಣಗುರುಗಳ ಪ್ರಯತ್ನ ಅವಿರತ. ಇದಕ್ಕಾಗಿ ಇವರು ಕಂಡುಕೊಂಡ ಮಾರ್ಗ ‘ಧರ್ಮ’. ರಾಜಕೀಯ ನಂಟಿನೊಂದಿಗೆ ಅರ್ಥಹೀನವಾಗಿರುವ ಧರ್ಮ ಎಂಬ ಪದವು, ನಾರಾಯಣ ಗುರುಗಳ ಆಧ್ಯಾತ್ಮದೊಂದಿಗೆ ಸೇರಿಕೊಂಡಾಗ ಅರ್ಥಗರ್ಭಿತ ಎಂದೆನಿಸಿಕೊಳ್ಳುತ್ತದೆ. ಸಮಾಜದಲ್ಲಿ ಮೇಲು-ಕೀಳುಗಳೆಂಬ ಕಷ್ಟಕೋಟೆಗಳು ದಮನಿತರನ್ನು ಶೋಷಣೆ ಮಾಡುತ್ತಿದ್ದಾಗ ದೇವರಂತೆ ಬಂದವರು ಶ್ರೀ ನಾರಾಯಣ ಗುರುಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು ನುಡಿದರು.
ಕೇರಳದಲ್ಲಿ ಜನಿಸಿದ ಇವರು ಬಾಲ್ಯದಲ್ಲೇ ಭವಿಷ್ಯದ ಸ್ಪಷ್ಟ ನಿಲುವು ಹೊಂದಿದ್ದರು. ಆ ಕಾಲದಲ್ಲಿ ‘ಮಡಿ’ಯ ವಿರುದ್ಧ ಕ್ರಾಂತಿಯನ್ನು ಹರಡಿದವರು. ಬ್ರಿಟೀಷ್ ಅರಸೊತ್ತಿಗೆ ಅಬ್ಬರದಿಂದ ಆಳುತ್ತಿದ್ದ ಕಾಲದಲ್ಲಿ, ಮಡಿವಂತಿಕೆಗೆ ಏನೂ ಕಮ್ಮಿ ಇರಲಿಲ್ಲ. ಮೂಢನಂಬಿಕೆ, ಜಾತೀಯತೆ, ಅಸ್ಪøಶ್ಯತೆ, ದೇವದಾಸಿ ಪದ್ಧತಿ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಆಚರಣೆಗಳು ತಾಂಡವವಾಡುತ್ತಿದ್ದ ಕಾಲವದು. ಇದನ್ನೆಲ್ಲ ನೋಡಿ ಬೇಸತ್ತ ನಾರಾಯಣ ಗುರುಗಳು ಇದನ್ನು ಹಿಮ್ಮೆಟ್ಟುವಲ್ಲಿ ಮುಂದಡಿ ಇಟ್ಟರು ಎಂದು ತಿಳಿಸಿದರು.
ಸರಿಯಾದ ಸಮಯದಲ್ಲಿ ಸಂಸ್ಕøತ ಅಭ್ಯಾಸ, ಪುರಾಣ ಜ್ಞಾನ, ರಾಮಾಯಣ ಸೇರಿದಂತೆ ಧರ್ಮಗ್ರಂಥಗಳ ಜ್ಞಾನ ಗುರುಗಳಿಗೆ ದೊರೆಯಿತು. ಕೇರಳದ ಕರುನಾಗಪಳ್ಳಿಯ ಚೆರುವನ್ನಾರ್ ಮನೆತನದ ಶ್ರೀರಾಮನ್ ಆಶಾನ್ ಎಂಬ ಗುರುಗಳಲ್ಲಿ ಅಗತ್ಯ ಶಿಕ್ಷಣವೂ ಸಿಕ್ಕಿತು. ಆಧ್ಯಾತ್ಮ, ಆಯುರ್ವೇದ, ಜ್ಯೋತಿಷ್ಯ ಶಾಸ್ತ್ರ, ವೇದ ಉಪನಿಷತ್, ಕಾವ್ಯ, ನಾಟಕ, ವ್ಯಾಕರಣ, ತರ್ಕಶಾಸ್ತ್ರ ಹೀಗೆ ಸಕಲ ವಿದ್ಯೆಗಳನ್ನೂ ಕಲಿತು ಆಧ್ಯಾತ್ಮದ ಗುರುವಾದರು ಎಂದು ಲೋಕೇಶ್ ಸಾಗರ್ ಅವರು ನುಡಿದರು.
ಸಮಾಜದೊಂದಿಗೆ ಬೆರೆತು ಸಾಮಾನ್ಯನ ಬದುಕನ್ನು ಅರಿತು, ಬದುಕಿನ ಪಾಠ ಕಲಿತರು. ಸಾಮಾನ್ಯ ‘ನಾಣು’ ಎಂಬ ಬಾಲಕನಾಗಿದ್ದವರು ಬ್ರಹ್ಮ ಜ್ಞಾನವನ್ನು ಪಡೆದು, ನಾರಾಯಣ ಗುರುವಾದರು ಎಂದರು.
ಕರಾವಳಿ ಭಾಗದ ಬಿಲ್ಲವರಿಗೆ ನಾರಾಯಣ ಗುರುಗಳು ಇಂದಿಗೂ ಆರಾಧ್ಯ ದೈವ. ನಾರಾಯಣ ಗುರುಗಳ ಪ್ರಭಾವ ಕರಾವಳಿಯಲ್ಲಿ ಆಯಿತು. ಈಗ ಗಲ್ಲಿ ಗಲ್ಲಿಯಲ್ಲೂ, ಜಾತಿ ಧರ್ಮ ಮೀರಿ ಗುರುಗಳನ್ನು ಆರಾಧಿಸಲಾಗುತ್ತಿದೆ. ಇದು ಇವರ ಸಾಮಾಜಿಕ ಚಿಂತನೆಗೆ ಸಿಕ್ಕ ಮನ್ನಣೆ ಮತ್ತು ಗೌರವ ಎಂದು ಕಸಾಪ ಮಾಜಿ ಅಧ್ಯಕ್ಷರು ವಿವರಿಸಿದರು.
ಜನರಲ್ಲಿ ಸ್ವಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ ಗುರುಗಳು, ನೂರಾರು ಸಾವಿರಾರು ಜನರಿಗೆ ಶಿಕ್ಷಣ ಕೊಡಿಸಿದರು. ಎಲ್ಲ ವರ್ಗದ ಜನರು ಒಟ್ಟಿಗೆ ಕಲಿಯಬೇಕು ಎಂದು ಪ್ರೇರೇಪಿಸಿದರು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ಸೇವಾ ಟ್ರಸ್ಟ್, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ತೆರೆದರು. ದೇವಸ್ಥಾನಗಳಿಗೂ ಎಲ್ಲಾ ಜಾತಿ ಹಾಗೂ ವರ್ಗದ ಜನರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಅಂದರೆ ಜಾತಿ ಧರ್ಮವನ್ನು ಬದಿಗಿಟ್ಟು, ಗುರುಗಳು ಎಲ್ಲರನ್ನೂ ಒಂದಾಗಿ ಕಂಡರು. ಆ ಮೂಲಕ ಜನರು ಕೂಡಾ ಎಲ್ಲರನ್ನು ಒಂದಾಗಿ ಕಾಣುವಂತೆ ಸ್ಫೂರ್ತಿ ತುಂಬಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷರಾದ ರಘು ಆನಂದ ಅವರು ಮಾತನಾಡಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳು ಯಾವುದೇ ಸಮುದಾಯಕ್ಕೆ ಮೀಸಲಿರದೆ ವಿಶ್ವಕ್ಕೆ ಹಿಂದೂ ಸಮಾಜದ ಸಂದೇಶ ಸಾರಿದವರು. ಕೆಳವರ್ಗದ ಸಮುದಾಯದ ಜನಾಂಗದ ಪ್ರಧಾನ ಸ್ಥಾನ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ವೇದಿಕೆಯಲ್ಲಿ ಟಿ.ಕೆ.ಪಾಂಡುರಂಗ, ಬಾಲಕೃಷ್ಣ, ಲೀಲಾವತಿ, ಆನಂದ, ಬಾಲಕೃಷ್ಣ ಮದೆ, ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವಿದ್ವಾನ್ ಬಿ.ಸಿ.ಶಂಕರಯ್ಯ ಅವರು ನಾಡಗೀತೆ ಹಾಡಿದರು. ಕನ್ನಡ ಮತ್ತ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಸ್ವಾಗತಿಸಿದರು. ಮಣಜೂರು ಮಂಜುನಾಥ ನಿರೂಪಿಸಿ, ವಂದಿಸಿದರು.
Share This Article
error: Content is protected !!
";